ಮಧುಗಿರಿ, ನ.20– ಕಾರ್ತೀಕ ಮಾಸದ ಅಂಗವಾಗಿ ಪಟ್ಟಣದ ನಿವೃತ್ತ ಶಿಕ್ಷಕಿಯೊಬ್ಬರು ಜೇಡಿಮಣ್ಣಿನಲ್ಲಿ ಸಾವಿರಾರು ಲಿಂಗಗಳನ್ನು ನಿರ್ಮಾಣ ಮಾಡಿ ದಿನನಿತ್ಯ ಪೂಜೆ ಮಾಡುವ ಮೂಲಕ ತಾಲ್ಲೂಕಿನ ಜನರ ಗಮನ ಸೆಳೆದಿದ್ದಾರೆ.
ಪಟ್ಟಣದ ಚೌಡೇಶ್ವರಿ ಗುಡಿಬೀದಿ ರಸ್ತೆಯಲ್ಲಿರುವ ಶ್ರೀ ಸೋಮವಂಶ ಆರ್ಯಕ್ಷತ್ರಿಯ ಸೇವಾ ಟ್ರ್ಟ್ ಅಧ್ಯಕ್ಷ ಶಂಕರರಾಜು ಅವರ ಪತ್ನಿ ನಿವೃತ್ತ ಶಿಕ್ಷಕಿ ಹಾಗೂ ಕಸಾಪ ಮಹಿಳಾ ಘಟಕದ ಮಾಜಿ ಅಧ್ಯಕ್ಷ ಸುಧಾ ಶಂಕರರಾಜು ಅವರು ಮನೆಯಲ್ಲಿ ಎಲ್ಲಾ ಲಿಂಗಗಳಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇವರು ಈ ಲಿಂಗಗಳನ್ನು ತಯಾರಿಸಲು ಶ್ರಾವಣ ಮಾಸದ ಶುಭ ಗಳಿಗೆಯಲ್ಲಿ ಆರಂಭಿಸಿ ಮೂರು ತಿಂಗಳ ಕಾಲ ಸತತವಾಗಿ ಲಿಂಗಗಳನ್ನು ತಯಾರಿಸಿದ್ದಾರೆ.16 ಸೋಮವಾರದ ಲಿಂಗಗಳು, 108 ಲಿಂಗಗಳಂತೆ 12 ತಿಂಗಳ 1296 ಲಿಂಗಗಳು, 12 ಜ್ಯೋತಿರ್ಲಿಂಗಗಳು, ಅಮರನಾಥ ಲಿಂಗವನ್ನು ತಯಾರಿಸಿದ್ದು, ಜೊತೆಗೆ ಜೋಡಿ ಮಣ್ಣಿನಲ್ಲಿ ಬಸವಣ್ಣನನ್ನು ನಿರ್ಮಿಸಿದ್ದಾರೆ.
ಈ ಒಟ್ಟಾರೆ ಲಿಂಗಗಳನ್ನು ವೀಕ್ಷಿಸಲು ಪಟ್ಟಣದಲ್ಲಿರುವವರು ತಂಡೋಪತಂಡವಾಗಿ ಅವರ ಮನೆಗೆ ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ.ನ.25ರ ಕಾರ್ತೀಕ ಮಾಸದ ಕೊನೆಯ ಸೋಮವಾರದಂದು ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಪುರಾತನ ಶ್ರೀ ಪ್ರಸನ್ನ ಪಾರ್ವತಿ ಸಮೇತ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿರುವ ನಾಟ್ಯಮಂಟಪದಲ್ಲಿ ಸಾರ್ವಜನಿಕರು ವೀಕ್ಷಿಸಲು ಮತ್ತು ಪ್ರದಕ್ಷಿಣೆಗೆ ಅವಕಾಶ ಕಲ್ಪಿಸಲಾಗಿದೆ.