Saturday, May 4, 2024
Homeರಾಜಕೀಯರಾಹುಲ್ ಎಲ್ಲೆಲ್ಲಿ ಪ್ರವಾಸ ಮಾಡಿದ್ದಾರೋ ಅಲ್ಲಿ ಕಾಂಗ್ರೆಸ್ ಸೋತಿದೆ : ಆರ್.ಅಶೋಕ್

ರಾಹುಲ್ ಎಲ್ಲೆಲ್ಲಿ ಪ್ರವಾಸ ಮಾಡಿದ್ದಾರೋ ಅಲ್ಲಿ ಕಾಂಗ್ರೆಸ್ ಸೋತಿದೆ : ಆರ್.ಅಶೋಕ್

ಬೆಂಗಳೂರು,ಜ.14-ರಾಹುಲ್ ಗಾಂಧಿ ಎಲ್ಲೆಲ್ಲಿ ಪ್ರವಾಸ ಮಾಡಿದ್ದಾರೋ ಅಲ್ಲಲ್ಲಿ ಕಾಂಗ್ರೆಸ್ ಸೋತಿದೆ. ಆದ್ದರಿಂದ ಭಾರತ್ ನ್ಯಾಯ ಯಾತ್ರೆಗೆ ಮೂರು ಕಾಸಿನ ಬೆಲೆ ಇಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಮತ್ತು ಸಂವಿಧಾನ ಉಳಿಸುತ್ತೇನೆ ಎಂದು ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ ನ್ಯಾಯ ಯಾತ್ರೆ ಚುನಾವಣಾ ಗಿಮಿಕ್ ಅಲ್ಲದೆ ಬೇರೇನೂ ಅಲ್ಲ. ನರೇಂದ್ರಮೋದಿ ಅವರು ಮತ್ತೊಮ್ಮೆ ಲೋಕಸಭೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುತ್ತಾರೆಂಬ ಭಯದಿಂದ ಯಾತ್ರೆ ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಹಿಂದೆ ಭಾರತ್ ಜೋಡೊ ಯಾತ್ರೆಯನ್ನು ರಾಹುಲ್ ಗಾಂಧಿ ಅವರು ದಕ್ಷಿಣ ಭಾರತದಲ್ಲಿ ನಡೆಸಿದಾಗ ತೆಲಂಗಾಣ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು ಎಂದು ಆ ಪಕ್ಷದ ಮುಖಂಡರು ಹೇಳುತ್ತಾರೆ. ಅದೇ ರೀತಿ ಉತ್ತರ ಭಾರತದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಘಡದಲ್ಲಿ ಕಾಂಗ್ರೆಸ್‍ಗೆ ಸೋಲಾಯಿತು. ಅದಕ್ಕೆ ರಾಹುಲ್ ಗಾಂಧಿಯನ್ನು ಹೊಣೆ ಮಾಡುತ್ತಾರಾ ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ಯಾತ್ರೆ ಮಾಡುವುದರಿಂದ ನಮಗೆ ಯಾವುದೇ ತೊಂದರೆ ಇಲ್ಲ. ಅವರು ಎಷ್ಟು ಯಾತ್ರೆ ಮಾಡುತ್ತಾರೋ ಅಷ್ಟು ಕಾಂಗ್ರೆಸ್ ಪಾತಾಳಕ್ಕೆ ಕುಸಿಯುತ್ತದೆ. ಇದು ಬಿಜೆಪಿಗೆ ಇನ್ನಷ್ಟು ಬಲ ತರಲಿದೆ ಎಂದು ಹೇಳಿದರು. ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ದೇಶದಲ್ಲಿ ಸರ್ವಾಧಿಕಾರವನ್ನು ಜಾರಿಗೆ ತಂದವರು ಸಾಂವಿಧಾನಿಕ ಹಕ್ಕುಗಳನ್ನೇ ಕಿತ್ತುಕೊಂಡವರು ಇಂದು ಸಂವಿಧಾನ ಉಳಿಸುತ್ತೇನೆ ಎಂದು ಹೊರಟಿರುವುದು ಆ ಪಕ್ಷದ ದುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಪಕ್ಷಿ ಪ್ರಭೇದ ರಕ್ಷಣೆಗಾಗಿ ಜಾರ್ಖಾಂಡ್‍ನಲ್ಲಿ ವಲ್ಚರ್ ರೆಸ್ಟೋರೆಂಟ್ ಆರಂಭ

ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಸೇರಿದಂತೆ ಪತ್ರಿಕಾ ರಂಗವನ್ನು ಧಮನ ಮಾಡಿದವರು ನ್ಯಾಯ ಯಾಕೆ ಕೇಳುತ್ತಿದ್ದಾರೆ. ಅಷ್ಟಕ್ಕೂ ನ್ಯಾಯ ಕೇಳಲು ಅವರಿಗೆ ಏನು ಅಧಿಕಾರವಿದೆ ಎಂದು ಅಶೋಕ್ ಪ್ರಶ್ನೆ ಮಾಡಿದರು. ಭಾರತ ನ್ಯಾಯ ಯಾತ್ರೆ ಒಂದು ರೀತಿ ಡೋಂಗಿ ಯಾತ್ರೆಯಾಗಿದೆ. ಸದ್ದುದ್ದೇಶದಿಂದ ಮಾಡಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಮೋದಿ ಗೆಲ್ಲುತ್ತಾರೆಂಬ ಭಯದಿಂದ ಯಾತ್ರೆ ಪ್ರಾರಂಭವಾಗಿದೆ. ದೇಶದ ಜನತೆ ಇದಕ್ಕೆ ಸೊಪ್ಪು ಹಾಕುವುದಿಲ್ಲ. ಮೋದಿಯನ್ನು ಗೆಲ್ಲಿಸಲು ಇಡೀ ದೇಶದ ಜನತೆ ತುದಿಗಾಲಲ್ಲಿ ನಿಂತಿದ್ದಾರೆ. ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಯಾತ್ರೆ ಹೊರಟಿದ್ದಾರೆ ಎಂದು ಕುಹುಕವಾಡಿದರು.

ಸಿದ್ಧರಾಮಯ್ಯನವರದ್ದು ಸಂತೆ ಭಾಷಣ. ರಾಮಮಂದಿರ ಪ್ರಶ್ನೆ ಮಾಡುವ ಸಿದ್ಧರಾಮಯ್ಯನವರು ಮಸೀದಿಗೆ ಯಾಕೆ ಹೋಗ್ತಾರೆ? ಟೋಪಿ ಯಾಕೆ ಹಾಕ್ತಾರೆ? ಮನೆಯಲ್ಲೇ ಮಸೀದಿ ಪೂಜೆ ಮಾಡಬಹುದು ಅಲ್ಲವೇ? ಸಿದ್ಧರಾಮಯ್ಯನವರು ಹಿಂದು ಅಂತಾರೆ, ಆದರೆ ಅದರಲ್ಲಿ ಡೋಂಗಿ ಅಡಗಿದೆ ಎಂದು ವ್ಯಂಗ್ಯವಾಡಿದರು.

ರೈತರು ಬರಗಾಲದಿಂದ ಸಾಯುತ್ತಿದ್ದಾರೆ. ಇವರಿಗೆ ಜ್ಞಾನ ಇದೆಯಾ? ರೈತರಿಗೆ 100 ಕೋಟಿ, ಮೌಲ್ವಿಗಳಿಗೆ 10,000 ಸಾವಿರ ಕೋಟಿ. ಇದು ನ್ಯಾಯನಾ? ರೈತರ ಕಣ್ಣಿಗೆ ಸುಣ್ಣ ಹಾಕ್ತಿದ್ದಾರೆ, ಮೌಲ್ವಿಗಳ ಕಣ್ಣಿಗೆ ಬೆಣ್ಣೆ ಹಾಕ್ತಿದ್ದಾರೆ. ಸಿದ್ಧರಾಮಯ್ಯನವರು ಈಗಲೂ ಬೆಣ್ಣೆ ಹಚ್ಚುವ ರಾಜಕಾರಣ ಬಿಡಲಿಲ್ಲ ಅಂದ್ರೆ ಬಹು ಸಂಖ್ಯಾತ ಹಿಂದುಗಳು ಸಿದ್ಧರಾಮಯ್ಯನವರ ಕಣ್ಣಿಗೆ ಸುಣ್ಣ ಹಚ್ಚುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಅದು ಅವರ ವೈಯಕ್ತಿಕ ಹೇಳಿಕೆ. ಅದರ ಬಗ್ಗೆ ನಾನೇನೂ ಹೆಚ್ಚು ಹೇಳಲು ಪಡುವುದಿಲ್ಲ ಎಂದರು. ಪ್ರಧಾನಿ ಮೋದಿಯವರು ಸಾಮರಸ್ಯ, ಐಕ್ಯತೆ, ಎಲ್ಲ ಧರ್ಮಗಳನ್ನೂ ಗೌರವಿಸಬೇಕು ಎಂದು ಕರೆ ಕೊಟ್ಟಿದ್ದಾರೆ. ದೇವಸ್ಥಾನಗಳು ಮಸೀದಿಗಳಾಗಿರುವ ಬಗ್ಗೆ ನೋವಾಗಿದೆ ಹೌದು. ಇತಿಹಾಸದಲ್ಲಿ ಆ ಥರ ಹಲವು ನೋವುಗಳಿವೆ. ಇದಕ್ಕೆ ವಿಶೇಷವಾಗಿ ಈ ವಿಚಾರಗಳನ್ನು ಕೈಗೆತ್ತಿಕೊಳ್ಳುವ ಸಂದರ್ಭ ಇದು ಅಲ್ಲ ಆ ವಿಚಾರಗಳೂ ಈಗ ನಮ್ಮ ಪಕ್ಷದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದರು.

RELATED ARTICLES

Latest News