Sunday, November 24, 2024
Homeರಾಜ್ಯಎಸ್‍ಐಟಿ ತಂಡ ವಿದೇಶಕ್ಕೆ ಹೋಗೋಲ್ಲ: ಪರಮೇಶ್ವರ್

ಎಸ್‍ಐಟಿ ತಂಡ ವಿದೇಶಕ್ಕೆ ಹೋಗೋಲ್ಲ: ಪರಮೇಶ್ವರ್

ಬೆಂಗಳೂರು, ಮೇ 12- ಪೆನ್‍ಡ್ರೈವ್ ಪ್ರಕರಣದಲ್ಲಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸಲು ವಿಶೇಷ ತನಿಖಾ ದಳದ ಅಧಿಕಾರಿಗಳು ವಿದೇಶಕ್ಕೆ ತೆರಳುವ ಅವಕಾಶ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಐಟಿ ಅಧಿಕಾರಿಗಳು ವಿದೇಶಕ್ಕೆ ಹೋಗಲು ಅವಕಾಶ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಇಂಟರ್ ಪೋಲ್ ಸಂಸ್ಥೆಯವರು ಪ್ರಜ್ವಲ್‍ನ ಚಲನವಲನಗಳನ್ನು ಗುರುತಿಸಿ, ಎಲ್ಲಿದ್ದಾರೆ ಎಂದು ಪತ್ತೆ ಹಚ್ಚುತ್ತಾರೆ. ಅದನ್ನು ಸಿಬಿಐಗೆ ತಿಳಿಸುತ್ತಾರೆ. ಅಲ್ಲಿಂದ ನಮ್ಮ ತನಿಖಾ ಸಂಸ್ಥೆಗಳಿಗೆ ಮಾಹಿತಿ ಬರುತ್ತದೆ. ಸದ್ಯಕ್ಕೆ ಈವರೆಗೂ ಪ್ರಜ್ವಲ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ವಿವರಿಸಿದರು.

ಸದ್ಯಕ್ಕೆ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ತನಿಖೆಯ ಮೇಲೆ ಪರಿಣಾಮ ಬೀರುವ ಯಾವುದೇ ವಿಚಾರ ಅಥವಾ ಮಾಹಿತಿಗಳನ್ನು ಸಾರ್ವಜನಿಕವಾಗಿ ಹೇಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
ಪೆನ್‍ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜೇಗೌಡರನ್ನು ಈಗಾಗಲೇ ಬಂಧಿಸಲಾಗಿದೆ. ಮುಂದಿನ ಕ್ರಮಗಳ ಬಗ್ಗೆ ಎಸ್‍ಐಟಿ ಅಧಿಕಾರಿಗಳಿಗೆ ಮಾಹಿತಿ ಇರುತ್ತದೆ. ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ.

ಹೇಳಿಕೆ ನೀಡುವಾಗ ಎಚ್ಚರ:
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಪ್ರತಿಯೊಬ್ಬರು ನೀಡುವ ಹೇಳಿಕೆಗೂ ಉತ್ತರಿಸಲಾಗುವುದಿಲ್ಲ. ಈ ಪ್ರಕರಣದಲ್ಲಿ ವಿಶೇಷ ಮನವಿ ಏನಂದರೆ ನಾಯಕರು ಹೇಳಿಕೆಗಳನ್ನು ನೀಡುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇಲ್ಲವಾದರೆ 41 ಎ ಅಡಿ ನೋಟಿಸ್ ಕೊಟ್ಟು, ವಿಚಾರಣೆಗೆ ಕರೆದು, ಅವರು ನೀಡಿದ ಹೇಳಿಕೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ಭಾವಿಸಿದ್ದೇನೆ. ಮುಂದೆ ಯಾವುದೇ ಹೇಳಿಕೆಗಳನ್ನು ಕೊಡುವಾಗ ಅಥವಾ ಸಾರ್ವಜನಿಕ ವಲಯದಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಎಲ್ಲರಿಗೂ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಬೆದರಿದ ಬಿಜೆಪಿ:
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯವರಿಗೆ ಲೋಕಸಭೆ ಚುನಾವಣೆಯ ಬಗ್ಗೆ ಭಯವಾಗಿದೆ. ಬಹುಶಃ ನಿರಾಶರಾಗಿದ್ದಾರೆ. ಆರಂಭದಲ್ಲಿ 400 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದರು. ಇದ್ದಕ್ಕಿದ್ದಂತೆ 300ಕ್ಕೆ ಇಳಿದಿದರು. ಈಗ ಮತ್ತೆ 400 ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಜನ ಸಾಮಾನ್ಯರು ಯಾವ ರೀತಿ ಮತ ಹಾಕುತ್ತಾರೆ ಎಂಬ ಸುಳಿವು ಅವರಿಗೆ ಸಿಕ್ಕಿದಂತಿದೆ. ಅದಕ್ಕಾಗಿ ಹತಾಶರಾಗಿ, ಗೊಂದಲಕ್ಕೆ ಒಳಗಾಗಿ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆ ನಮಗೆ ಯಾವ ಸಂಬಂಧನೂ ಇಲ್ಲ ಎಂದು ಹೇಳಿಕೆಯೊಂದಕ್ಕೆ ಪರಮೇಶ್ವರ್ ಪ್ರತಿಕ್ರಿಯಿಸಿದರು.

RELATED ARTICLES

Latest News