Sunday, April 14, 2024
Homeರಾಜ್ಯರಾಜ್ಯಸಭೆಗೆ ಜೆಡಿಎಸ್ ಅಭ್ಯರ್ಥಿ ಕಣಕ್ಕೆ : ಅಡ್ಡ ಮತದಾನ ಭೀತಿ

ರಾಜ್ಯಸಭೆಗೆ ಜೆಡಿಎಸ್ ಅಭ್ಯರ್ಥಿ ಕಣಕ್ಕೆ : ಅಡ್ಡ ಮತದಾನ ಭೀತಿ

ಬೆಂಗಳೂರು,ಫೆ.15- ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆ ಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕೊನೆ ಕ್ಷಣದಲ್ಲಿ ಕಣಕ್ಕಿಳಿಸಿರುವ ಹಿನ್ನಲೆ ಪ್ರಮುಖ ಮೂರು ರಾಜಕೀಯ ಪಕ್ಷಗಳಿಗೆ ಅಡ್ಡ ಮತದಾನದ ಭೀತಿ ಎದುರಾಗಿದ್ದು, ಶಾಸಕರ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ದಟ್ಟವಾಗಿದೆ. ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಇಂದು ಕಾಂಗ್ರೆಸ್‍ನಿಂದ ನಾಸೀರ್ ಹುಸೇನ್, ಜಿ.ಸಿ.ಚಂದ್ರ ಶೇಖರ್, ಅಜಯ್ ಮಕಾನ್, ಬಿಜೆಪಿಯಿಂದ ನಾರಾಯಣ ಬಾಂಡೆಗೆ ಮತ್ತು ಜೆಡಿಎಸ್‍ನಿಂದ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದರು.

ವಿಧಾನಸಭೆಯ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಯೂ ಆಗಿರುವ ಎಂ.ಕೆ.ವಿಶಾಲಾಕ್ಷಿಯವರಿಗೆ ಮೂರು ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ಪಕ್ಷದ ಪ್ರಮುಖರೊಂದಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಫೆ.20ರಂದು ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದೆ. ನಾಮಪತ್ರ ಸಲ್ಲಿಸಿರುವ ನಾಲ್ಕು ಅಭ್ಯರ್ಥಿಗಳು ಕಣದಲ್ಲಿ ಉಳಿದರೆ ಫೆ.27ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆದು 5 ಗಂಟೆಯ ನಂತರ ಮತ ಎಣಿಕೆ ಪ್ರಾರಂಭವಾಗಿ ಫಲಿತಾಂಶ ಪ್ರಕಟಗೊಳ್ಳಲಿದೆ.

BIG NEWS : ಚುನಾವಣಾ ಬಾಂಡ್ ವಾಕ್ ಸ್ವಾತಂತ್ರ್ಯದ ಉಲ್ಲಂಘನೆ,. ಸುಪ್ರೀಂ ಮಹತ್ವದ ತೀರ್ಪು

ಈಗಿನ ವಿಧಾನಸಭೆಯ ಚುನಾವಣೆಯ ಬಲಾಬಲದಲ್ಲಿ ಕಾಂಗ್ರೆಸ್ 3 ಹಾಗೂ ಬಿಜೆಪಿ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಿತ್ತು. ಕೊನೆ ಕ್ಷಣದಲ್ಲಿ ಜೆಡಿಎಸ್ ತನ್ನ ನಿಲುವು ಬದಲಿಸಿ 5ನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರಿಂದ ನಾಮಪತ್ರ ಸಲ್ಲಿಸಿರುವ ಕಾರಣ ಬಹುತೇಕ ಚುನಾವಣೆ ನಡೆಯುವುದು ಖಚಿತವಾಗಿದೆ. ರಾಜ್ಯಸಭೆಗೆ ಆಯ್ಕೆಯಾಗಬೇಕಾದರೆ ಓರ್ವ ಅಭ್ಯರ್ಥಿ ತಲಾ 45 ಮತಗಳನ್ನು ಪಡೆಯಬೇಕು. ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 135, ಬಿಜೆಪಿ 66, ಜೆಡಿಎಸ್ 19 ಹಾಗೂ ನಾಲ್ವರು ಪಕ್ಷೇತರ ಶಾಸಕರಿದ್ದಾರೆ.

ಈ ಹಿಂದೆ ಜೆಡಿಎಸ್‍ನ 7 ಮಂದಿ ಶಾಸಕರಿಂದ ಅಡ್ಡ ಮತದಾನ ನಡೆಸಿದ್ದ ಕಾಂಗ್ರೆಸ್‍ಗೆ ಪಾಠ ಕಲಿಸಲೇಬೇಕೆಂದೆ ಹಠಕ್ಕೆ ಬಿದ್ದಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ , ರಾಜ್ಯಸಭಾ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅವರಿಂದ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಕಾವು ರಂಗೇರುವಂತೆ ಮಾಡಿದ್ದಾರೆ.

ಅಡ್ಡಮತದಾನದ ಭೀತಿ:
ಒಂದು ವೇಳೆ ಮತದಾನ ನಡೆದರೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಮೂರು ಪಕ್ಷಗಳಲ್ಲಿ ಅಡ್ಡ ಮತದಾನದ ಭೀತಿ ಎದುರಾಗಿದೆ. ಬಿಜೆಪಿ ವಿಧಾನಸಭೆಯಲ್ಲಿ 66 ಸದಸ್ಯರನ್ನು ಹೊಂದಿದ್ದು, ತನ್ನ ಅಧಿಕೃತ ಅಭ್ಯರ್ಥಿ ನಾರಾಯಣಸಾ ಬಾಂಡೆಗೆ ಮೊದಲ ಪ್ರಾಶಸ್ತ್ಯದಲ್ಲಿ 46 ಮತಗಳನ್ನು ಹಾಕಿಸಿದರೆ ಹೆಚ್ಚುವರಿಯಾಗಿ ಉಳಿಯುವ 20 ಮತಗಳನ್ನು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಮತ ಹಾಕಲಿದೆ.

ಜೆಡಿಎಸ್ 19 ಸದಸ್ಯರನ್ನು ಹೊಂದಿದ್ದು, ಬಿಜೆಪಿಯ ಹೆಚ್ಚುವರಿ 20 ಮತಗಳು ಸೇರಿದರೆ 39 ಮತಗಳು ಕುಪೇಂದ್ರ ರೆಡ್ಡಿಗೆ ಬರಲಿದೆ. ಪಕ್ಷೇತರ ಶಾಸಕರಾದ ಜನಾರ್ಧನ ರೆಡ್ಡಿ(ಗಂಗಾವತಿ), ಲತಾ ಮಲ್ಲಿಕಾರ್ಜುನ (ಹರಪ್ಪನಹಳ್ಳಿ), ಪುಟ್ಟಸ್ವಾಮಿ ಗೌಡ(ಗೌರಿಬಿದನೂರು) ಹಾಗೂ ದರ್ಶನ್ ಪುಟ್ಟಣ್ಣಯ್ಯ(ಮೇಲುಕೋಟೆ) ಇವರಲ್ಲಿ ಎಷ್ಟು ಮಂದಿ ಜೆಡಿಎಸ್ ಅಭ್ಯರ್ಥಿಗೆ ಮತ ಚಲಾಯಿಸುತ್ತಾರೆ ಎಂಬುದರ ಮೇಲೆ ಕುಪೇಂದ್ರ ರೆಡ್ಡಿಯವರ ಸೋಲು ಗೆಲುವು ನಿಶ್ಚಿತವಾಗುತ್ತದೆ.

ರೈತ ಮುಖಂಡರೊಂದಿಗೆ ಮತ್ತೊಂದು ಮಾತುಕತೆಗೆ ಮುಂದಾದ ಕೇಂದ್ರ

ಒಂದು ವೇಳೆ ನಾಲ್ವರು ಪಕ್ಷೇತರ ಶಾಸಕರು ಜೆಡಿಎಸ್‍ಗೆ ಮತ ಚಲಾಯಿಸಿದರೆ ಕುಪೇಂದ್ರ ರೆಡ್ಡಿಯ ಗೆಲುವಿಗೆ ಮೂರು ಮತಗಳು ಬೇಕಾಗುತ್ತದೆ. ಕಾಂಗ್ರೆಸ್‍ನಲ್ಲಿ ಅಸಮಾಧಾನಗೊಂಡಿರುವ ಶಾಸಕರು ಏನಾದರೂ ಕೊನೆ ಕ್ಷಣದಲ್ಲಿ ಲಕ್ಷ್ಮಿಗೆ ತಲೆಬಾಗಿ ರೆಡ್ಡಿಗೆ ಜೈ ಎಂದರೆ ಕಾಂಗ್ರೆಸ್ ಅಕೃತ ಅಭ್ಯರ್ಥಿಗೆ ಸೋಲು ಕಟ್ಟಿಟ್ಟ ಬುತ್ತಿ.ರಾಜ್ಯಸಭೆ ಚುನಾವಣೆಯಲ್ಲೂ ಈ ಹಿಂದೆ ಅಡ್ಡ ಮತದಾನ ನಡೆದು ಹೈಡ್ರಾಮ ನಡೆದ ಉದಾಹರಣೆಗಳು ಸಾಕಷ್ಟಿವೆ. ಹೀಗಾಗಿ ಮೂರು ಪಕ್ಷಗಳಿಗೆ ಕುದುರೆ ವ್ಯಾಪಾರ, ಅಡ್ಡ ಮತದಾನದ ಭಯ ಆರಂಭವಾಗಿದೆ.ಬಿಜೆಪಿಯ ಇಬ್ಬರು, ಜೆಡಿಎಸ್‍ನ ಓರ್ವ ಶಾಸಕರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಏಕೆಂದರೆ ಈ ಮೂವರು ಶಾಸಕರು ಕಾಂಗ್ರೆಸ್ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.

224 ಶಾಸಕರು ಓಪನ್ ಬ್ಯಾಲೆಟ್ ಮೂಲಕ ಮತ ಚಲಾಯಿಸಬೇಕಾಗುತ್ತದೆ. ಓಪನ್ ಬ್ಯಾಲೆಟ್‍ನಲ್ಲಿ ನಡೆಯುವ ಮತದಾನವಾಗಿರುವುದರಿಂದ ಪಕ್ಷಗಳು ನೇಮಿಸುವ ಏಜೆಂಟರುಗಳಿಗೆ ಶಾಸಕರು ಮತದಾನಕ್ಕೂ ಮುನ್ನ ತಾವು ಯಾವ ಅಭ್ಯರ್ಥಿಗೆ ಮತ ಹಾಕುತ್ತಿದ್ದೇವೆ ಎಂಬುದನ್ನು ತೋರಿಸಿ ನಂತರವೇ ಮತ ಹಾಕಬೇಕು. ಒಂದು ವೇಳೆ ಏಜೆಂಟರಿಗೆ ತೋರಿಸದೆ ಹಾಕಿದ್ದಲ್ಲಿ ಅಸಿಂಧುಗೊಳ್ಳುವ ಸಾಧ್ಯತೆ ಇದೆ.

ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರಿಗೆ ವಿಪ್ ಅನ್ವಯವಾಗುವುದಿಲ್ಲ. ಒಂದು ವೇಳೆ ಅಡ್ಡ ಮತದಾನ ಮಾಡಿದರೆ ಅದು ಏಜೆಂಟರಿಗೆ ಗೊತ್ತಾಗಲಿದ್ದು, ಅಂಥ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವರ ಸದಸ್ಯತ್ವವನ್ನು ಅನರ್ಹಗೊಳಿಸಲು ವಿಧಾನಸಭೆಯ ಸಭಾಧ್ಯಕ್ಷರಿಗೆ ದೂರು ನೀಡಲು ಅವಕಾಶವಿರುತ್ತದೆ.
ಈ ಹಿಂದೆಯೂ ಜೆಡಿಎಸ್‍ನಿಂದ ಗೆದ್ದಿದ್ದ ಏಳು ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಜೆಡಿಎಸ್ ಅಂದು ದೂರು ಕೊಟ್ಟಿತ್ತಾದರೂ ವಿಧಾನಸಭಾಧ್ಯಕ್ಷರು ಯಾವುದೇ ಕಾನೂನು ಕ್ರಮ ಜರುಗಿಸಿರಲಿಲ್ಲ.

ಅಮೆರಿಕದಲ್ಲಿ ಭಾರತೀಯ ಸೇನಾ ಮುಖ್ಯಸ್ಥ

ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಲತಾ ಮಲ್ಲಿಕಾರ್ಜುನ್, ದರ್ಶನ್ ಪುಟ್ಟಣ್ಣಯ್ಯ ಕೈ ಅಭ್ಯರ್ಥಿಗೆ ಮತ ಚಲಾಯಿಸಿದರೆ ಕುಪೇಂದ್ರ ರೆಡ್ಡಿ ಇನ್ನು ಹೆಚ್ಚುವರಿಯಾಗಿ ಆರು ಮತಗಳನ್ನು ಪಡೆಯಬೇಕಾಗುತ್ತದೆ. ಒಂದು ವೇಳೆ ಜಾತಿಯ ಕಾರಣಕ್ಕಾಗಿ ಜನಾರ್ಧನ ರೆಡ್ಡಿ ಹಾಗೂ ದಿವಂಗತ ಎಂ.ಪಿ.ಪ್ರಕಾಶ್ ಪುತ್ರಿ ಲತಾ ಮಲ್ಲಿಕಾರ್ಜುನ್ ಜೆಡಿಎಸ್ ಕೈ ಹಿಡಿದರೆ ಕಾಂಗ್ರೆಸ್‍ನಲ್ಲೂ ಅಸಮಾಧಾನಗೊಂಡಿರುವ ಶಾಸಕರು ಅಡ್ಡ ಮತದಾನ ಮಾಡಿದರೂ ಅಚ್ಚರಿ ಇಲ್ಲ.

ಇದೀಗ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದೇ ಎಲ್ಲ ಪಕ್ಷದವರಿಗೂ ತಲೆನೋವಾಗಿ ಪರಿಣಮಿಸಿದೆ. ಮೂಲಗಳ ಪ್ರಕಾರ ಚುನಾವಣೆ ನಡೆದಿದ್ದೇ ಆದಲ್ಲಿ ಕುದುರೆ ವ್ಯಾಪಾರವನ್ನು ತಪ್ಪಿಸಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ರೆಸಾರ್ಟ್‍ನತ್ತ ಹೊರಡಬಹುದು.

ವಿಧಾನಸಭೆಯ ಬಲಾಬಲ
ಒಟ್ಟು ಸಂಖ್ಯೆ – 224
ಕಾಂಗ್ರೆಸ್ – 135
ಬಿಜೆಪಿ – 66
ಜೆಡಿಎಸ್ – 19
ಪಕ್ಷೇತರ – 4

RELATED ARTICLES

Latest News