ಪ್ರವಾಸಿ ತಾಣವಾಗಿ ಶಿವಮೊಗ್ಗ

Spread the love

ಶಿವಮೊಗ್ಗ, ಜ.9- ಜಿಲ್ಲಾಯ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಇಎಸ್‍ಐ ಆಸ್ಪತ್ರೆ ನಿರ್ಮಾಣ, ಜೋಗ ಹಾಗೂ ಸಕ್ರೆಬೈಲು ಆನೆ ಬಿಡಾರ ಅಭಿವೃದ್ಧಿಗೆ ಸರ್ಕಾರದ ಅನುಮೋದನೆ ದೊರೆತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನವುಲೆಯ 5 ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ 100 ಹಾಸಿಗೆಗಳ ಇಎಸ್‍ಐ ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದೆ. 71.27 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.

ಜನವರಿ 16 ಟೆಂಡರ್ ಸಲ್ಲಿಕೆಗೆ ಕಡೆಯ ದಿನವಾಗಿದ್ದು, 15 ತಿಂಗಳಲ್ಲಿ ನಿರ್ಮಾಣ ಕಾಮಗಾರಿ ಮುಗಿಸುವ ನಿಬಂಧನೆ ವಿಧಿಸಲಾಗಿದೆ. ಇದರಿಂದ ಲಕ್ಷಾಂತರ ಕಾರ್ಮಿಕರು ಶಿವಮೊಗ್ಗದಲ್ಲಿಯೇ ಆತ್ಯಾಧುನಿಕ ಚಿಕಿತ್ಸೆ ಪಡೆಯಬಹುದು ಎಂದು ಅವರು ಹೇಳಿದ್ದಾರೆ.

# ಆನೆ ಬಿಡಾರ ಸಮಗ್ರ ಅಭಿವೃದ್ಧಿ:
ನಗರಕ್ಕೆ ಸಮೀಪವಿರುವ ಸಕ್ರೆಬೈಲು ಅನೆ ಬಿಡಾರದ ಸಮಗ್ರ ಅಭಿವೃದ್ಧಿ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ಆನೆ ಬಿಡಾರಕ್ಕೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಬಹುದು ಎಂದಿದ್ದಾರೆ.

# 165 ಕೋಟಿ ವೆಚ್ಚದಲ್ಲಿ ಜೋಗ್ ಅಭಿವೃದ್ಧಿ:
ವಿಶ್ವ ವಿಖ್ಯಾತ ಜೋಗಜಲಪಾತ ಅಭಿವೃದ್ಧಿ ಸಂಬಂಧ ರಾಜ್ಯ ಸರ್ಕಾರ 165 ಕೋಟಿ ವೆಚ್ಚದ 24 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಲ್ಲಿ ಜೋಗ ಜಲಪಾತ ಬಳಿ ಬೃಹತ್ ಪ್ರವೇಶದ್ವಾರ, ಮಕ್ಕಳ ಉದ್ಯಾನವನ, ಉಪಹಾರ ಗೃಹ, ವಿಶ್ರಾಂತಿ ಕೊಠಡಿ, ರೋಪ್ ವೇ ನಿರ್ಮಾಣ ಮಾಡಲಾಗುತ್ತದೆ.

ಇದಲ್ಲದೆ ಬ್ಯಾರೇಜ, ಬೋಟಿಂಗ್ ಮತ್ತು ವ್ಯೂ ಡೆಕ್ ನಿರ್ಮಾಣ, ವಾಹನ ನಿಲ್ದಾಣ ಸೌಲಭ್ಯ, ಹೋಂ ಸ್ಟೇ, ಮಹಾತ್ಮಗಾಂಧಿ ಜಲವಿದ್ಯುತ್ ಕೇಂದ್ರ ಮತ್ತು ಮ್ಯೂಸಿಯಂಗೆ ಟ್ರಾಲಿ ಮೂಲಕ ಪ್ರವಾಸ, ತಲಕಳಲೆಯಲ್ಲಿ ಜಲಕ್ರೀಡೆ ಇತ್ಯಾದಿ ಹಲವಾರು ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಳ್ಳಲಿದೆ.

ಆ ಮೂಲಕ ವಿಶ್ವ ವಿಖ್ಯಾತ ಜೋಗ ಜಲಪಾತವು ಇನ್ನಷ್ಟು ಆಕರ್ಷಣೀಯವಾಗಿ ಪ್ರವಾಸಿಗರನ್ನು ಸೆಳೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Facebook Comments