ಬೆಂಗಳೂರು,ಅ.28- ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಹಲವು ಸಚಿವರು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನೆಯಲ್ಲಿ ಭೋಜನಕೂಟ ನಡೆಸಿರುವುದು, ಅದರಲ್ಲೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ದೂರ ಇಟ್ಟಿರುವುದು ಹಲವು ಕುತೂಹಲಗಳನ್ನು ಕೆರಳಿಸಿದೆ.
ಸದಾಶಿವನಗರದ ಪರಮೇಶ್ವರ್ ಮನೆಯಲ್ಲಿ ನಡೆದ ಬೋಜನಕೂಟದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಭಾಗವಹಿಸಿದ್ದರು. ಎರಡುವರೆ ವರ್ಷದ ಬಳಿಕ ಅಧಿಕಾರ ಹಂಚಿಕೆ ಸೂತ್ರ ಜಾರಿಯಾಗಲಿದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಂಡ್ಯ ಕ್ಷೇತ್ರದ ಶಾಸಕ ರವಿ ಗಣಿಗ ನಿನ್ನೆಯಷ್ಟೆ ಹೇಳಿಕೆ ನೀಡಿದ್ದರು.
ಅದರ ಬೆನ್ನಲ್ಲೆ ರಾತ್ರಿಯೇ ಬೋಜನಕೂಟ ನಡೆಸಿರುವುದು ತೆರೆಮರೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಗಂಭೀರತೆಯನ್ನು ಬಹಿರಂಗ ಪಡಿಸಿದೆ. ಇದೊಂದು ಸೌಜನ್ಯದ ಭೇಟಿಯಷ್ಟೆ. ನಾನು, ಮುಖ್ಯಮಂತ್ರಿಯವರು, ಮಹದೇವಪ್ಪ, ಸತೀಶ್ ಜಾರಕಿಹೊಳಿಯವರು ಊಟಕ್ಕೆ ಸೇರಿದ್ದೇವು, ಇದರಲ್ಲಿ ರಾಜಕೀಯ ಇಲ್ಲ ಎಂದು ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಪಾಕ್ ವಿರುದ್ಧ ಗೆದ್ದು ‘ಜೈ ಹನುಮಾನ್’ ಎಂದ ದಕ್ಷಿಣ ಆಫ್ರಿಕಾ ಆಟಗಾರ
ಸತೀಶ್ ಜಾರಕಿಹೊಳಿ ಕೂಡ ಮಾತನಾಡಿದ್ದು, ರಾಜಕಾರಣಿಗಳು ಸಭೆ ಸೇರಿದ್ದಾಗ ರಾಜಕಾರಣ ಚರ್ಚೆಯಾಗದೆ ಇರುತ್ತದೆಯೇ. ಆದರೆ ಸದ್ಯಕ್ಕೆ ಗಂಭೀರವಾಗಿ ತೆಗೆದುಕೊಳ್ಳುವಂತಹದ್ದೇನು ಇಲ್ಲ. ಯಾವುದೇ ಸಮಸ್ಯೆಗಳಿದ್ದರೂ ನಮ್ಮಲ್ಲೆ ಬಗೆ ಹರಿಸಿಕೊಳ್ಳುತ್ತೇವೆ ಎಂದು ಕುತೂಹಲ ಕೆರಳಿಸಿದ್ದಾರೆ.
ನಾನಾ ರೀತಿಯ ಚರ್ಚೆಗಳು:
ಪರಮೇಶ್ವರ್ ಮನೆಯಿಂದ ಕೂಗಳತೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮನೆಯಿದೆ. ಡಿ.ಕೆ.ಶಿವಕುಮಾರ್ ನಿನ್ನೆ ಮನೆಯಲ್ಲೇ ಇದ್ದರೂ ಕೂಡ ಅವರನ್ನು ಬೋಜನಕೂಟಕ್ಕೆ ಆಹ್ವಾನ ಮಾಡದೆ ಇರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಮುಖ್ಯಮಂತ್ರಿ ಸಮ್ಮುಖದಲ್ಲಿ ನಡೆದ ರಹಸ್ಯ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಹಸ್ತಕ್ಷೇಪದ ಬಗ್ಗೆ ತೀವ್ರ ಅಸಮಧಾನ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಲಾಗಿದೆ. 24 ಮಂದಿ ಶಾಸಕರೊಂದಿಗೆ ವಿದೇಶಿ ಪ್ರವಾಸಕ್ಕೆ ಸತೀಶ್ ಜಾರಕಿಹೊಳಿ ಯೋಜನೆ ರೂಪಿಸಿದ್ದು, ಇದು ಪಕ್ಷದಲ್ಲಿ ಬಲಾಬಲ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಿದೆ ಎಂಬ ವ್ಯಾಖ್ಯಾನಗಳಿವೆ.
ಶಾಸಕರೊಂದಿಗೆ ವಿದೇಶಿ ಅಥವಾ ಪ್ರತ್ಯೇಕ ಪ್ರವಾಸವನ್ನು ಕೈ ಬಿಡಿ ಎಂದು ಸಿದ್ದರಾಮಯ್ಯನವರು ಸತೀಶ್ ಜಾರಕಿಹೊಳಿ ಅವರ ಮನವೋಲಿಸಿದ್ದಾರೆ. ಹಾಗೆಯೇ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಸ್ರ್ಪಧಿಸಲು ಸತೀಶ್ ಜಾರಕಿಹೊಳಿ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡಿಸುವ ಬಗ್ಗೆಯೂ ಭರವಸೆ ನೀಡಲಾಗಿದೆ ಎಂದು ಹೇಳಲಾಗಿದೆ.
ನಿಗಮ ಮಂಡಳಿ ನೇಮಕಾತಿ, ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ, ಬೆಳಗಾವಿ ಜಿಲ್ಲಾ ರಾಜಕಾರಣ, ಅಧಿಕಾರ ಹಂಚಿಕೆಯ ಸೂತ್ರ, ಮುಖ್ಯಮಂತ್ರಿ, ಸಚಿವರು ಹಾಗೂ ಉಪಮುಖ್ಯಮಂತ್ರಿ ಹುದ್ದೆಗಳ ಕುರಿತು ಶಾಸಕರು ನೀಡುತ್ತಿರುವ ಹೇಳಿಕೆಗಳು, ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಅನುಸರಿಸಬೇಕಾದ ತಂತ್ರಗಾರಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿವೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರ ದಾಳ:
ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಕೆಲ ಶಾಸಕರು ಬಹಿರಂಗ ಹೇಳಿಕೆ ನೀಡುತ್ತಿದ್ದಂತೆ ಸಕ್ರಿಯರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತ ಸಮುದಾಯದ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿರುವುದು ನಾನಾ ರೀತಿಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.
ಇತ್ತೀಚೆಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಜಾತಿವಾರು ಪ್ರಾತಿನಿಧ್ಯಕ್ಕನುಗುಣವಾಗಿ ರಾಜ್ಯದಲ್ಲಿ ಮೂರು ಉಪಮುಖ್ಯಮಂತ್ರಿಗಳ ಹುದ್ದೆಗಳು ಸೃಷ್ಟಿಯಾಗಬೇಕು ಎಂದು ಹೇಳಿಕೆ ನೀಡಿದರು. ಅದನ್ನು ಇನ್ನಷ್ಟು ಲಂಭಿಸಿದ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರ ಜೊತೆಗೆ ಲಿಂಗಾಯಿತ ಹಾಗೂ ಮಹಿಳಾ ಖೋಟಾವೂ ಸೇರಿ ಐದು ಮಂದಿಯನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದಿದ್ದರು.
ಸಚಿವ ಎಂ.ಬಿ.ಪಾಟೀಲ್ ಹಾಗೂ ಇತರರು ಇದಕ್ಕೆ ಧ್ವನಿಗೂಡಿಸಿದರು. ಪರಿಶಿಷ್ಟ ಪಂಗಡಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಹೈಕಮಾಂಡ್ ಗಮನ ಸೆಳೆದಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದರು. ಒಂದಷ್ಟು ದಿನ ಈ ಚರ್ಚೆಗಳು ನಡೆದಿದ್ದವು. ಪರಿಶಿಷ್ಟ ಜಾತಿಯಿಂದ ಪರಮೇಶ್ವರ್, ಪಂಗಡದಿಂದ ಸತೀಶ್ ಜಾರಕಿಹೊಳಿ ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.
ಪ್ರಮುಖವಾಗಿ ಪರಮೇಶ್ವರ್ ಅವರು ಖುದ್ದು ಮುಖ್ಯಮಂತ್ರಿ ಹುದ್ದೆಗೆ ಟವಲ್ ಹಾಕಿ ಹಲವು ಬಾರಿ ವೈಪಲ್ಯ ಅನುಭವಿಸಿದ್ದಾರೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡು ಕೂದಲೆಳೆಯ ಅಂತರದಲ್ಲಿ ಅವಕಾಶ ಕಳೆದುಕೊಂಡ ಅವರು ಪಕ್ಷದ ಅಧ್ಯಕ್ಷರಾಗಿರುವ ಕಾರಣಕ್ಕೆ ವಿಧಾನಪರಿಷತ್‍ಗೆ ನಾಮನಿರ್ದೇಶನಗೊಂಡು ಸಚಿವ ಸ್ಥಾನ ಪಡೆದುಕೊಂಡಿದ್ದರು. ಅವಕಾಶ ಸಿಕ್ಕಾಗಲೆಲ್ಲಾ ದಲಿತ ಮುಖ್ಯಮಂತ್ರಿ ಹುದ್ದೆಯ ಪ್ರಸ್ತಾಪ ಮಾಡುತ್ತಿದ್ದರು. ಆ ವೇಳೆ ಕೆ.ಹೆಚ್.ಮುನಿಯಪ್ಪ ಹಾಗೂ ಸಚಿವರಾಗಿದ್ದ ಹೆಚ್.ಆಂಜನೇಯ ಅವರು ಮುಂದೆ ಬಂದು ತಾವು ಕೂಡ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ಎಂದು ಹೇಳುತ್ತಿದ್ದರು.
ತಮಿಳುನಾಡಿನ 12 ಮೀನುಗಾರರನ್ನು ಬಂಧಿಸಿದ ಮಾಲ್ಡೀವ್ಸ್
ಅಲ್ಲಿಗೆ ದಲಿತ ಸಮುದಾಯಗಳ ಒಳಪಂಗಡಗಳಲ್ಲೇ ಪೈಪೋಟಿ ಉಂಟಾಗಿ ದಲಿತ ಮುಖ್ಯಮಂತ್ರಿ ಹುದ್ದೆ ಚರ್ಚೆ ನಗಣ್ಯವಾಗುತ್ತಿತ್ತು. ಮುನಿಯಪ್ಪ, ಆಂಜನೇಯ ಆಗ ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದರು ಎಂಬುದು ವಿಶೇಷ. ಸುದೀರ್ಘ ಅವ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರ ಪ್ರತಿಸ್ರ್ಪಧಿ ಬಣದಲ್ಲಿ ಗುರುತಿಸಿಕೊಂಡಿದ್ದರು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಪರಮೇಶ್ವರ್ ಕಾಂಗ್ರೆಸ್ ಸರ್ಕಾರದಲ್ಲೂ ಅದೇ ಹುದ್ದೆಯ ನಿರೀಕ್ಷೆಯಲ್ಲಿದ್ದರಾದರೂ ಹೈಕಮಾಂಡ್ ಅವಕಾಶ ನೀಡಿಲ್ಲ. ಡಿ.ಕೆ.ಶಿವಕುಮಾರ್ ಅವರೊಬ್ಬರಿಗೆ ಮಾತ್ರ ಪ್ರಮುಖ ಹುದ್ದೆ ನೀಡಿದೆ ಎಂಬ ಅಸಮಧಾನಗಳು ಕೇಳಿ ಬರುತ್ತಿವೆ.
ಸಿದ್ದರಾಮಯ್ಯ ಜನನಾಯಕ, ಹೆಚ್ಚು ಶಾಸಕರ ಬೆಂಬಲ ಹೊಂದಿದ್ದಾರೆ ಎಂಬ ವ್ಯಾಖ್ಯಾನಗಳಿವೆ. ಅದರ ಹೊರತಾಗಿಯೂ ಅಧಿಕಾರ ಹಂಚಿಕೆಯ ಸೂತ್ರ ಸಿದ್ಧವಿದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಕೆಲ ಶಾಸಕರು ಹೇಳುತ್ತಿದ್ದಾರೆ. ಅಂತಹ ಸಂದರ್ಭ ಬಂದರೆ ಮತ್ತೆ ದಲಿತ, ಲಿಂಗಾಯಿತ, ಅಲ್ಪಸಂಖ್ಯಾತ ಮುಖ್ಯಮಂತ್ರಿ ಹುದ್ದೆಗಳ ಪ್ರಸ್ತಾಪವಾಗುವ ಸಾಧ್ಯತೆ ಇದೆ.
ಕೊಹ್ಲಿ ಟೀಂ ಇಂಡಿಯಾದ 6ನೇ ಬೌಲರ್..?
2023ರ ವಿಧಾನಸಭೆ ಚುನಾವಣೆಯ ಫಲಿತಾಂಶದ ಯಶಸ್ಸನ್ನು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗಷ್ಟೆ ನೀಡುತ್ತಿದ್ದ ಚರ್ಚೆಗಳಿಂದ ಸಿಡಿಮಿಡಿಗೊಂಡಿದ್ದ ಪರಮೇಶ್ವರ್ 2013ರ ಚುನಾವಣೆಯ ಗೆಲವಿನ ಯಶಸ್ಸು ತಮಗೆ ಸಿಗಲಿಲ್ಲ ಎಂಬ ಅಸಮಧಾನವನ್ನು ಬಹಿರಂಗವಾಗಿಯೇ ಹೊರ ಹಾಕಿದ್ದರು. ಸಿದ್ದರಾಮಯ್ಯ ಅವರ ಜೊತೆ ಮುಸುಕಿನ ಗುದ್ದಟ್ಟಾ ನಡೆಸುತ್ತಿದ್ದ ಪರಮೇಶ್ವರ್ ಈಗ ಅವರ ಆಪ್ತ ಬಣದಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ದೀರ್ಘ ಕಾಲದ ಮಿತ್ರ ಡಿ.ಕೆ.ಶಿವಕುಮಾರ್ ವಿರುದ್ಧವಾಗಿ ಪರಮೇಶ್ವರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರಾಣಿಯಾಗಿ ಬಳಕೆಯಾಗಲಿದ್ದಾರೆ ಎಂಬ ಅನುಮಾನಗಳು ಕೇಳಿ ಬಂದಿವೆ.
ವಿರೋಧ ಪಕ್ಷಗಳು ಆರೋಪಿಸುವಂತೆ ಕಾಂಗ್ರೆಸ್‍ನಲ್ಲಿ ಮನೆಯೊಂದು ನೂರು ಬಾಗಿಲು ಎಂಬಂತಹ ಪರಿಸ್ಥಿತಿಯನ್ನು ಸ್ವತಃ ಆ ಪಕ್ಷದ ನಾಯಕರೇ ಸೃಷ್ಟಿಸುತ್ತಿದ್ದಾರೆ.