Wednesday, April 24, 2024
Homeಇದೀಗ ಬಂದ ಸುದ್ದಿಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವನಾರು..? ಹೇಗೆ ತಪ್ಪಿಸಿಕೊಂಡ..? : ಸರ್ಕಾರದ ಸುತ್ತ ಹಲವು ಅನುಮಾನಗಳ ಹುತ್ತ

ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವನಾರು..? ಹೇಗೆ ತಪ್ಪಿಸಿಕೊಂಡ..? : ಸರ್ಕಾರದ ಸುತ್ತ ಹಲವು ಅನುಮಾನಗಳ ಹುತ್ತ

ಬೆಂಗಳೂರು,ಫೆ.28- ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ಬಿಜೆಪಿ ಶರವೇಗದಲ್ಲಿ ರಾಜಕೀಯ ಮಾಡುತ್ತಿದ್ದರೆ, ಕಾಂಗ್ರೆಸ್ ಅನುಸರಿಸುತ್ತಿರುವ ನಿಧಾನಗತಿಯ ಧೋರಣೆಗಳು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ನಿನ್ನೆ ಸಂಜೆ ರಾಜ್ಯಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್‍ನ ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ ಅವರ ಸಂಭ್ರಮಾಚರಣೆ ವೇಳೆ ಕೆಲವು ವ್ಯಕ್ತಿಗಳು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ ಎಂದು ದೂರಲಾಗಿದೆ.

ಅದರ ಬೆನ್ನಲ್ಲೇ ಮುಖ್ಯಮಂತ್ರಿಯವರ ಅಧಿಕೃತ ಮೂಲಗಳಿಂದ ಮತ್ತೊಂದು ವಿಡಿಯೋವನ್ನು ಬಹಿರಂಗಗೊಳಿಸಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿಲ್ಲ, ನಾಸಿರ್ ಸಾಬ್ ಜಿಂದಾಬಾದ್ ಎಂದು ಘೋಷಣೆ ಕೂಗಲಾಗಿದೆ ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆದಿದೆ. ಆದರೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಬಿಜೆಪಿ ಪಾದರಸದಂತೆ ಚುರುಕಾಗಿದ್ದು, ರೇಸ್‍ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದೆ. ತಡರಾತ್ರಿಯವರೆಗೂ ವಿಧಾನಸೌಧದ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದೆ. ಪೊಲೀಸರಿಗೆ ದೂರು ನೀಡಿದೆ.

ಇಂದು ಬೆಳಿಗ್ಗೆ ಶಾಸಕರ ಭವನದಿಂದ ವಿಧಾನಸೌಧದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ನಾನಾರೀತಿಯ ಚಟುವಟಿಕೆಗಳ ಮೂಲಕ ವಿವಾದಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ಘಟನೆ ಕುರಿತು ಆರೋಪ ಕೇಳಿ ಬಂದ ತಕ್ಷಣವೇ ನಾಸಿರ್ ಹುಸೇನ್ ಅವರ ಪ್ರತಿಕ್ರಿಯೆ ವಿವಾದಕ್ಕೀಡಾಗುವ ಮೂಲಕ ಆರಂಭದಲ್ಲೇ ಕಾಂಗ್ರೆಸ್ ಪ್ರಕರಣವನ್ನು ನಿಭಾಯಿಸುವಲ್ಲಿ ಎಡವಟ್ಟು ಮಾಡಿಕೊಂಡಿದೆ. ಲೋಕಸಭೆ ಚುನಾವಣೆಯ ಸಂದರ್ಭವಾಗಿರುವುದರಿಂದ ಅತ್ಯಂತ ಸೂಕ್ಷ್ಮವಾಗಿ ಪ್ರಕರಣ ನಿಭಾಯಿಸಬಹುದಾಗಿದ್ದರೂ ಎಲ್ಲಾ ಅವಕಾಶಗಳನ್ನೂ ಕೈಚೆಲ್ಲಿರುವ ಸರ್ಕಾರ ವಿರೋಧಪಕ್ಷಗಳಿಗೆ ಘೋಷಣೆಯ ಅಸ್ತ್ರ ಕೊಟ್ಟಿದೆ.

ಶಕ್ತಿ ಕೇಂದ್ರ ವಿಧಾನಸೌಧ ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮ ಭದ್ರತಾ ವಲಯ. ವಿಧಾನಸೌಧ ಪ್ರವೇಶಿಸಬೇಕಾದರೆ ನಾನಾ ರೀತಿಯ ತಪಾಸಣೆಗಳಿರುತ್ತವೆ. ಸೂಕ್ತ ದಾಖಲೆ ಪತ್ರಗಳು ಹಾಗೂ ಪರಿಚಯ ಪತ್ರಗಳು ಇಲ್ಲದೇ ಇದ್ದರೆ ವಿಧಾನಸೌಧದ ಒಳಗೆ ಬರಲು ಕಷ್ಟಸಾಧ್ಯ. ಹೀಗಿದ್ದರೂ ನಾಸಿರ್ ಹುಸೇನ್ ಅವರ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದವರು ಯಾರು ಎಂದು ಪತ್ತೆ ಹಚ್ಚಲು 15 ಘಂಟೆ ಕಳೆದರೂ ಸಾಧ್ಯವಾಗದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

ನಿನ್ನೆ ರಾಜ್ಯಸಭಾ ಚುನಾವಣೆಯಾಗಿದ್ದ ರಿಂದಾಗಿ ವಿಧಾನಸೌಧದಲ್ಲಿ ವ್ಯಾಪಕ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸಿಬ್ಬಂದಿಗಳು ಹೆಜ್ಜೆ ಹೆಜ್ಜೆಗೂ ನಿಗಾ ವಹಿಸಿದ್ದರು. ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದೇ ಆಗಿದ್ದರೆ ತಕ್ಷಣವೇ ಆರೋಪಿಗಳನ್ನು ಪೊಲೀಸರು ಏಕೆ ವಶಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ. ಘೋಷಣೆ ಕೂಗಿರುವುದರಲ್ಲಿ ಗೊಂದಲ ಇದೆ ಎಂಬ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಸರ್ಕಾರ ಮಾತನಾಡುತ್ತಿದೆ. ಈ ಹಿಂದೆ ಫ್ರೀಡಂ ಪಾರ್ಕ್‍ನಲ್ಲಿ ಯುವತಿಯೊಬ್ಬರು ಪಾಕಿಸ್ತಾನದ ಪರ ಘೋಷಣೆ ಕೂಗಿದ ಕಾರಣಕ್ಕಾಗಿ ತಕ್ಷಣವೇ ಬಂಧನಕ್ಕೊಳಗಾಗಿದ್ದರು. ಅದೇ ರೀತಿ ನಿನ್ನೆ ಪೊಲೀಸರು ಚುರುಕಾಗಿ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆ ಕಾಡಲಾರಂಭಿಸಿವೆ.

ಒಂದು ವೇಳೆ ವಿವಾದಾಸ್ಪದ ಘೋಷಣೆ ಕೂಗಿದ ಬಳಿಕ ಆರೋಪಿಯು ತಪ್ಪಿಸಿಕೊಂಡು ಪರಾರಿಯಾದರು ಎಂಬುದೇ ಆಗಿದ್ದರೆ ವಿಧಾನಸೌಧದಿಂದ ಹೊರಹೋಗುವ ಎಲ್ಲಾ ದಿಕ್ಕುಗಳಲ್ಲೂ ಸಿಸಿಟಿವಿ ಕ್ಯಾಮರಾಗಳಿವೆ. ಶಂಕಿತರು ವಾಹನದಲ್ಲಿ ಬಂದಿದ್ದರೇ? ನಡೆದುಕೊಂಡು ಬಂದಿದ್ದರೇ? ಎಂಬೆಲ್ಲಾ ಮಾಹಿತಿಗಳನ್ನು ಕ್ಷಣಾರ್ಧದಲ್ಲಿ ಪಡೆಯಲು ಅವಕಾಶಗಳಿವೆ. ಹಾಗಿದ್ದರೂ ನಿನ್ನೆ ಸಂಜೆಯಿಂದ ಇಂದು ಬೆಳಗಿನವರೆಗೂ ಪೊಲೀಸರು ವಿಳಂಬ ಮಾಡಿದ್ದೇಕೆ ಎಂಬ ಪ್ರಶ್ನೆಗಳು ಮೂಡಿವೆ.

ರಾಜಕೀಯವಾಗಿಯಷ್ಟೇ ಅಲ್ಲದೆ ಸಾಮಾಜಿಕವಾಗಿಯೂ ವಿವಾದಿತ ಘೋಷಣೆ ಅಪಾಯಕಾರಿ ಪರಿಣಾಮ ಬೀರುತ್ತದೆ. ಇಂತಹ ಸೂಕ್ಷ್ಮತೆಯ ಅರಿವಿದ್ದರೂ ಕೂಡ ಆಡಳಿತ ಯಂತ್ರ ಎಡವಿದ್ದೇಕೆ? ಇದರ ಹಿಂದೆ ರಾಜಕೀಯ ಒತ್ತಡಗಳಿವೆಯೇ ಎಂಬ ಅನುಮಾನಗಳು ಮೂಡಿಬರುತ್ತಿವೆ.

RELATED ARTICLES

Latest News