ಬೆಂಗಳೂರು,ನ.10- ಮಹಿಳೆಯರ ಒಳ ಉಡುಪು, ಪರ್ಸ್‍ಗಳಲ್ಲಿ ಅಕ್ರಮವಾಗಿ ಸುಮಾರು ಮೂರು ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಏಳು ಮಂದಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಕುವೈತ್, ಸಾರ್ಜಾ, ದುಬೈ, ಅಬುದಾಬಿ, ಬ್ಯಾಂಕಾಕ್‍ನಿಂದ ವಿಮಾನದಲ್ಲಿ ಬಂದಿದ್ದ ಆರೋಪಿಗಳು ನಿಲ್ದಾಣದಿಂದ ಹೊರಗೆ ಹೋಗುವಾಗ ಅನುಮಾನಗೊಂಡ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅವರ ಬಳಿ 5 ಕೆಜಿ 315 ಗ್ರಾಂ ತೂಕದ ಚಿನ್ನ ಸಿಕ್ಕಿದೆ. ಕೆಲವನ್ನು ಪೇಸ್ಟ್ ರೂಪದಲ್ಲಿ, ಇನ್ನೂ ಕೆಲವನ್ನು ತಂತಿಯ ರೂಪದಲ್ಲಿ ಅಡಗಿಸಿ ತರಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಆರೋಪಿ ಮಹಿಳೆಯೊಬ್ಬರು ಔಷಧ ತುಂಬುವ ಕ್ಯಾಪ್ಸಿಲ್‍ನಲ್ಲಿ ಚಿನ್ನ ತುಂಬಿ ತಂದಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಮಾನ್ಯ ಪ್ರಯಾಣಿಕರ ಪರ್ಸ್‍ಗಳಲ್ಲೂ ಅರ್ಧ ಕೆಜಿಗೂ ಹೆಚ್ಚು ಚಿನ್ನ ಸಿಕ್ಕಿದೆ. ಅನುಮಾನ ಬಾರದ ರೀತಿಯಲ್ಲಿ ಚಿನ್ನಕ್ಕೆ ಹಲವು ಲೇಪನಗಳನ್ನು ಬಳಸಲಾಗಿದೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿದ ನಂತರವೇ ಅದು ಚಿನ್ನ ಎಂಬುದು ತಿಳಿದು ಬಂದಿದೆ.
ಕೇರಳ ವಿಮಾನ ನಿಲ್ದಾಣದ ಮೂಲಕ ಅತಿ ಹೆಚ್ಚು ಚಿನ್ನ ಕಳ್ಳಸಾಗಾಣಿಕೆ ದಂಧೆ ನಡೆಯುತ್ತಿದ್ದು, ಆದರೆ, ಇದು ಈಗ ಬೆಂಗಳೂರಿಗೂ ವ್ಯಾಪಿಸಿದ್ದು, ಕಸ್ಟಮ್ಸ್ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದನ್ನು ಯಾರಿಗೆ ತಲುಪಿಸಲು ತರಲಾಗುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದ್ದು, ಇವರೆಲ್ಲರೂ ಕಳ್ಳಸಾಗಾಣಿಕೆ ದಾರರ ಏಜೆಂಟ್‍ಗಳು ಎಂದು ಹೇಳಲಾಗುತ್ತಿದೆ.