ಬೆಂಗಳೂರು,ಮೇ9- ಮಹಿಳೆಯ ಅಪಹರಣ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಎಚ್.ಡಿ.ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿ ಗಳ ನ್ಯಾಯಾಲಯ ಇಂದು ಮಧ್ಯಾಹ್ನಕ್ಕೆ ಮುಂದೂಡಿದೆ.
ಹೊಸದಾಗಿ ಅಭಿಯೋಜಕರಾಗಿ ನೇಮಕಗೊಂಡ ಹಿನ್ನಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕು ಎಂದು ಎಸ್‌ಪಿಪಿಗಳಾದ ಜಾಯ್ನಾ ಕೊತಾರಿ ಅಶೋಕ್ ನಾಯಕ್ ಅವರು ಮನವಿ ಮಾಡಿದರು.
ಹೊಸದಾಗಿ ಎಸ್‌ಪಿಪಿ ನೇಮಕ ಆದಾಗಲೆಲ್ಲ ವಿಚಾರಣೆ ಮುಂದೂಡಲು ಸಾಧ್ಯವಾಗುವುದಿಲ್ಲ. ಮಧ್ಯಾಹ್ನ ಆಕ್ಷೇಪಣೆ ಸಲ್ಲಿಸಿ ವಾದ ಮಂಡಿಸಲು ಜನಪ್ರತಿನಿಧಿ ಗಳ ವಿಶೇಷ ನ್ಯಾಯಾಲಯ ನ್ಯಾಧೀಶರಾದ ಸಂತೋಷ್ ಗಜಾನನ ಭಟ್ ಸೂಚಿಸಿದರು. ಪ್ರತಿದಿನ ಎಸ್‌ಪಿಪಿಗಳು ನೇಮಕವಾಗುತ್ತಾರೆ. ಹಾಗೆಂದು ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಇಂದೇ ಆಕ್ಷೇಪಣೆ ಸಲ್ಲಿಸಿ ಎಂದು ಸೂಚಿಸಿ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು.
ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗ್ಗೆ ನಡೆಯಬೇಕಿತ್ತು. ಆಕ್ಷೇಪ ಸಲ್ಲಿಸಲು ಸಮಯ ಅವಕಾಶ ಬೇಕೆಂದು ಕೇಳಿದ ಹಿನ್ನಲೆಯಲ್ಲಿ ಮಧ್ಯಾಹ್ನಕ್ಕೆ ಮುಂದೂಡಿಕೆಯಾಗಿದೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆದು ರೇವಣ್ಣ ಅವರಿಗೆ ಜಾಮೀನು ದೊರೆತರೆ ಇಂದೇ ಅವರು ಬಿಡುಗಡೆಯಾಗುವ ಸಾಧ್ಯತೆ ಇದೆ.