ಕಲಬುರಗಿ,ಜೂ.1- ಕೆಆರ್‌ಐಡಿಎಲ್ ನಿಗಮದಿಂದ ಗುತ್ತಿಗೆ ಕಾಮಗಾರಿಗೆ ಹಣ ಬಂದಿಲ್ಲ ಎಂದು ಗುತ್ತಿಗೆದಾರರು ಆತಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಕಡಿಮೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃತಪಟ್ಟ ವ್ಯಕ್ತಿಯ ಮರಣಪತ್ರದಲ್ಲಿ ಕೌಟುಂಬಿಕ ಸಮಸ್ಯೆಯಿದೆ. ಹಲವು ಕಡೆ ಸಾಲ ಮಾಡಿಕೊಂಡಿದ್ದೇನೆ ಎಂದು ನಾನಾ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. 5 ನೇ ಅಂಶದಲ್ಲಿ ಕೆಆರ್‌ಐಡಿಎಲ್‌ನಿಂದ ಕಾಮಗಾರಿ ಗುತ್ತಿಗೆ ಪಡೆದು ಕೆಲಸ ಮಾಡಿದ್ದು, ಬಿಲ್ ಪಾವತಿಯಾಗದೆ ಸತಾಯಿಸುತ್ತಿದ್ದಾರೆ. ನನ್ನ ಸಾವಿನ ಬಳಿಕ ಕೆಆರ್‌ಐಡಿಎಲ್‌ನಿಂದ ದೊಡ್ಡ ಮೊತ್ತದ ಪರಿಹಾರ ಪಡೆದುಕೊಳ್ಳಿ ಎಂದು ಬರೆದಿದ್ದಾರೆ ಎಂದರು.
ಕೆಆರ್‌ಐಡಿಎಲ್ ಎಂಜಿನಿಯರಿಂಗ್ ಸಂಸ್ಥೆಯಾಗಿದ್ದು, ಕಾಮಗಾರಿಗಳನ್ನು ಖುದ್ದು ನಿರ್ವಹಣೆ ಮಾಡಲಿದೆ. ಉಪಗುತ್ತಿಗೆ ನೀಡಲು ಅವಕಾಶವಿಲ್ಲ. ಚನ್ನಗಿರಿಯಲ್ಲಿ ನಡೆದಿರುವ ರಸ್ತೆ ಕಾಮಗಾರಿಯನ್ನು ನೋಡಿದರೆ ಅಲ್ಲಿ ಆಗಿನ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಆದೇಶದ ಮೇಲೆ ನಡೆದಿರುವ ಕೆಲಸ ಎಂದು ರಸ್ತೆಗಿಂತಲೂ ದೊಡ್ಡದಾಗಿ ಫಲಕ ಹಾಕಲಾಗಿದೆ. ಯಾವುದೇ ಅನುಮೋದನೆ ಇಲ್ಲದೆ ಕಾಮಗಾರಿ ನಡೆದಿರುವ ಸಾಧ್ಯತೆಯಿದೆ. ಅಧಿಕಾರಿಗಳ ತನಿಖಾ ವರದಿ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ 371 ಜೆ ವಿಶೇಷ ಮಾನ್ಯತೆ ಬಗ್ಗೆ ರಾಜ್ಯದ ಇತರ ಭಾಗಗಳ ಜನ ಅಸಹನೆ ತೋರಿಸಬಾರದು. ನಿಜಾಮರ ಆಡಳಿತದಲ್ಲಿದ್ದ ಪ್ರದೇಶಗಳ ಪೈಕಿ ತೆಲಂಗಾಣ, ಮರಾಠವಾಡ ಸೇರಿದಂತೆ ಹಲವು ಭಾಗಗಳಲ್ಲಿ ಅಭಿವೃದ್ಧಿ ಕುಂಠಿತವಾಗಿರುವ ಐತಿಹಾಸಿಕ ಕಾರಣಕ್ಕೆ ವಿಶೇಷ ಸ್ಥಾನಮಾನ ದೊರೆತಿದೆ. ಎ ಯಿಂದ ಜೆ ವರೆಗೂ ಹಲವು ಭಾಗಗಳು ಸೌಲಭ್ಯ ಪಡೆದಿವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ತಡವಾಗಿ ಅವಕಾಶ ಸಿಕ್ಕಿದೆ ಎಂದು ಹೇಳಿದರು.
ಈ ಹಿಂದೆ ಸಚಿವರಾಗಿದ್ದ ಶ್ರೀರಾಮಲು ಉಪಸಮಿತಿ ಅಧ್ಯಕ್ಷರಾಗಿ ಹೊರಡಿಸಿದ್ದ ಹಲವು ಆದೇಶಗಳು ದೋಷಪೂರಿತವಾಗಿದ್ದವು, ಅವುಗಳನ್ನು ನಾವು ಸರಿಪಡಿಸಿದ್ದೇವೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಪಕ್ಷದ ಜಾಹೀರಾತಿನ ಕಾರಣಕ್ಕೆ ಬಿಜೆಪಿಯವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ನಾವು ಅದನ್ನು ಕಾನೂನಾತಕವಾಗಿಯೇ ಎದುರಿಸಿದ್ದೇವೆ. ರಾಹುಲ್‌ಗಾಂಧಿ ಇಂದು ದೆಹಲಿಯಲ್ಲಿ ನಡೆಯುವ ಇಂಡಿಯಾ ರಾಜಕೀಯ ಕೂಟದ ಸಭೆಯಲ್ಲಿ ಭಾಗವಹಿಸಿರುವ ಕಾರಣಕ್ಕೆ ಖುದ್ದು ಹಾಜರಾಗಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ನ್ಯಾಯಾಲಯಕ್ಕೆ ಬರುತ್ತಾರೆ ಎಂದು ತಿಳಿಸಿದರು.
ಬಿಜೆಪಿಯವರು ಮಾಡುವ ಯಾವ ಆರೋಪಗಳಿಗೂ ಸಾಕ್ಷ್ಯ ಪುರಾವೆಗಳನ್ನು ನೀಡುವುದಿಲ್ಲ. ಈ ಹಿಂದೆ ನಾವು ಮಾಡಿದ್ದ ಪ್ರತೀ ಟೀಕೆಗೂ ಸಾಕ್ಷ್ಯ ನೀಡಿದ್ದೇವೆ. ಸರ್ಕಾರ ರಚನೆಯಾದ ಬಳಿಕ ತನಿಖೆ ನಡೆಯುತ್ತಿದೆ. ವಾಲೀಕಿ ಅಭಿವೃದ್ಧಿ ನಿಗಮದಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವಶ್ಯಕತೆ ಬಿದ್ದರೆ ಸಿಬಿಐ, ಎನ್‌ಐ ಸೇರಿದಂತೆ ಯಾವುದೇ ತನಿಖೆಗಾದರೂ ಸರ್ಕಾರ ಸಿದ್ಧವಿದೆ. ಸದ್ಯಕ್ಕೆ ವಿಶೇಷ ತನಿಖಾ ದಳ ರಚನೆ ಮಾಡಿದ್ದು, ಅದರ ವರದಿಗಾಗಿ ಕಾಯುತ್ತಿದ್ದೇವೆ ಎಂದರು.
ಬಿಜೆಪಿಯವರು ಪ್ರತೀ ವಿಚಾರಕ್ಕೂ ಸಚಿವರ ರಾಜೀನಾಮೆ ಕೇಳುತ್ತಾರೆ. ಹಾಗೆ ನೋಡಿದರೆ ಈ ಹಿಂದೆ ಬಿಜೆಪಿಯಲ್ಲಾದ ಅವ್ಯವಹಾರಗಳಿಗೆ ಯಾರಾದರೂ ರಾಜೀನಾಮೆ ಕೊಟ್ಟಿದ್ದರೇ? ದೊಡ್ಡದಾಗಿ ಮಾತನಾಡುವ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ನೈತಿಕ ಹೊಣೆ ಹೊತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರಲಿಲ್ಲ ಎಂದು ತಿರುಗೇಟು ನೀಡಿದರು.
ಈ ಹಿಂದೆ ಬಿಜೆಪಿ ಸರ್ಕಾರ ದೆಹಲಿಯ ವರಿಷ್ಠರಿಗೆ ಎಟಿಎಂನಂತೆ ಬಳಕೆಯಾಗಿತ್ತು. ಅದೇ ಅನುಭವದ ಆಧಾರದ ಮೇಲೆ ಕಾಂಗ್ರೆಸ್ ಸರ್ಕಾರವೂ ಏರಿಕೆ ಮಾಡಿರಬಹುದು ಎಂದು ಹೇಳಿದ್ದಾರೆ. ಆದರೆ ನಮಲ್ಲಿ ಆ ಪದ್ಧತಿ ಇಲ್ಲ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಾಯಿಯನ್ನು ನೋಡಲು ಹೋದರೂ ಕ್ಯಾಮೆರಾಮನ್‌ಗಳನ್ನು ಕರೆದುಕೊಂಡು ಹೋಗುತ್ತಾರೆ, ಧ್ಯಾನಕ್ಕೆ ಕುಳಿತರೆ ನಾಲ್ಕು ಬಾರಿ ಬಟ್ಟೆ ಬದಲಾಯಿಸುತ್ತಾರೆ, ಐದು ಪೀಠಗಳು ಬದಲಾಗುತ್ತವೆ, ಕನಿಷ್ಠ 10-12 ಕ್ಯಾಮರಾಗಳು ಫೋಟೋಶೂಟ್ ಮಾಡಿವೆ, ಭಕ್ತಿ ಎಂಬುದು ಖಾಸಗಿ ವಿಚಾರ. ಆದರೆ ನರೇಂದ್ರ ಮೋದಿ ಪ್ರಧಾನಮಂತ್ರಿ ಅಲ್ಲ, ಪ್ರಚಾರ ಮಂತ್ರಿ. ಹಾಗಾಗಿ ಪ್ರತಿಯೊಂದಕ್ಕೂ ಫೋಟೊಶೂಟ್‌ಗಳಾಗುತ್ತವೆ ಎಂದು ಲೇವಡಿ ಮಾಡಿದರು.
ರಾಹುಲ್‌ಗಾಂಧಿಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿರುವ ಹೇಳಿಕೆ ಸಮರ್ಥನೀಯ. ದೇಶದ ಯಾವ ವ್ಯಕ್ತಿಯೂ ಕನ್ಯಾಕುಮಾರಿಯಿಂದ ಕಾಶೀರ, ಈಶಾನ್ಯ ರಾಜ್ಯದಿಂದ ಗುಜರಾತ್‌ವರೆಗೂ ಪ್ರವಾಸ ಮಾಡಿಲ್ಲ. ರಾಹುಲ್‌ಗಾಂಧಿ ಭಾರತ್ ಜೋಡೊ ಯಾತ್ರೆ ಮೂಲಕ ಈ ಪ್ರವಾಸ ಮಾಡಿದ್ದಾರೆ ಎಂದು ಹೇಳಿದರು.