Thursday, December 12, 2024
Homeರಾಜ್ಯಹಿರಿಯ ಪತ್ರಕರ್ತ ಎನ್.ಅರ್ಜುನ್ ದೇವ ನಿಧನ

ಹಿರಿಯ ಪತ್ರಕರ್ತ ಎನ್.ಅರ್ಜುನ್ ದೇವ ನಿಧನ

ಬೆಂಗಳೂರು,ಏ.24- ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎನ್.ಅರ್ಜುನ್ ದೇವ(88) ಅವರು ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕೆಂಗೇರಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಕೋಲಾರ ಜಿಲ್ಲೆಯ ವೇಮಗಲ್ ಮೂಲದವರಾದ ಅರ್ಜುನ್ ದೇವ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರ ಹುಟ್ಟೂರಾದ ವೇಮಗಲ್ ಸಮೀಪದ ಚೌಡದೇವನಹಳ್ಳಿಯಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನೆರವೇರಲಿದೆ.

ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ತಾಯಿನಾಡು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು, ವಿಧಾನಸೌಧದ ವರದಿಗಾರಿಕೆಗೆ ಹೊಸ ಅರ್ಥ ಕಲ್ಪಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಜಾವಾಣಿ ಪತ್ರಿಕೆಯಿಂದ ನಿವೃತ್ತರಾದ ನಂತರ ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು.

ನಂತರ ಅವರು ಸೂರ್ಯೋದಯ ಮತ್ತಿತರ ಪತ್ರಿಕೆಗಳಿಗೂ ಸಂಪಾದಕರಾಗಿ ಕಾರ್ಯ ನಿರ್ವಹಿಸಿ ಜನಮನಗೆದ್ದಿದ್ದರು. ಇವರಿಗೆ 1984ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಪತ್ರಕರ್ತರ ಸಂಘದ ಅತ್ಯುತ್ತಮ ತನಿಖಾ ವರದಿಗಾಗಿ ನೀಡುವ ಚಿನ್ನದ ಪದಕ ಸೇರಿದಂತೆ ಗಣ್ಯ ಪತ್ರಕರ್ತರಿಗೆ ನೀಡುವ ಹಲವು ಪ್ರಶಸ್ತಿಗಳು ಕೂಡ ಇವರಿಗೆ ಸಂದಿವೆ.

ಇವರ ಗರಡಿಯಲ್ಲಿ ಪಳಗಿದ್ದ ಹಲವಾರು ಪತ್ರಕರ್ತರು ಇಂದು ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಪ್ರಮುಖ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದಲ್ಲಿರುವ ಎಲ್ಲಾ ಪ್ರಮುಖ ರಾಜಕಾರಣಿಗಳಿಂದಲೂ ಅಜಾತಶತ್ರು ಎಂದೇ ಕರೆಸಿಕೊಳ್ಳುತ್ತಿದ್ದ ಅರ್ಜುನ್ ದೇವ ಅವರ ನಿಧನಕ್ಕೆ ರಾಜಕಾರಣಿಗಳು ಹಾಗೂ ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀಯುತರ ನಿಧನಕ್ಕೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ವರದಿಗಾರರ ಕೂಟ, ಪ್ರೆಸ್‍ಕ್ಲಬ್ ಸೇರಿದಂತೆ ಹಲವಾರು ಸಂಘಟನೆಗಳು ಸಂತಾಪ ಸೂಚಿಸಿವೆ.

RELATED ARTICLES

Latest News