ಬೆಂಗಳೂರು,ಸೆ.18- ನಗರ ಸೇರಿದಂತೆ ರಾಜ್ಯಾದ್ಯಂತ ಹೆಚ್ಚಾಗಿರುವ ಮಾದಕ ವಸ್ತುಗಳ ಹಾವಳಿಯನ್ನು ಹತ್ತಿಕ್ಕಲು ರಾಜ್ಯಮಟ್ಟದಲ್ಲಿ ವಿಶೇಷವಾದ ಕಾರ್ಯಪಡೆ ರಚನೆಯ ಜೊತೆಗೆ ಇನ್ನು ಮುಂದೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಕವಸ್ತುಗಳ ನಿಯಂತ್ರಣಕ್ಕೆ ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ರಾಜ್ಯಮಟ್ಟದ ಉನ್ನತಾಧಿಕಾರಿ ಗಳ ಸಮಿತಿ ಹಾಗೂ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಸಕ್ರಿಯವಾಗಿವೆ. ಇವುಗಳ ಮೇಲೆ ತೀವ್ರವಾಗಿ ನಿಗಾ ವಹಿಸಲು ಗೃಹಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಟಾಸ್ಕ್ಫೋರ್ಸ್ ಅನ್ನು ರಚಿಸಲಾಗುವುದು. ಅದರಲ್ಲಿ ಆರೋಗ್ಯ, ಉನ್ನತ ಶಿಕ್ಷಣ, ಶಾಲಾ ಶಿಕ್ಷಣ, ಸಮಾಜ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವರು ಸದಸ್ಯರಾಗಿರುತ್ತಾರೆ ಎಂದರು.
ರಾಜ್ಯ ಮತ್ತು ಜಿಲ್ಲಾಮಟ್ಟದ ಸಮಿತಿಗಳು ಪ್ರತಿ ತಿಂಗಳಿಗೊಮೆಯಾದರೂ ಪ್ರಗತಿಪರಿಶೀಲನಾ ಸಭೆ ನಡೆಸಬೇಕು ಎಂದು ಆದೇಶ ಹೊರಡಿಸಲಾಗುವುದು. ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು. ಮಾದಕ ವಸ್ತುಗಳ ಬಳಕೆ, ಮಾರಾಟ, ಸಾಗಾಣಿಕೆ ಸೇರಿದಂತೆ ಎಲ್ಲಾ ರೀತಿಯ ಅಪರಾಧಗಳಿಗೆ ಜಾಮೀನು ರಹಿತ ಪ್ರಕರಣ ದಾಖಲಿಸುವ ಜೊತೆಗೆ ಕನಿಷ್ಠ 10 ರಿಂದ ಗರಿಷ್ಟ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿರುವಂತಹ ಕಾಯ್ದೆಗಳಡಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಸ್ಟೂಡೆಂಟ್ ಪೊಲಿಸಿಂಗ್, ಎನ್ಜಿಒಗಳು ಮತ್ತು ಜನವಸತಿ ಪ್ರದೇಶಗಳ ಸಂಘಟನೆಗಳಲ್ಲಿ ಹೆಚ್ಚು ಜಾಗೃತಿ ಮೂಡಿಸಲಾಗುವುದು. ಮಾದಕ ವಸ್ತುಗಳ ಚಟಕ್ಕೆ ಬಲಿಯಾದವರ ಪುನರ್ವಸತಿಯ ಕೇಂದ್ರಗಳನ್ನು ಮತ್ತಷ್ಟು ಸಬಲೀಕರಣಗೊಳಿಸಲಾಗುವುದು ಎಂದರು.
ಮತ್ತೇರಿಸುವಂತಹ ಮಾತ್ರೆಗಳು, ಕೆಮಿನ ಔಷಧಿಗಳು..
ಈ ರೀತಿಯ ಔಷಧಿಗಳನ್ನು ಅನಧಿಕೃತವಾಗಿ ಮಾರಾಟ ಮಾಡುವ ಔಷಧಿ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗುವುದು. ಉನ್ನತ ಮಟ್ಟದ ಕಾರ್ಯಪಡೆಯಲ್ಲಿ ಆರೋಗ್ಯ ಇಲಾಖೆ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ. ಹೀಗಾಗಿ ವೈದ್ಯರ ಶಿಫಾರಸ್ಸುಗಳಿಲ್ಲದೆ ಅನಧಿಕೃತವಾಗಿ ಹೆಚ್ಚಿನ ಪ್ರಮಾಣದಲ್ಲಿ ಮತ್ತೇರಿಸುವಂತ ಮಾತ್ರೆಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿದೆ ಎಂದರು.
ಮಾದಕ ವಸ್ತುಗಳ ನಿಯಂತ್ರಣಕ್ಕೆ ಪೊಲೀಸರಿಗೆ ಮುಕ್ತ ಅವಕಾಶವನ್ನು ನೀಡಲಾಗಿದ್ದು, ಹೊಣೆಗಾರಿಕೆಯನ್ನು ನಿಗದಿ ಮಾಡಲಾಗಿದೆ. ಇದನ್ನು ಮೀರಿದವರ ವಿರುದ್ಧ ಅಮಾನತು, ಸೇವೆಯಿಂದ ವಜಾ ಸೇರಿದಂತೆ ಕಠಿಣ ಕ್ರಮಗಳನ್ನು ಜರುಗಿಸಲಾಗುತ್ತದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಅತೀ ಹೆಚ್ಚು ಮಾದಕವಸ್ತು ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳ ಪೈಕಿ ಶೇ.50 ರಷ್ಟು ಬೆಂಗಳೂರಿನಲ್ಲಿಯೇ ದಾಖಲಾಗಿವೆ. ಶೇ.22 ರಷ್ಟು ಮಂಗಳೂರಿನಲ್ಲಿ, ಶೇ.11 ರಷ್ಟು ರಾಜ್ಯದ ಇತರ ಭಾಗಗಳಲ್ಲಿ ದಾಖಲಾಗಿವೆ. ಬೆಂಗಳೂರಿನ ಪೂರ್ವ ಭಾಗದ ಮೂಲಕ ಮಾದಕವಸ್ತುಗಳು ಹೆಚ್ಚು ಸರಬರಾಜಾಗುತ್ತಿವೆ ಮತ್ತು ಹೆಚ್ಚು ಮಾದಕವ್ಯಸನ ಅಪರಾಧಗಳು ನಡೆಯುತ್ತಿವೆ ಎಂಬ ವರದಿಗಳಿವೆ.
ಪೊಲೀಸ್ ಠಾಣಾಧಿಕಾರಿಗಳಿಗೆ ಮಾದಕವಸ್ತುಗಳ ಮಾರಾಟ, ಸರಬರಾಜು ಸೇರಿದಂತೆ ಎಲ್ಲಾ ಮಾಹಿತಿಗಳು ಇದ್ದೇ ಇರುತ್ತವೆ. ಅವರಿಗೆ ಗೊತ್ತಿಲ್ಲದೇ ಯಾವ ಚಟುವಟಿಕೆಗಳೂ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಇನ್ನು ಮುಂದೆ ಡ್ರಗ್‌್ಸ ಪ್ರಕರಣಗಳು ಕಂಡುಬಂದರೆ ಸಂಬಂಧಪಟ್ಟ ಠಾಣಾಧಿಕಾರಿಗಳು, ಡಿವೈಎಸ್ಪಿ, ಎಸಿಪಿ, ಡಿಸಿಪಿ, ಎಸ್ಪಿಗಳನ್ನು ಹೊಣೆಗಾರರನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಒರಿಸ್ಸಾ, ಆಂಧ್ರಪ್ರದೇಶ, ಉತ್ತರಪ್ರದೇಶದಂತಹ ರಾಜ್ಯದಿಂದ ಮಾದಕ ವಸ್ತುಗಳು ಕಳ್ಳಸಾಗಾಣಿಕೆಯಾಗುತ್ತಿವೆ. ಸಮಾಜಕ್ಕೆ ಕಂಠಕವಾಗಿರುವ ಯುವ ಸಮುದಾಯವನ್ನು ಹಾಳು ಮಾಡುತ್ತಿರುವ ಮಾದಕವಸ್ತುಗಳ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕಠಿಣ ಕ್ರಮ ಜರುಗಿಸಲಾಗುತ್ತಿದೆ ಎಂದರು.
ಈ ಹಿಂದಿನ ಸರ್ಕಾರ ತೆಗೆದುಕೊಂಡ ಕ್ರಮಗಳು ಸಾಲುವುದಿಲ್ಲ. ದಿನೇದಿನೇ ಈ ಪಿಡುಗು ಹೆಚ್ಚಾಗುತ್ತಿವೆ ಎಂಬುದು ಕಳವಳಕಾರಿ ಎಂದು ಹೇಳಿದರು.2021 ರಲ್ಲಿ 7,511 ಮಂದಿ ಭಾರತೀಯರು, 190 ಮಂದಿ ವಿದೇಶಿಯರು, 2022 ರಲ್ಲಿ 7,737 ಮಂದಿ ಭಾರತೀಯರು, 123 ವಿದೇಶಿಯರು, 2023 ರಲ್ಲಿ 8,016 ಭಾರತೀಯರು, 105 ವಿದೇಶಿಯರು, 2024ರ ಈವರೆಗೂ 1,021 ಭಾರತೀಯರು, 21 ವಿದೇಶಿಯರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಆರೋಗ್ಯ ಇಲಾಖೆಯಲ್ಲಿ ಈ ಕುರಿತು ರಚಿಸಲಾಗಿರುವ ತಜ್ಞರ ಜೊತೆಯೂ ಚರ್ಚಿಸಲಾಗಿದ್ದು, ಮಾದಕ ವ್ಯಸನಗಳ ಕುರಿತು ಹೆಚ್ಚು ಜನಜಾಗೃತಿ ಮೂಡಿಸಬೇಕು ಮತ್ತು ನಿರ್ಮೂಲನಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಗರಿಷ್ಠ ಪ್ರಮಾಣದಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ಡಿಜಿಪಿ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.