ಬೆಂಗಳೂರು, ಆ. 14- ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಇಂದು ನೂತನ ಏಕದಿನ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ನಂಬರ್ 2 ಸ್ಥಾನ ಅಲಂಕರಿಸಿದ್ದರೆ, ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಭಾರತೀಯರು ದರ್ಬಾರ್ ನಡೆಸಿದ್ದಾರೆ.
ಪಾಕಿಸ್ತಾನದ ನಾಯಕ ಬಾಬರ್ ಆಝಮ್ (824)ಗಿಂತ 59 ಅಂಕ ಕಡಿಮೆ ಹೊಂದಿರುವ ರೋಹಿತ್ ಶರ್ಮಾ, ನಂಬರ್ 1 ಸ್ಥಾನಕ್ಕೇರುವ ಸನಿಹದಲ್ಲಿದ್ದಾರೆ. ಇನ್ನೂ ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಕ್ರಮವಾಗಿ 3 ಹಾಗೂ 4ನೇ ಸ್ಥಾನದಲ್ಲಿದ್ದಾರೆ.
ಶ್ರೀಲಂಕಾ ವಿರುದ್ಧ ನಡೆದಿದ್ದ ಮೂರು ಪಂದ್ಯಗಳ ಏಕದಿನ ಸರಣಿಯ ವೇಳೆ ಬ್ಯಾಕ್ ಟು ಬ್ಯಾಕ್ ಅಧರ್ಶತಕ ಸಿಡಿಸಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ, 141.44 ಸ್ಟ್ರೈಕ್ ರೇಟ್‌ನಲ್ಲಿ 157 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ ಕೇವಲ 58 ರನ್ ಸಿಡಿಸಿದ್ದರು.
ಏಕದಿನ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಕೇಶವ ಮಹಾರಾಜ್, ಆಸ್ಟ್ರೇಲಿಯಾದ ಜಾಶ್ ಹೇಝಲ್‌ವುಡ್, ಆಡಂ ಝಂಪಾ ಅಗ್ರ 3 ಸ್ಥಾನದಲ್ಲಿದ್ದರೆ, ಭಾರತದ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ 4 ವಿಕೆಟ್ ಪಡೆದು 4ನೇ ಸ್ಥಾನದಲ್ಲಿದ್ದರೆ, ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮದ್ ಸಿರಾಜ್ ಕ್ರಮವಾಗಿ 8 ಮತ್ತು 10ನೇ ಸ್ಥಾನದಲ್ಲಿದ್ದಾರೆ.