ಬಯಲು ಸೀಮೆ ಚಿಕ್ಕಬಳ್ಳಾಪುರ ಜಿಲ್ಲೆ ಸದ್ಯ ಬಿಸಿಲ ನಾಡಾಗಿ ಪರಿವರ್ತನೆಯಾಗುತ್ತಿದ್ದು, ಜಿಲ್ಲೆಯಲ್ಲಿ ಬಿಸಿಲ ತಾಪ ಮಾನ 36 ರಿಂದ 38 ಡಿಗ್ರಿ ಸೆಲ್ಸಿಯಸ್ ಮೀರಿಸುತ್ತಿದೆ. ಬಿಸಿಲಿನ ತಾಪಮಾನಕ್ಕೆ ಇದ್ದ ಬದ್ದ ಕೆರೆ-ಕಟ್ಟೆ ಕುಂಟೆಗಳು ಬತ್ತಿ ಹೋಗಿವೆ. ಜನಜಾನುವಾರು ಸೇರಿದಂತೆ ಪ್ರಾಣಿ ಪಕ್ಷಿ ಸಂಕುಲಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಬಿಸಿಲ ತಾಪ ತಾಳಲಾಗದೆ ಜನತೆ ಬಾಯಾರಿಕೆ ನೀಗಿಸಿಕೊಳ್ಳಲು ಕಲ್ಲಂಗಡಿ ಹಣ್ಣು, ತಂಪು ಪಾನೀಯಗಳಿಗೆ ಮುಗಿಬಿದ್ದಿದ್ದರೂ ಬಿಸಿಲಿನ ತಾಪಮಾನಕ್ಕೆ ತತ್ತರಿಸಿದ್ದಾರೆ.
ಈ ಹಿಂದಿನ ವರ್ಷಗಳಲ್ಲಿ ಇಷ್ಟೊತ್ತುಗಾಗ್ಲೇ ಒಂದೆರಡು ಬಾರಿ ಮಳೆ ಬಂದು ಭೂಮಿ ತಂಪಾಗುತ್ತಿತ್ತು. ಆದರೆ ಈ ಬಾರಿ ಮೇ ಮಾಹೆ ಬಂದರೂ ದಿನದಿಂದ ದಿನಕ್ಕೆ ಬಿಸಿಲಿನ ಝಳ ಏರಿಕೆಯಾಗುತ್ತಿದೆ. ಜನತೆ ಮನೆಯಿಂದ ಹೊರಗೆ ಬರಲು ಚಿಂತಿಸುವಂತಾಗಿರುವುದು ಒಂದು ಕಡೆಯಾದರೆ, ಮನೆಯಲ್ಲೇ ತಂಪು ಮಾಡಿಕೊಂಡು ಇದ್ದರೂ ತೀವ್ರತರವಾದ ಸೆಕೆಗೆ ಮನುಷ್ಯನ ದೇಹದಿಂದ ಬೆವರು ಇಳಿಯಲಾರಂಭಿಸಿದೆ. ಈ ಹಿಂದೆ ಜಿಲ್ಲೆಯಲ್ಲಿ 26-28 ಡಿಗ್ರಿ ಇದ್ದ ಉಷ್ಣಾಂಶ, ಕೆಲದಿನಗಳಿಂದ ಏಕಾಏಕಿ 36ರಿಂದ 38 ಡಿಗ್ರಿಗೆ ತಲುಪಿದ್ದು, ಬಿಸಿಲಿನ ಧಗೆಗೆ ಜನಜೀವನ ತತ್ತರಿಸಿದೆ.
ಬಿಸಿಲ ಝಳಕ್ಕೆ ರಸ್ತೆಯಲ್ಲಿ ಜನತೆ ಸಂಚರಿಸಲು ಒದ್ದಾಡುವಂತಾಗಿದ್ದು, ಮಹಿಳೆಯರು, ಯುವತಿಯರಲ್ಲದೆ ಪುರುಷರು ಕೂಡ ಛತ್ರಿ ಬಳಸುವ ಸ್ಥಿತಿ ಎದುರಾಗಿದೆ. ಕಾಂಕ್ರಿಟ್ ರಸ್ತೆ, ಕಟ್ಟಡಗಳು ಹಾಗೂ ಮನೆಯ ಚಾವಣಿ ಕಾದ ಕಾವಲಿಯಾಗಿವೆ. ಡಾಂಬರು ರಸ್ತೆಗಳು ಬಿಸಿಲತಾಪ ಉಗುಳುತ್ತಿವೆ. ಏರಿಕೆ ಯಾಗುತ್ತಿರುವ ಬಿಸಿಲ ತಾಪಕ್ಕೆ ಜನತೆ ಬೆಚ್ಚಿ ಬೀಳುವಂತೆ ಮಾಡಿದ್ದು, ವಿದ್ಯುತ್ ಕಡಿತದಿಂದ ಪ್ಯಾನ್, ಎಸಿಗಳು ಕೆಲಸ ಮಾಡದೆ ಮನೆಯ ಒಳಗೂ ಇರಲಾಗದೇ, ಹೊರಗೂ ಬರಲಾಗದೆ ಜನತೆ ಪರಿತಪಿಸುವಂತಾಗಿದೆ.
ಚಿಕ್ಕಬಳ್ಳಾಪುರ-ಕೋಲಾರ – ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೊದಲೇ ಹೇಳಿ ಕೇಳಿ ಯಾವುದೇ ನದಿ ನಾಲೆ ಇಲ್ಲದೆ ಬಯಲುಸೀಮೆ ಬರುಡಾದ ಪ್ರದೇಶ ಇದಾಗಿದ್ದು ಎಲ್ಲೆಲ್ಲೂ ಬಿಸಿಲ ಬೇಗೆ ಮಕ್ಕಳಿಂದ ಹಿಡಿದು ವಯಸ್ಕರ ರವರೆಗೂ ತಟ್ಟಿದೆ. ಹಗಲೆಲ್ಲ ಬಿಸಿಲ ಝಳ ತಪ್ಪಿಸಿಕೊಳ್ಳಲು ಪರದಾಡುವ ಜನತೆ, ರಾತ್ರಿಯಾದರೆ ಸಾಕು ಮನೆಯೊಳಗೆ ಮಲಗಲು ಒದ್ದಾಡುವಂತಾಗಿದೆ. ಇನ್ನು ಮನೆಯ ಮೇಲ್ಭಾಗದಲ್ಲಿ ಗಾಳಿ ಬರುತ್ತೆ ಎಂದು ಅಲ್ಲಿ ಮಲಗಿದರೆ ಬೆಳಗ್ಗೆಯಿಂದ ಸಂಜೆವರೆಗೂ ಕಾದ ಕಬ್ಬಿಣದಂತಾಗಿರುವ ಮೇಲ್ಚಾವಣಿಯ ಭಾಗ ಒಂದು ಕಡೆ ಹಬೆಗೆ ತತ್ತರಿಸಿದಂಥಗಿದ್ದಾರೆ.
ಆರೋಗ್ಯ ಇಲಾಖೆಯ ಸೂಚನೆಗಳು: ಬಿಸಿಲಿನ ತಾಪಕ್ಕೆ ಚರ್ಮ ರೋಗ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿ ಜನರಲ್ಲಿ ಉಂಟಾಗಲಿದೆ. ಸ್ನಾಯು ಸೆಳೆತ, ಸನ್ ಸ್ಟ್ರೋಕ್, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ ಮೂತ್ರಪಿಂಡ, ಹೃದಯ ಸಂಬಂ„ ಕಾಯಿಲೆ. ಬಿಸಿಲ ಬೇಗೆಗೆ ನೀರಿನ ಕೊರತೆಯಿಂದ ಗ್ರಾಮೀಣ ಭಾಗಗಳಲ್ಲಿ ವಾಂತಿ-ಭೇದಿಯಂತಹ ರೋಗಗಳು ಕಾಣಿಸಿಕೊಳ್ಳುತ್ತಿವೆ. ಅಶುದ್ಧ ನೀರಿನ ಸೇವನೆಯಿಂದ ಕಾಲರಾದಂಥ ರೋಗಗಳು ಹರಡುವ ಭೀತಿ ಎದುರಾಗಿದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಕೂಡಲೇ ಹತ್ತಿರದ ಆಸ್ಪತ್ರೆಗಳಲ್ಲಿ ವೈದ್ಯರನ್ನ ಸಂಪರ್ಕಿಸಿ ಸಲಹೆಗಳನ್ನು ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ„ಕಾರಿ ಡಾ. ಮಹೇಶ್ ಕುಮಾರ್ ಆಗಿಂದಾಗೆ ಪ್ರಕಟಣೆಯ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ತಂಪು ಪಾನೀಯಗೆ ಡಿಮ್ಯಾಂಡ್: ಸೂರ್ಯನ ಕಿರಣ ಹೊರಬೀಳುತ್ತಿದ್ದಂತೆ ಆರಂಭವಾಗುವ ಬಿಸಿಲಿನ ಧಗೆ ತಾಳಲಾರದೆ ಜನರು ದೇಹ ತಂಪಾಗಿಸಿಕೊಂಡು ದಾಹ ತಣಿಸಿಕೊಳ್ಳಲು ಕಲ್ಲಂಗಡಿ ಹಣ್ಣು, ಎಳನೀರು, ಮಜ್ಜಿಗೆ, ತಂಪು ಪಾನಿಯ, ಜ್ಯೂಸ್ ಮೊರೆ ಹೋಗುತ್ತಿದ್ದಾರೆ. ಬಿಸಿಲು ಉಂಟು ಮಾಡುವ ದಾಹ, ಬಾಯಾರಿಕೆ ನೀಗಿಸಿಕೊಳ್ಳಲು ಸಾರ್ವಜನಿಕರು ಕಲ್ಲಂಗಡಿ ಹಣ್ಣು ತಿನ್ನಲು ಮುಗಿಬೀಳುತ್ತಿದ್ದು, ಜ್ಯೂಸ್, ಐಸ್ ಕ್ರೀಂಗೆ -ಡಿಮ್ಯಾಂಡ್ ಬಂದಿದೆ.
ಜನದಟ್ಟಣೆ ಇರುವ ಪ್ರದೇಶ, ಬಸ್ ನಿಲ್ದಾಣ, ರಸ್ತೆಬದಿ, ಕಚೇರಿ, ಬಡಾವಣೆ, ಹೀಗೆ ನಗರದ ಅಲ್ಲಲ್ಲಿ ಕಲ್ಲಂಗಡಿ ಹಣ್ಣು ಮಾರುವ ಗಾಡಿಗಳು, ರಾಶಿ, ರಾಶಿ ಕಲ್ಲಂಗಡಿ ಹಣ್ಣುಗಳು ಜನಸಾಮಾನ್ಯರ ಬಾಯಾರಿಕೆ ನೀಗಿಸುತ್ತಿವೆ. ಆದರೂ ಬಿಸಿಲಿನ ತಾಪಮಾನಕ್ಕೆ ತಟ್ಟುಕೊಳ್ಳಲು ಆಗದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.
ಬಾಯಾರಿಗೆ ತಣಿಸಿ: ಕೆರೆಕಟ್ಟೆಗಳ ಒಡಲು ಬರಿದಾಗಿದ್ದು, ಪ್ರಾಣಿ-ಪಕ್ಷಿಗಳಿಗೆ ತಿನ್ನಲು ಆಹಾರ, ಕುಡಿಯಲು ನೀರು ಸಿಗದಂತಾಗಿದೆ. ಪ್ರಾಣಿ-ಪಕ್ಷಿಗಳ ಬಾಯಾರಿಕೆ ನೀಗಿಸಲು ಜನಸಾಮಾನ್ಯರು ತಮ್ಮ ಮನೆಯ ಮಹಡಿ ಮೇಲೆ ಪಕ್ಷಿಗಳಿಗೆ ಕುಡಿಯಲು ನೀರಿಟ್ಟು, ಆಹಾರ ಧಾನ್ಯಗಳನ್ನು ನೀಡುವ ಮೂಲಕ ಜೀವಸಂಕುಗಳ ಉಳಿವಿಗೆ ಶ್ರಮಿಸಬೇಕಿರುವುದು ಮನುಷ್ಯರಾದ ತಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪ್ರಾಣಿ ಪಕ್ಷಿ ಹಾಗೂ ಪರಿಸರ ಪ್ರೇಮಿಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
#ಎಂ. ಕೃಷ್ಣಪ್ಪ, ಚಿಕ್ಕಬಳ್ಳಾಪುರ