ಬೆಂಗಳೂರು,ಮಾ.2- ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಸೋಟಕ್ಕೂ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಹಾಗೂ ಶಿವಮೊಗ್ಗ ನದಿ ತೀರದಲ್ಲಿ ನಡೆಸಿದ್ದ ಟ್ರಯಲ್ ಬ್ಲಾಸ್ಟ್ ಪ್ರಕರಣಗಳ ನಡುವೆ ಸಾಮ್ಯ ಇರುವ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಐಸಿಸ್ ಸಂಘಟನೆ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಸಂಭವಿಸಿದ್ದ ಬಾಂಬ್ ಬ್ಲಾಸ್ಟ್ ಮಾದರಿಯಲ್ಲೇ ರಾಮೇಶ್ವರಂ ಕೆಫೆಯಲ್ಲೂ ಸ್ಪೋಟ ಸಂಭವಿಸಿರುವುದು ಸ್ಥಳದಲ್ಲಿ ಸಿಕ್ಕ ವಸ್ತುಗಳ ಪರಿಶೀಲನೆ ಸಂದರ್ಭದಲ್ಲಿ ಕಂಡು ಬಂದಿರುವ ಹಿನ್ನೆಲಯಲ್ಲಿ ಈ ಪ್ರಕರಣದಲ್ಲೂ ಐಸಿಎಸ್ ಉಗ್ರರ ಕರಿನೆರಳು ಇರಬಹುದು ಎಂದು ಶಂಕಿಸಲಾಗಿದೆ.
ರಾಮೇಶ್ವರಂ ಕೆಫೆ ಸ್ಪೋಟದಲ್ಲಿ ಬಳಕೆಯಾಗಿರುವ ಡಿಟೋನೇಟರ್, ಬ್ಯಾಟರಿ ಸೇರಿ ಹಲವು ವಸ್ತುಗಳು ಮಂಗಳೂರು ಕುಕ್ಕರ್ ಬ್ಲಾಸ್ಟ್ ಮಾದರಿಯಲ್ಲೇ ನಡೆದಿರುವುದು ಈ ಎಲ್ಲ ಅನುಮಾನಗಳಿಗೆ ಇಂಬು ನೀಡುವಂತಿವೆ ಎಂದು ಪೊಲೀಸ್ ಮೂಲಗಳು ಈಸಂಜೆಗೆ ಖಚಿತಪಡಿಸಿವೆ. ದೇಶದ್ರೋಹಿಗಳು ರಾಮೇಶ್ವರಂ ಕೆಫೆ ಪ್ರಕರಣದಲ್ಲಿ ಕುಕ್ಕರ್ ಬದಲಿಗೆ ಪ್ಲಾಸ್ಟಿಕ್ ಕವರ್ ಬಳಕೆ ಮಾಡಿ ಎರಡು ಕಂಟೈನರ್‍ಗಳನ್ನು ಸೃಷ್ಟಿ ಮಾಡಿ ಎರಡು ಬಾಂಬ್‍ಗಳನ್ನಿಟ್ಟು ಒಂದಾದ ನಂತರ ಒಂದು ಸ್ಪೋಟಗೊಳ್ಳುವಂತೆ ಟೈಮ್ ಫಿಕ್ಸ್ ಮಾಡಿರುವುದು ಗೊತ್ತಾಗಿದೆ. ಬಾಂಬ್ ಇಟ್ಟ ಶಂಕಿತ ವ್ಯಕ್ತಿ ಹೊರನಡೆದ ಒಂದು ಗಂಟೆಯ ತರುವಾಯ ಸ್ಪೋಟ ಸಂಭವಿಸಿದೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟಕ್ಕೂ ರಾಮೇಶ್ವರಂ ಕೆಫೆ ಪ್ರಕರಣಕ್ಕೂ ಸಾಮ್ಯತೆ ಇರುವುದರಿಂದ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ಆರೋಪಿಗಳನ್ನು ವಿಚಾರಣೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಕುಕ್ಕರ್ ಬಾಂಬ್ ಸ್ಪೋಟದ ಆರೋಪಿ ಶಾರಿಕ್ ಮತ್ತು ಆತನ ಸಹಚರರು ಪರಪ್ಪನ ಆಗ್ರಹಾರ ಜೈಲಿನಲ್ಲಿದ್ದು ಅವರನ್ನು ಬಾಡಿ ವಾರೆಂಟ್ ಮೇಲೆ ಕರೆತಂದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ.
ಎರಡೂ ಕಡೆ ನಡೆದ ಸ್ಪೋಟದ ವೇಳೆ ಹೊರಸೂಸಿರುವ ಹೊಗೆ ಒಂದೇ ಮಾದರಿಯಲ್ಲಿದೆ. ಈ ಎರಡೂ ಸ್ಪೋಟಗಳಲ್ಲೂ ಒಂದೇ ಮಾದರಿಯ ವಸ್ತುಗಳ ಬಳಕೆ ಮಾಡಲಾಗಿದೆ. ಎರಡೂ ಕಡೆ ಬ್ಯಾಟರಿ, ಡಿಟೊನೇಟರ್‍ಗಳು, ನಟ್ಟು, ಬೋಲ್ಟ ಬಳಕೆ ಮಾಡಿರುವುದು ಪತ್ತೆಯಾಗಿರುವುದರಿಂದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಮಧ್ಯೆ ತಡರಾತ್ರಿ ರಾಮೇಶ್ವರಂ ಕೆಫೆಗೆ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಯಾಂಪಲ್ಸ ಸಂಗ್ರಹ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳದ ಬಳಿಯ ಸಿಸಿಟಿವಿಯಲ್ಲಿ ಆರೋಪಿಯ ಚಲನವಲನ ದೃಶ್ಯ ಸೆರೆಯಾಗಿದ್ದು ಆತನ ಗುರುತು ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅದಷ್ಟು ಬೇಗ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳದ ಬಗ್ಗೆ ಪಕ್ಕಾ ಮಾಹಿತಿ ಇದ್ದವನಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ರಾಮೇಶ್ವರಂ ಕೆಫೆಯಲ್ಲಿನ ಸಿಟಿಟಿವಿ ಹೊರತುಪಡಿಸಿ ಬೇರೆ ಕಡೆ ಇರುವ ಸಿಸಿ ಕ್ಯಾಮೆರಾಗಳಲ್ಲಿ ಆರೋಪಿ ಕಾಣಿಸಿಕೊಂಡಿಲ್ಲದಿರುವುದು ಆತನ ಚಾಣಕ್ಷತೆಗೆ ಸಾಕ್ಷಿಯಾಗಿದೆ.