Sunday, May 19, 2024
Homeಬೆಂಗಳೂರುನಕಲಿ ಬೀಗದ ಕೀ ಬಳಸಿ ಅಕ್ಕನ ಮನೆಯನ್ನೇ ದೋಚಿದ್ದ ತಂಗಿ ಅರೆಸ್ಟ್

ನಕಲಿ ಬೀಗದ ಕೀ ಬಳಸಿ ಅಕ್ಕನ ಮನೆಯನ್ನೇ ದೋಚಿದ್ದ ತಂಗಿ ಅರೆಸ್ಟ್

ಬೆಂಗಳೂರು, ಮೇ 7- ಅಕ್ಕನ ಮನೆಯಲ್ಲೇ ನಕಲಿ ಬೀಗದ ಕೀ ಬಳಸಿ 65 ಲಕ್ಷ ರೂ. ಬೆಲೆ ಬಾಳುವ ಚಿನ್ನದ ನಾಣ್ಯಗಳು ಮತ್ತು 52 ಲಕ್ಷ ನಗದು ಹಣವನ್ನು ಕಳವು ಮಾಡಿದ್ದ ತಂಗಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಲಗ್ಗೆರೆಯ ನಿವಾಸಿ ಉಮಾ (29) ಬಂಧಿತ ಸಹೋದರಿ.

ಈಕೆಯ ಮನೆಯಲ್ಲಿದ್ದ 5 ಲಕ್ಷ ನಗದು ಹಣ ಮತ್ತು 30 ಚಿನ್ನದ ನಾಣ್ಯಗಳನ್ನು ಹಾಗೂ ಆಕೆ ಕೆಲಸ ಮಾಡುವ ಆಟೋ ಕನ್ಸೆಲ್‌ಟೆಂಟ್‌ ಮಾಲೀಕರಿಗೆ ನೀಡಿದ್ದ 16 ಚಿನ್ನದ ನಾಣ್ಯಗಳನ್ನು ಮತ್ತು 46.90 ಲಕ್ಷ ರೂ ನಗದನ್ನು ಮಾಲೀಕರಿಂದ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಈ ಪ್ರಕರಣದಲ್ಲಿ 46 ಚಿನ್ನದ ನಾಣ್ಯಗಳು ಹಾಗೂ 51.90 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ನಾಗದೇವನಹಳ್ಳಿಯ ಆರ್‌.ಆರ್‌ ಲೇಔಟ್‌ನಲ್ಲಿ ವಾಸವಾಗಿರುವ ದೂರುದಾರರು ಸಿಮೆಂಟ್‌ ಹಾಗೂ ಕಬ್ಬಿಣದ ವ್ಯಾಪಾರ ಮಾಡಿಕೊಂಡಿರುತ್ತಾರೆ. ಇವರೊಂದಿಗೆ ಅವರ ಸಂಬಂಧಿಕರೊಬ್ಬರು ಈ ವ್ಯಾಪಾರದಲ್ಲಿ ಪಾಲುದಾರರಾಗಿರುತ್ತಾರೆ. ಏ. 22 ರಂದು ಬೆಳಗ್ಗೆ ಇವರು ಕುಟುಂಬ ಸಮೇತರಾಗಿ ಅವರ ಸ್ವಂತ ಊರಿನಲ್ಲಿ ನಡೆಯುವ ಶ್ರೀ ಚೌಡೇಶ್ವರಿ ದೇವರ ಹಬ್ಬದ ಪ್ರಯುಕ್ತ ಊರಿಗೆ ಹೋಗಿದ್ದರು.

ಊರಿಗೆ ಹೋಗುವ ಮುನ್ನಾ ಅವರ ಸಂಬಂಧಿಗೆ ಮನೆಯ ಕೀಯನ್ನು ಕೊಟ್ಟು ರಾತ್ರಿ ಮಲಗಲು ತಿಳಿಸಿದ್ದರು. ಏ.24ರಂದು ರಾತ್ರಿ ಸುಮಾರು 10.30ರ ಸಮಯದಲ್ಲಿ ಇವರ ಮನೆಯಲ್ಲಿ ಮಲಗಿಕೊಳ್ಳಲು ಅವರ ಸಂಬಂಧಿಯು ಹೋದಾಗ, ಮನೆಯಲ್ಲಿ ಬಿರುವಿನ ಬಾಗಿಲುಗಳು ತೆರೆದಿರುವುದು ಹಾಗೂ ಕೊಠಡಿಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ಗಮನಿಸಿ ಕಳ್ಳತನವಾಗಿರುವ ಬಗ್ಗೆ ಅರಿತು ಕೂಡಲೆ ಫೋನ್‌ ಮಾಡಿ ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.

ತಕ್ಷಣ ಊರಿನಿಂದ ವಾಪಸ್‌‍ ಬಂದು ನೋಡಿದಾಗ ಮನೆಯಲ್ಲಿದ್ದ ಹಣ ಮತ್ತು ಚಿನ್ನದ ನಾಣ್ಯಗಳು ಸೇರಿ ಒಟ್ಟು 65 ಲಕ್ಷ ಮೌಲ್ಯದ ವಸ್ತುಗಳು ಕಳುವಾಗಿರುತ್ತದೆಂದು ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸಂಬಂಧಿಕರನ್ನು ವಿಚಾರಿಸಿದಾಗ ಮನೆ ಮಾಲೀಕರ ಪತ್ನಿಯ ತಂಗಿಯೇ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಸಹೋದರಿ ಉಮಾ ತನ್ನಲ್ಲಿದ್ದ ನಕಲಿ ಕೀ ಬಳಸಿ ಕೊಠಡಿಯ ಬೀರುವಿನಲ್ಲಿದ್ದ ಚಿನ್ನದ ನಾಣ್ಯಗಳು ಹಾಗೂ ಮಂಚದ ಕೆಳಗೆ ಇಟ್ಟಿದ್ದ 52 ಲಕ್ಷ ನಗದು ಹಣವನ್ನು ಕಳುವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.ಈಕೆಯ ಮಾಹಿತಿ ಮೇರೆಗೆ ಹಣ ಹಾಗೂ ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News