Monday, October 14, 2024
Homeಜಿಲ್ಲಾ ಸುದ್ದಿಗಳು | District Newsಶಿವಮೊಗ್ಗ : ಗಣೇಶ ಉತ್ಸವದಲ್ಲಿ ಡೋಲು ಭಾರಿಸುವ ವಿಚಾರಕ್ಕೆ ಗುಂಪು ಘರ್ಷಣೆ

ಶಿವಮೊಗ್ಗ : ಗಣೇಶ ಉತ್ಸವದಲ್ಲಿ ಡೋಲು ಭಾರಿಸುವ ವಿಚಾರಕ್ಕೆ ಗುಂಪು ಘರ್ಷಣೆ

Shivamogga: A group clash during Ganesh Utsav

ಶಿವಮೊಗ್ಗ, ಸೆ.8– ಗಣೇಶ ವಿಸರ್ಜನೆ ವೇಳೆ ಡೋಲು ಬಡಿಯುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕಲ್ಲುತೂರಾಟ ನಡೆದಿರುವ ಘಟನೆ ಹೊಳೆಹೊನ್ನೂರು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ನಡೆದಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್‌‍ ಕಾನ್ಸ್ ಟೆಬಲ್‌ಗಳು ಸೇರಿದಂತೆ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಗಣೇಶ ಹಬ್ಬಕ್ಕಾಗಿ ಪ್ರತಿಷ್ಠಾಪಿಸಿದ್ದ ವಿನಾಯಕ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯು ವಾಗ ಅರಬಿಳಚಿ ಕ್ಯಾಂಪ್‌ ಗ್ರಾಮದ ಬಳಿ ಡೋಲು ಬಾರಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ.

ಇದು ವಿಕೋಪಕ್ಕೆ ತಿರುಗಿ ಪರಸ್ಪರ ಕಲ್ಲು ತೂರಾಟ ನಡೆದಿದ್ದು, ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ. ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದರೂ ಸಾಧ್ಯವಾಗದೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಹೆಚ್ಚಿನ ಪಡೆಗಳು ಸ್ಥಳಕ್ಕೆ ದಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದ್ದು, ಹೆಚ್ಚುವರಿ ಪೊಲೀಸ್‌‍ ವರಿಷ್ಠಾಧಿಕಾರಿ, ಭದ್ರಾವತಿ ಡಿವೈಎಸ್‌‍ಪಿ ಸೇರಿದಂತೆ ಹಲವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಗ್ರಾಮದಲ್ಲಿ ಎರಡು ಸಂಘಟನೆಗಳು ಗಣೇಶ ಪ್ರತಿಷ್ಠಾಪನೆ ಮಾಡಿದ್ದವು. ಆದರೆ, ಡೋಲು ಬಾರಿಸಲು ಒಂದೇ ತಂಡಕ್ಕೆ ಎರಡೂ ಸಂಘಟನೆಗಳು ಒಪ್ಪಂದ ಮಾಡಿಕೊಂಡಿದ್ದವು. ಮೊದಲು ನಮ ಮೆರವಣಿಗೆಗೆ ಬರಬೇಕು ಎಂದು ಎರಡೂ ಸಂಘಟನೆಗಳು ಪಟ್ಟು ಹಿಡಿದಾಗ ವಿವಾದ ಸೃಷ್ಟಿಯಾಯಿತು.

ಒಬ್ಬರು ಮಾತ್ರ ಡೋಲು ಬಾರಿಸುವಂತೆ ಪೊಲೀಸರು ಸೂಚನೆ ನೀಡಿದ್ದರು. ಆದರೆ, ಅದನ್ನು ಉಲ್ಲಂಘಿಸಿ ಪ್ರತಿಷ್ಠೆಗಾಗಿ ಎರಡೂ ಸಂಘಟನೆಗಳೂ ಡೋಲು ಬಾರಿಸಿದ್ದು ಅಶಾಂತಿಗೆ ಕಾರಣವಾಯಿತು ಎಂದು ಶಿವಮೊಗ್ಗ ಎಸ್‌‍ಪಿ ಮಿಥುನ್‌ಕುಮಾರ್‌ ತಿಳಿಸಿದ್ದಾರೆ.ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಯಾವುದೇ ಅನಾಹುತ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಗಾಯಗೊಂಡಿರುವ ಪೊಲೀಸ್‌‍ ಕಾನ್ಸ್ ಟೆಬಲ್‌ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ನಡುವೆ ಗುಂಪಿನ ಹಲವು ಸದಸ್ಯರು ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದೆ. ಹೊಳೆಹೊನ್ನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ತೀವ್ರ ಸೂಕ್ಷ್ಮ ಪ್ರದೇಶವಾದ ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಗಣೇಶ ಪ್ರತಿಷ್ಠಾಪನೆ ಮಾಡಿದ್ದು, ಒಂದು ತಿಂಗಳವರೆಗೆ ವಿವಿಧೆಡೆ ಅದ್ಧೂರಿ ಕಾರ್ಯಕ್ರಮಗಳು ನಡೆಯುತ್ತವೆ. ಈ ನಡುವೆ ಪೊಲೀಸರು ಬಿಗಿ ಭದ್ರತೆ ನಡುವೆ ಪರಿಸ್ಥಿತಿ ಎದುರಿಸುವ ಸವಾಲುಗಳು ಎದುರಾಗಿವೆ.ಗಣೇಶ ಚತುರ್ಥಿ ದಿನದಂದೇ ಗುಂಪುಘರ್ಷಣೆ ನಡೆದಿರುವುದು ಶಿವಮೊಗ್ಗದಲ್ಲಿ ಆತಂಕ ಶುರುವಾಗಿದೆ.

20 ಮಂದಿ ಬಂಧನ
=ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್‌‍ ಠಾಣೆ ವ್ಯಾಪ್ತಿಯ ಅರಬಿಳಚಿ ಕ್ಯಾಂಪ್‌ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ 20 ಮಂದಿಯನ್ನು ಬಂಧಿಸಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌‍ ಮಹಾನಿರ್ದೇಶಕರಾದ ಹಿತೇಂದ್ರ ಅವರು ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ವಿವರಿಸಿದರು. ನಿನ್ನೆ ಸಂಜೆ ಅರಬಿಳಚಿ ಕ್ಯಾಂಪ್‌ ಗ್ರಾಮದಲ್ಲಿ ಎರಡೂ ಸಂಘಟನೆಗಳು ಗಣೇಶಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದವು. ಆದರೆ, ಎರಡೂ ಸಂಘಟನೆಗಳು ಮೆರವಣಿಗೆಗೆ ಒಂದೇ ಡೋಲಿನ ತಂಡದವರಿಗೆ ಒಪ್ಪಂದ ಮಾಡಿಕೊಂಡಿದ್ದವು.

ಸ್ಥಳಕ್ಕೆ ಬಂದ ಡೋಲು ತಂಡ ನಮಗೇ ಮೊದಲು ಬರಬೇಕು ಎಂದು ಎರಡೂ ಸಂಘಟನೆಗಳು ಪಟ್ಟು ಹಿಡಿದವು. ಆ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿ ಕಲ್ಲು ತೂರಾಟ ನಡೆದು ಹೊಡೆದಾಟ ನಡೆದಿದೆ.ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದ್ದು, ಈಗ ಅಲ್ಲಿ ಶಾಂತಿಯುತವಾಗಿದೆ ಎಂದು ಹಿತೇಂದ್ರ ಅವರು ತಿಳಿಸಿದರು.

RELATED ARTICLES

Latest News