ಬೆಂಗಳೂರು,ಮಾ.3- ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ಪ್ರಕರಣ ಸವಾಲಾಗಿ ಪರಿಣಮಿಸಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾ ಗುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಾವಹಾರಿಕ ವೈಷಮ್ಯ, ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಭಯೋತ್ಪಾದಕ ಸಂಘಟನೆಯವರು 2ದುಷ್ಕøತ್ಯ ನಡೆಸಿರುವ ಸಾಧ್ಯತೆ, ಬೆಂಗಳೂರು ಮಹಾನಗರಕ್ಕೆ ಬಂಡವಾಳ ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷಿತವಲ್ಲದ ನಗರ ಎಂಬ ಹಣೆಪಟ್ಟಿ ಕಟ್ಟುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಇವಿಷ್ಟೇ ಅಲ್ಲದೆ, ನಾವು ಬೇರೆಬೇರೆ ಆಯಾಮಗಳಲ್ಲೂ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದೇವೆ. ಹೋಟೆಲ್ ಮಾಲಿಕರು 11 ಶಾಖೆಗಳನ್ನು ಮಾಡಿದ್ದು, 12ನೇ ಶಾಖೆ ಪ್ರಾರಂಭ ಮಾಡಲು ಮುಂಗಡ ಕೊಟ್ಟಿದ್ದು, ಉದ್ಯಮದ ವೈಷಮ್ಯವಿರಬಹುದು ಎಂದೂ ಕೂಡ ಇಲ್ಲಿನವರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನೊಳಗೊಂಡಂತೆ ತನಿಖೆ ನಡೆಸುತ್ತಿದ್ದೇವೆ. ಭಯೋತ್ಪಾದಕ ಸಂಘಟನೆಗಳು ಈ ಕೃತ್ಯ ಎಸಗಿರಬಹುದೇ ಎಂಬ ಶಂಕೆ ಹಿನ್ನೆಲೆಯಲ್ಲಿ ಎನ್‍ಐಎ, ಎನ್‍ಎಸ್‍ಜಿ ತಂಡಗಳು ಕೂಡ ಪರಿಶೀಲನೆ ನಡೆಸುತ್ತಿವೆ. ಒಟ್ಟಾರೆ ಪ್ರಕರಣ ಸವಾಲಾಗಿ ಪರಿಣಮಿಸಿದ್ದು, ಎಲ್ಲಾ ರೀತಿಯಲ್ಲೂ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಕ್ಯಾಮೆರಾಗಳನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ಘಟನೆ ನಡೆದ ಸಂದರ್ಭದಲ್ಲಿ 26 ಬಸ್‍ಗಳು ಬಂದು ಹೋಗಿವೆ. ಆ ಬಸ್‍ಗಳಲ್ಲಿ ಕ್ಯಾಮೆರಾಗಳನ್ನು ಕೂಡ ಪರಿಶೀಲನೆ ಮಾಡಲಾಗಿದ್ದು, ಮಾಸ್ಕ್ ಮತ್ತು ಕ್ಯಾಪ್ ಧರಿಸಿದ ವ್ಯಕ್ತಿ ಪ್ರಯಾಣಿಸಿದ ಬಸ್ಸನ್ನು ಗುರುತಿಸಲಾಗಿದೆ. ಹೆಚ್ಚಿನ ತಾಂತ್ರಿಕ ವಿವರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲಾಗುವುದಿಲ್ಲ ಎಂದು ಗೃಹ ಸಚಿವರು ತಿಳಿಸಿದರು.
ಇದು ಕಡಿಮೆ ತೀವ್ರತೆಯ ಸ್ಪೋಟವಾಗಿದ್ದರಿಂದ ಹೆಚ್ಚು ಅನಾಹುತಗಳು ಸಂಭವಿಸಿಲ್ಲ. ಬೋಲ್ಟ್, ಮೊಳೆಗಳು ಮೇಲ್ಮುಖವಾಗಿ ಬಂದು ಮೇಲೆ ಸಿಡಿದಿವೆ. ಅವು ಅಕ್ಕ ಪಕ್ಕ ಸಿಡಿದಿದ್ದರೆ ಮತ್ತಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆಯಿತ್ತು ಎಂದು ಹೇಳಿದರು. ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಪೋಟದ ಪ್ರಕರಣದಲ್ಲಿ ಬಳಸಿದ ತಾಂತ್ರಿಕತೆಯಂತೆ ಈ ಸ್ಪೋಟದಲ್ಲೂ ಬ್ಯಾಟರಿಯನ್ನು ಬಳಸಲಾಗಿದೆ ಎಂದು ಹೇಳಲಾಗುತ್ತಿದೆ.
ಎಲ್ಲವೂ ತನಿಖೆಯ ನಂತರ ತಿಳಿದು ಬರಬೇಕು. ಸುಮ್ಮನೇ ಊಹಾಪೋಹದ ಹೇಳಿಕೆಗಳನ್ನು ನೀಡಲು ಆಗುವುದಿಲ್ಲ. ಈ ಘಟನೆ ಸಂಬಂಧ ಯಾರು, ಏನೇ ಹೇಳಿಕೆ ನೀಡಿದರೂ ಅದು ಅಧಿಕೃತವಾಗುವುದಿಲ್ಲ. ಮುಖ್ಯಮಂತ್ರಿಗಳು ಅಥವಾ ನಾನು, ಗೃಹ ಇಲಾಖೆಯ ಮುಖ್ಯಸ್ಥರು ನೀಡುವ ಹೇಳಿಕೆ ಮಾತ್ರ ಅಧಿಕೃತವಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಮ್ಯಾಜಿಕ್ ಮಾಡಲು ಆಗಲ್ಲ:
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಸಂಬಂಧ ಎಫ್‍ಎಸ್‍ಎಲ್ ವರದಿ ವಿಳಂಬ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ವಿವರಗಳನ್ನು ತಾಂತ್ರಿಕವಾಗಿ, ಕರಾರುವಕ್ಕಾಗಿ ನೀಡಬೇಕು. ನಿಮಗೆ ಏನು ಬೇಕೋ ಅದನ್ನು ಕೊಡಲಿಕ್ಕೆ ಆಗುವುದಿಲ್ಲ. 6 ಗಂಟೆಯಲ್ಲಿ, 8 ಗಂಟೆಯಲ್ಲಿ, 48 ಗಂಟೆಯಲ್ಲಿ ಕೊಡುತ್ತೇನೆ ಎಂದು ಹೇಳಲು ಆಗುವುದಿಲ್ಲ. ನಾವೇನೂ ಮ್ಯಾಜಿಕ್ ಮಾಡಲು ಬರುವುದಿಲ್ಲ. ಅಲ್ಲಿಂದ ವರದಿ ಬಂದ ನಂತರ ಬಹಿರಂಗಪಡಿಸುವುದಾಗಿ ಹೇಳಿದರು. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಇದೊಂದು ಕ್ಷುಲ್ಲಕ ವಿಷಯ. ಇದನ್ನು ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಸಚಿವ ಡಾ.ಶರಣ ಪಾಟೀಲ್ ಹೇಳಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಅವರಿಗೆ ಮಾಹಿತಿಯ ಕೊರತೆಯಿದೆ. ಹಾಗಾಗಿ ಅವರು ಆ ರೀತಿ ಹೇಳಿರಬಹುದು. ನಾವು ಕೊಡುವ ಮಾಹಿತಿ ಅಧಿಕೃತವಾಗಿರುತ್ತದೆ ಎಂದು ಹೇಳಿದರು.
ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಪ್ರತಿಪಕ್ಷಗಳು ರಾಜಕೀಯ ಮಾಡದೇ ಸಹಕರಿಸಬೇಕೆಂದು ಮನವಿ ಮಾಡಿದರು.