Monday, May 6, 2024
Homeರಾಜ್ಯಪಿಎಸ್‍ಐ-ಸಿಟಿಐ ಪ್ರಶ್ನೆ ಪತ್ರಿಕೆ ಸೋರಿಕೆ, ಅಭ್ಯರ್ಥಿಗಳ ಆತಂಕ

ಪಿಎಸ್‍ಐ-ಸಿಟಿಐ ಪ್ರಶ್ನೆ ಪತ್ರಿಕೆ ಸೋರಿಕೆ, ಅಭ್ಯರ್ಥಿಗಳ ಆತಂಕ

ಬೆಂಗಳೂರು,ಜ.20- ಪಿಎಸ್‍ಐ ಮತ್ತು ಸಿಟಿಐ ಪರೀಕ್ಷೆ ಹೊತ್ತಿನಲ್ಲೇ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮದ ಸುಳಿವು ಅಭ್ಯರ್ಥಿಗಳನ್ನು ಆತಂಕಕ್ಕೀಡು ಮಾಡಿದ್ದು, ಸಚಿವರಿಬ್ಬರ ಭಿನ್ನ ಹೇಳಿಕೆಗಳು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ವಾಣಿಜ್ಯ ತೆರಿಗೆ ನಿರೀಕ್ಷಕರ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಇಂದು ಮತ್ತು ನಾಳೆ ಪರೀಕ್ಷೆ ನಡೆಸುತ್ತಿದೆ. ಗೃಹ ಇಲಾಖೆಯ 545 ಪಿಎಸ್‍ಐ ಹುದ್ದೆಗಳಿಗೆ ಜ.23 ರಂದು ಬೆಂಗಳೂರಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ನಡೆಸಲಿದೆ. ಈ ನಡುವೆ ಗುಪ್ತಚರ ಇಲಾಖೆಯ ಪಿಎಸ್‍ಐ ಲಿಂಗಯ್ಯ ಎಂಬುವರು ಪಿಎಸ್‍ಐ ಹುದ್ದೆಗಳ ಆಕಾಂಕ್ಷಿಯೊಂದಿಗೆ ನಡೆಸಿರುವ ವಾಟ್ಸ್‍ಆ್ಯಪ್ ಚರ್ಚೆ ಮತ್ತು ದೂರವಾಣಿ ಸಂಭಾಷಣೆ ಅನುಮಾನಗಳನ್ನು ಹುಟ್ಟುಹಾಕಿದೆ.

ವಾಟ್ಸ್‍ಆ್ಯಪ್ ಚರ್ಚೆಯಲ್ಲಿ ಅಭ್ಯರ್ಥಿಗಳಿಗೆ ಕೆಲಸ ಕೊಡಿಸುವುದು ಖಚಿತ ಎಂಬ ಭರವಸೆ ನೀಡಿರುವುದು ಕಂಡುಬರುತ್ತಿದ್ದು, ಹಣ ಹೊಂದಾಣಿಕೆ ಮಾಡಿಕೊಳ್ಳುವಂತೆ ಹಾಗೂ ಖುದ್ದು ಭೇಟಿ ಮಾಡುವಂತೆ ಸಲಹೆ ನೀಡಿರುವುದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ದೂರವಾಣಿ ಸಂಭಾಷಣೆಯಲ್ಲಿ ಪಿಎಸ್‍ಐ ಹುದ್ದೆಗಳ ದರ ನಿಗದಿ ಬಗ್ಗೆ ಚರ್ಚೆಯಾಗಿದೆ. ಹಣ ಕೊಟ್ಟವರಿಗೆ ವಿಶೇಷವಾಗಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡುವುದು ಮತ್ತು ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆಯನ್ನು ತಲುಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಲಿಂಗಯ್ಯ ಅವರದು ಎಂದು ಹೇಳಲಾದ ವಾಟ್ಸ್‍ಆ್ಯಪ್ ಚರ್ಚೆ ಮತ್ತು ಆಡಿಯೋ ಹೊರಬರುತ್ತಿದ್ದಂತೆ ಪಿಎಸ್‍ಐ ಹುದ್ದೆಯ ಆಕಾಂಕ್ಷಿಗಳು ಚಂದ್ರ ಲೇ ಔಟ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ದೂರು ನೀಡಿದ್ದಾರೆ. ಈ ಪ್ರಕರಣವನ್ನು ತನಿಖೆಗೆ ಸಿಸಿಬಿಗೆ ವಹಿಸಿದ್ದು, ಸಿಸಿಬಿ ಪೊಲೀಸರು ಲಿಂಗಯ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇಂದು ಬೆಳಿಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಎಸ್‍ಐ ಹಗರಣ ನಡೆದಾಗ ಅದರ ಕುರಿತು ಸರಣಿ ಆರೋಪಗಳನ್ನು ಮಾಡಿ ದಾಖಲಾತಿ ಬಿಡುಗಡೆ ಮಾಡಿ ಪ್ರಿಯಾಂಕ್ ಖರ್ಗೆ ಗಮನ ಸೆಳೆದಿದ್ದರು. ಅದರಲ್ಲೂ ಗುಲ್ಬರ್ಗ ಜಿಲ್ಲೆಯಲ್ಲೇ ಪಿಎಸ್‍ಐ ಅಕ್ರಮ ನಡೆಸಿದವರ ಕೇಂದ್ರ ಸ್ಥಾನ ಪತ್ತೆಯಾಗಿದ್ದು, ಮಹತ್ವ ಪಡೆದುಕೊಂಡಿತ್ತು.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ನಕಲಿ ಪಾಸ್‍ಪೋರ್ಟ್, ವೀಸಾ ತಯಾರಕ

ಇತ್ತೀಚೆಗೆ ಕೆಇಎ ನಡೆಸಿದ ಪರೀಕ್ಷೆಯೊಂದರಲ್ಲಿ ಗುಲ್ಬರ್ಗದಲ್ಲೇ ನಕಲು ಮಾಡಿದ್ದ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಪಿಎಸ್‍ಐ ಮತ್ತು ಸಿಟಿಐ ಪರೀಕ್ಷೆಯ ಸಂದರ್ಭದಲ್ಲೇ ಮತ್ತೊಮ್ಮೆ ಹಗರಣದ ಆರೋಪಗಳು ಎದುರಾಗಿದ್ದರಿಂದ ಇಂದು ಬೆಳಿಗ್ಗೆ ಇಬ್ಬರು ಸಚಿವರು ಪರಸ್ಪರ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಲಿಂಗಯ್ಯ ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಪರೀಕ್ಷಾ ಅಕ್ರಮಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಮಾಹಿತಿ ಕಲೆ ಹಾಕುವ ಸಲುವಾಗಿ ಅಣಕು ಕರೆ ಮಾಡಿರುವುದಾಗಿ ಹೇಳುತ್ತಿದ್ದಾರೆ. ಆದರೂ ಸಿಸಿಬಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಪ್ರತ್ಯೇಕವಾಗಿ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ, ಈ ಹಿಂದೆ ನಡೆದ ಅಕ್ರಮಗಳ ಹಿನ್ನೆಲೆಯಲ್ಲಿ ಮುಂದೆ ಅಂತಹುದು ಮರುಕಳಿಸಬಾರದು ಎಂಬ ಕಾರಣಕ್ಕೆ ಸರ್ಕಾರ ಹಲವು ಕಠಿಣ ಕ್ರಮ ಕೈಗೊಂಡಿದೆ. ಆದರೂ ಕೆಲವು ಅಧಿಕಾರಿಗಳು ತಮ್ಮ ಛಾಳಿ ಬದಲಿಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವರಿಬ್ಬರ ಭಿನ್ನ ಹೇಳಿಕೆಗಳು ಗೊಂದಲ ಮೂಡಿಸಿವೆ. ಪಿಎಸ್‍ಐ ನೇಮಕಾತಿಯ ಅಕ್ರಮದ ವಿಚಾರವಾಗಿ ಪ್ರಿಯಾಂಕ್‍ಖರ್ಗೆ ಮತ್ತು ಪರಮೇಶ್ವರ್ ಪರಸ್ಪರ ಚರ್ಚೆ ಮಾಡಿದ ಬಳಿಕ, ಒಬ್ಬರು ಅಣಕು ಕರೆ ಎಂದರೆ, ಮತ್ತೊಬ್ಬರು ಅಧಿಕಾರಿಗಳ ಹಳೇ ಛಾಳಿ ಬಿಡುತ್ತಿಲ್ಲ ಎಂದು ದೂರಿದ್ದಾರೆ. ಇದು ಪರೀಕ್ಷೆಯಲ್ಲಿ ಮತ್ತೆ ಎಡವಟ್ಟುಗಳಾಗುತ್ತಿರುವ ಸುಳಿವು ನೀಡಿದಂತಾಗಿದೆ.

ಈ ನಡುವೆ ಕೆಪಿಎಸ್‍ಸಿ ನಡೆಸುತ್ತಿರುವ ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿಲ್ಲ. ಅನಗತ್ಯವಾಗಿ ಗೊಂದಲ ಮೂಡಿಸುವವರು ಇಂತಹ ವದಂತಿಗಳನ್ನು ಹರಿಯಬಿಡುತ್ತಾರೆ ಎಂಬ ಸಮರ್ಥನೆಗಳು ಕೇಳಿಬಂದಿವೆ. ಆದರೂ ಪರೀಕ್ಷಾರ್ಥಿಗಳಲ್ಲಿ ಅನುಮಾನಗಳು ಸಂಪೂರ್ಣ ನಿವಾರಣೆಯಾಗುತ್ತಿಲ್ಲ.

RELATED ARTICLES

Latest News