ಬೆಂಗಳೂರು,ಫೆ.22- ಎಂಎಸ್‍ಐಎಲ್ ಸಂಸ್ಥೆಯಡಿ ಪರಿಶಿಷ್ಟ ಜಾತಿ, ಪಂಗಡದವರಿಗೂ ಅವಕಾಶ ಕಲ್ಪಿಸಲು ಎಂ ಪ್ಯಾನಲ್ ಮಾಡಿಸಿಕೊಳ್ಳಲು ಕಡ್ಡಾಯವಾಗಿ ಮೀಸಲಾತಿ ಅಳವಡಿಸಿಕೊಳ್ಳಬೇಕೆಂದು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಶಿಫಾರಸ್ಸು ಮಾಡಿದೆ. ವಿಧಾನಸಭೆಯಲ್ಲಿಂದು ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮಂಡಿಸಿದ ಸಮಿತಿಯ 2023-24 ನೇ ಸಾಲಿನ 16 ನೇ ವಿಧಾನಸಭೆಯ 2 ನೇ ವರದಿಯಲ್ಲಿ ಈ ಶಿಫಾರಸ್ಸು ಮಾಡಲಾಗಿದೆ.
ಸಂಸ್ಥೆಯಡಿ ನಡೆಯುತ್ತಿರುವ ಎಲ್ಲಾ ಘಟಕಗಳಲ್ಲಿ ಹೊರಗುತ್ತಿಗೆ ಯಲ್ಲಿ ಪಡೆಯುತ್ತಿರುವ ಮಾನವ ಸಂಪನ್ಮೂಲವನ್ನು ಕಡ್ಡಾಯವಾಗಿ ಮೀಸಲಾತಿ ಅನುಸರಿಸಬೇಕು. ಬಡವರು ಹಾಗೂ ಎಸ್‍ಸಿ/ಎಸ್ಟಿ ಜನಾಂಗದವರು ವಾಸಿಸುತ್ತಿರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಜನವಸತಿ ಕೇಂದ್ರ ತೆರೆಯಲು ಶಿಫಾರಸ್ಸು ಮಾಡಿದೆ. ರಾಜ್ಯದ ಗಡಿಭಾಗದಲ್ಲಿ ಹೊರರಾಜ್ಯದ ಸೇಂದಿ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುವುದನ್ನು ತಪ್ಪಿಸಲು ಎಂಎಸ್‍ಐಎಲ್ ಮಳಿಗೆಗಳನ್ನು ತೆರೆಯಲು ಸೂಚಿಸಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ನಿವೇಶನಗಳನ್ನು ಶೇ.24.1 ರಷ್ಟು ಎಸ್‍ಸಿ/ಎಸ್ಟಿ ಜನಾಂಗದವರಿಗೆ ಮೀಸಲಿಡಬೇಕು. ಮೂಲೆ ನಿವೇಶನಗಳು ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ನಿವೇಶನ ಹರಾಜು ಮಾಡುವಾಗ ಎಸ್‍ಸಿ/ಎಸ್ಟಿ ಮೀಸಲು ಬಿಂದುಗಳನ್ನು ಗುರುತಿಸಿ ಪ್ರಕಟಿಸುವಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಎಂಎಸ್‍ಎಂಇ ಯಲ್ಲೂ ಎಸ್‍ಸಿ/ಎಸ್ಟಿ ಜನಾಂಗದವರಿಗೆ ಶೇ.24.1 ರಷ್ಟು ಸೌಲಭ್ಯಗಳನ್ನು ಮೀಸಲಿಡಬೇಕು ಎಂದು ತಿಳಿಸಲಾಗಿದೆ.
ಎಸ್‍ಸಿ/ಎಸ್ಟಿ ಜನಾಂಗದವರನ್ನು ಕುಶಲಕರ್ಮಿಗಳನ್ನಾಗಿಸಲು ಪರಿಣಾಮಕಾರಿ ಕ್ರಮ ರೂಪಿಸಬೇಕು. ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲೂ ಸಮಾಜ ಕಲ್ಯಾಣ ಇಲಾಖೆಯಿಂದ ಒಂದು ಬಾರಿಗೆ ವಿಶೇಷ ಅನುದಾನವನ್ನು ಪಡೆಯಲು ಶಿಫಾರಸ್ಸು ಮಾಡಬೇಕು ಎಂದು ಉಲ್ಲೇಖಿಸಲಾಗಿದೆ.
ರಾಜಕಾರಣಕ್ಕೆ ಬರಲ್ಲ, ಚುನಾವಣೆಗೆ ನಿಲ್ಲಲ್ಲ : ಡಾಲಿ ಧನಂಜಯ್
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕಲ್ಲು ಗಣಿ ಅಥವಾ ಮರಳು ಗಣಿ ಹಂಚಿಕೆ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಉತ್ಪನ್ನಗಳು ಸಿಗುವ ಬ್ಲಾಕ್‍ಗಳನ್ನು ಇತರೆ ಸಮುದಾಯದವರಿಗೆ ನೀಡಿ ಕಡಿಮೆ ಪ್ರಮಾಣದ ಉತ್ಪನ್ನ ಲಭಿಸುವ ಬ್ಲಾಕ್‍ಗಳನ್ನು ಎಸ್‍ಸಿ/ಎಸ್ಟಿ ಜನಾಂಗದವರಿಗೆ ಹಂಚಿಕೆ ಮಾಡುತ್ತಿರುವುದು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ಬ್ಲಾಕ್‍ಗಳ ಹಂಚಿಕೆಯನ್ನು ಕಡ್ಡಾಯವಾಗಿ ರೋಸ್ಟರ್ ಮಾದರಿಯಲ್ಲಿ ಹಂಚಿಕೆ ಮಾಡಬೇಕೆಂದು ಶಿಫಾರಸ್ಸು ಮಾಡಲಾಗಿದೆ.
ಗಣಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಜಿಲ್ಲೆಗಳ ಹಂತದಲ್ಲಿ ಪರವಾನಗಿ ನೀಡದ ಎಸ್‍ಸಿ/ಎಸ್ಟಿ ಜನಾಂಗದವರಿಗೆ 2 ವಾರಗಳಲ್ಲಿ ಪರವಾನಗಿ ನೀಡಬೇಕು. ಗಣಿಗೆ ಸಂಬಂಧಿಸಿದಂತೆ ಟೆಂಡರ್ ಮತ್ತು ಲೀಸ್ ಎರಡರಲ್ಲಿಯೂ ಕಡ್ಡಾಯವಾಗಿ ಮೀಸಲಾತಿ ಅನುಸರಿಸಬೇಕು ಎಂದು ವರದಿ ಶಿಫಾರಸ್ಸು ಮಾಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆ ಅವ ಮುಗಿದಿದ್ದರೂ ಶೌಚಾಲಯ ಟೆಂಡರ್ ಅನ್ನುಮುಂದುವರೆಸಲಾಗುತ್ತಿದ್ದು, ಕೂಡಲೇ ರದ್ದುಪಡಿಸಿ ಮೀಸಲಾತಿ ಅನ್ವಯ ಕ್ರಮ ಕೈಗೊಳ್ಳಬೇಕು. ಎಸ್‍ಸಿ/ಎಸ್ಟಿ ಜನಾಂಗದವರು ಜಾಹೀರಾತು ವಲಯದಲ್ಲಿ ತೊಡಗಿಸಿಕೊಳ್ಳಲು ಕಡ್ಡಾಯವಾಗಿ ಶೇ.24.1 ರಷ್ಟನ್ನು ಮೀಸಲಾತಿ ನೀಡಬೇಕು. ಮುಖ್ಯ ವಾಣಿಜ್ಯ ಸ್ಥಳಗಳಲ್ಲಿ ರೋಸ್ಟರ್ ಬಿಂದುಗಳ ರೀತಿಯಲ್ಲಿ ಟೆಂಡರ್ ಕಡತಗಳನ್ನು ಎಸ್‍ಸಿ/ಎಸ್ಟಿ ಜನಾಂಗದವರಿಗೆ ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿದೆ.