Friday, April 4, 2025
Homeರಾಜ್ಯವಿಚಾರಣೆಗೆ ಹಾಜರಾಗುವಂತೆ ಎಚ್‌.ಡಿ.ರೇವಣ್ಣ ಮತ್ತು ಸುಪುತ್ರ ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್‌

ವಿಚಾರಣೆಗೆ ಹಾಜರಾಗುವಂತೆ ಎಚ್‌.ಡಿ.ರೇವಣ್ಣ ಮತ್ತು ಸುಪುತ್ರ ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್‌

ಹಾಸನ,ಮೇ1- ರಾಜ್ಯ ರಾಜಕೀಯದಲ್ಲಿ ಕೋಲಾಹಲ ಉಂಟು ಮಾಡಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹಾಗೂ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದೆ.
ಹೊಳೆನರಸೀಪುರದಲ್ಲಿರುವ ಅವರಿಬ್ಬರ ಮನೆಯ ಬಾಗಿಲಿಗೆ ನೋಟಿಸ್‌ ಪ್ರತಿಯನ್ನು ಅಂಟಿಸಿ ಎಸ್‌ಐಟಿ ತಂಡ ವಾಪಸ್ಸಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಯ ಬಾಗಿಲಿಗೆ ನೋಟಿಸ್‌ನ್ನು ಅಂಟಿಸಲಾಗಿದೆ. ನೋಟಿಸ್‌ನಲ್ಲಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಸ್ಥಳ ಮಹಜರು ನಡೆಸಲು ಎಸ್‌ಐಟಿ ತಂಡ ದೂರು ನೀಡಿದ ಸಂತ್ರಸ್ತ ಮಹಿಳೆಯೊಂದಿಗೆ ಹೊಳೆನರಸೀಪುರಕ್ಕೆ ತೆರಳಲಿದೆ. ಹೊಳೆನರಸೀಪುರದಲ್ಲಿರುವ ರೇವಣ್ಣ ಅವರ ಮನೆಯಲ್ಲಿ ಎಸ್‌ಐಟಿ ತಂಡ ಸ್ಥಳ ಮಹಜರನ್ನು ನಡೆಸಬೇಕಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ರೇವಣ್ಣ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಮಹಿಳೆ ದೂರು ನೀಡಿದ್ದರು.

ದೂರನ್ನು ಆಧರಿಸಿ ಹೊಳೆನರಸೀಪುರ ಟೌನ್‌ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಬಳಿಕ ಸರ್ಕಾರ ಪ್ರಕರಣವನ್ನು ಎಸ್‌ಐಟಿಗೆ ವರ್ಗಾಯಿಸಿತ್ತು.ನಿನ್ನೆ ಮಹಿಳೆಯ ಹೇಳಿಕೆಯನ್ನು ಎಸ್‌ಐಟಿ ದಾಖಲು ಮಾಡಿಕೊಂಡಿದ್ದು, ಇಂದು ಆ ಮಹಿಳೆಯ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಲಿದೆ.

ಪ್ರಜ್ವಲ್‌ ರೇವಣ್ಣ ವಾಪಸ್‌:
ವಿದೇಶಕ್ಕೆ ತೆರಳಿರುವ ಪ್ರಜ್ವಲ್‌ ರೇವಣ್ಣ ಮೇ 3ರ ತಡರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಗೊತ್ತಾಗಿದೆ. ಸದ್ಯ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಅವರು ಇದ್ದಾರೆ ಎಂದು ತಿಳಿದುಬಂದಿದೆ.

ಲುಪ್ತಾನ್ಸ್ ಏರ್‌ಲೈನ್ಸ್ ನಲ್ಲಿ ಮೇ 3ರಂದು ಪ್ರಯಾಣಿಸಲು ಪ್ರಜ್ವಲ್‌ ಟಿಕೆಟ್‌ ಬುಕ್‌ ಮಾಡಿದ್ದಾರೆ. ಹೀಗಾಗಿ ಮೇ 3ರ ಮಧ್ಯರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಮೇ 4ರಂದು ವಿಚಾರಣೆಗೆ ಎಸ್‌ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ.

RELATED ARTICLES

Latest News