ಮೈಸೂರು,ಮಾ.15- ಮೈಸೂರು ರಾಜಮನೆತನದಲ್ಲಿ ನಮ್ಮ ಪೂರ್ವಿಕರ ಬಗ್ಗೆ ಜನ ಪೂಜ್ಯನೀಯ ಭಾವನೆ ಹೊಂದಿದ್ದಾರೆ, ಅದಕ್ಕೆ ನಾನು ಚಿರ ಋಣಿ. ನಮ್ಮ ವೃತ್ತಿ ಬದುಕಿನ ಅವಕಾಶವನ್ನು ಸೃಷ್ಟಿಸಿಕೊಳ್ಳುವ ಸಮಯ ಈಗ ಬಂದಿದೆ ಎಂದು ಬಿಜೆಪಿ ಅಭ್ಯರ್ಥಿಯೂ ಆಗಿರುವ ರಾಜ ಮನೆತನದ ಯದುವೀರ್ ಒಡೆಯರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ರಾಜಕೀಯಕ್ಕೆ ಪ್ರವೇಶಿಸಲು ರಾಜಮಾತೆ ಪ್ರಮೋದಾ ದೇವಿಯವರ ವಿರೋಧ ಇತ್ತು ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಅವರ ಆಶೀರ್ವಾದ ಮತ್ತು ಸಹಮತಿ ಇಲ್ಲದೆ ಏನೂ ನಡೆಯುವುದಿಲ್ಲ ಎಂದು ಹೇಳಿದರು.
ಮೈಸೂರು ಲೋಕಸಭಾ ಕ್ಷೇತ್ರವನ್ನು ದಕ್ಷಿಣ ಭಾರತದಲ್ಲಿ ಆಕರ್ಷಣೀಯವಾದ ಪ್ರವಾಸೋದ್ಯಮ ಕೇಂದ್ರ ಮಾಡುವುದು ತಮ್ಮ ಗುರಿ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.ಜೀವನದಲ್ಲಿ ಟೀಕೆ, ಟಿಪ್ಪಣಿಗಳು ಸಹಜ. ಆದರೆ ಅವುಗಳಿಗೆ ಮೌಲ್ಯವಿದ್ದರೆ ಮಾನ್ಯತೆ ದೊರೆಯುತ್ತದೆ. ಇಲ್ಲವಾದರೆ ನಿರ್ಲಕ್ಷಿಸಬೇಕಾಗುತ್ತದೆ. ಸಾಮಾನ್ಯ ಜೀವನದಲ್ಲಿ ಟೀಕೆಗಳು ಸಹಜ, ರಾಜಕಾರಣದಲ್ಲಿ ಅದು ಇನ್ನೂ ಒಂದಿಷ್ಟು ಹೆಚ್ಚಾಗಿರಬಹುದು. ಆದರೆ ಎಲ್ಲವನ್ನೂ ನುಂಗಿಕೊಳ್ಳಬೇಕಾಗುತ್ತದೆ ಎಂದರು.
ನಮ್ಮ ಪೂರ್ವಿಕರ ಮೇಲೆ ಮೈಸೂರು ಜನ ಪೂಜ್ಯನೀಯ ಭಾವನೆ ಹೊಂದಿದ್ದಾರೆ. ಅದನ್ನು ನಮ್ಮ ಬಗ್ಗೆ ಎಂದು ಭಾವಿಸಲಾಗುವುದಿಲ್ಲ. ಜನಸೇವೆಗೆ ಅಕಾರ ಬಹಳ ಮುಖ್ಯ. ನೀತಿ, ನಿರೂಪಣೆಯಿಂದಲೇ ಜನರಿಗೆ ಸಹಾಯ ಮಾಡಲು ಅವಕಾಶವಿದೆ. ಹೀಗಾಗಿ ನಾನು ರಾಜಕೀಯಕ್ಕೆ ಬರಲು ನಿರ್ಧರಿಸಿದ್ದೆ. ಇದಕ್ಕಾಗಿ ಸಾಕಷ್ಟು ಪೂರ್ವ ತಯಾರಿಗಳನ್ನುಮಾಡಿಕೊಂಡಿದ್ದೆ ಎಂದು ಹೇಳಿದರು.
ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಿನ್ಸಿಪಾಲರ ಬಳಿ ಹೋಗಿ ನನಗೆ ಏಕೆ ರ್ಯಾಂಕ್ ನೀಡಲಾಗಿದೆ ಎಂದು ನಾನು ಪ್ರಶ್ನೆ ಮಾಡಲಾಗುವುದಿಲ್ಲ. ರಾಜಕಾರಣದಲ್ಲಿ ಇದೆಲ್ಲಾ ಸಹಜ. ಟಿಕೆಟ್ ಘೋಷಣೆಯಾಗುವ ಸಂದರ್ಭದಲ್ಲಿ ಪ್ರತಾಪ್ ಸಿಂಹ ತಮಗೆ ಕರೆ ಮಾಡಿದ್ದರು, ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿ ಶುಭ ಹಾರೈಸಿದ್ದರು ಎಂದರು.
ತಾವು ಎಸಿಯಲ್ಲಿ ಕುಳಿತಿದ್ದ ವ್ಯಕ್ತಿ, ಜನಸಾಮಾನ್ಯರೊಂದಿಗೆ ಸಂಪರ್ಕ ಇರುವುದಿಲ್ಲ ಎಂಬುದು ಸರಿಯಲ್ಲ. ಕಳೆದ 9 ವರ್ಷಗಳಿಂದಲೂ ನಾನು ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ. ಬಿಜೆಪಿ ರಾಷ್ಟ್ರೀಯ ನಾಯಕರು ತಮಗೆ ಪ್ರೇರಣೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾಗತಿಕವಾಗಿ ಪ್ರಖ್ಯಾತರಾಗಿರುವುದಷ್ಟೇ ಅಲ್ಲ, ಹಲವಾರು ಗಂಭೀರ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಎಂದು ಹೇಳಿದರು.