Homeಕ್ರೀಡಾ ಸುದ್ದಿಫಿಫಾ ವಿಶ್ವಕಪ್‌ : ಸಾಕಾ ಹ್ಯಾಟ್ರಿಕ್‌ ಮಿಂಚು, ಫ್ರಾನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಇಂಗ್ಲೆಂಡ್‌

ಫಿಫಾ ವಿಶ್ವಕಪ್‌ : ಸಾಕಾ ಹ್ಯಾಟ್ರಿಕ್‌ ಮಿಂಚು, ಫ್ರಾನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಇಂಗ್ಲೆಂಡ್‌

France vs England FIFA World Cup third-place match resul

ಮಿಯಾಮಿ ಗಾರ್ಡನ್ಸ್ , ಜು.19- ಬುಕಾಯೊ ಸಾಕಾ ದಾಖಲಿಸಿದ ಹ್ಯಾಟ್ರಿಕ್‌ ನೆರವಿನಿಂದ ಇಂಗ್ಲೆಂಡ್‌ ತಂಡವು ಫ್ರಾನ್ಸ್ ವಿರುದ್ಧ ನಡೆದ ವಿಶ್ವಕಪ್‌ ಮೂರನೇ ಸ್ಥಾನಕ್ಕಾಗಿ ನಡೆದ ರೋಚಕ ಪಂದ್ಯದಲ್ಲಿ 6-4 ಗೋಲುಗಳಿಂದ ಗೆದ್ದು ಕಂಚಿನ ಪದಕ ತನ್ನದಾಗಿಸಿಕೊಂಡಿತು.

ಒಂದೆಡೆ ಸಾಕಾ ಮೂರು ಗೋಲುಗಳನ್ನು ಸಿಡಿಸಿ ಇಂಗ್ಲೆಂಡ್‌ಗೆ ಭರ್ಜರಿ ಜಯ ತಂದುಕೊಟ್ಟರೆ, ಮತ್ತೊಂದೆಡೆ ಫ್ರಾನ್ಸ್ ನಾಯಕ ಕೈಲಿಯನ್‌ ಎಂಬಾಪ್ಪೆ ಎರಡು ಗೋಲುಗಳನ್ನು ದಾಖಲಿಸುವ ಮೂಲಕ ವಿಶ್ವಕಪ್‌ ಇತಿಹಾಸದಲ್ಲಿ ಲಿಯೋನೆಲ್‌ ಮೆಸ್ಸಿಯ ವೃತ್ತಿಜೀವನದ ಗೋಲುಗಳ ದಾಖಲೆಯನ್ನು ಹಿಂದಿಕ್ಕಿದರು.

ಜೊತೆಗೆ ಈ ವಿಶ್ವಕಪ್‌ನಲ್ಲಿ 10 ಗೋಲುಗಳೊಂದಿಗೆ ಗೋಲ್ಡನ್‌ ಬೂಟ್‌ ಸ್ಪರ್ಧೆಯಲ್ಲೂ ಅಗ್ರಸ್ಥಾನಕ್ಕೇರಿದ್ದಾರೆ.1982ರಲ್ಲಿ ಹಂಗೇರಿ ತಂಡವು ಎಲ್‌ ಸಾಲ್ವಡಾರ್‌ ವಿರುದ್ಧ 10-1 ಅಂತರದಲ್ಲಿ ಜಯಗಳಿಸಿದ ಪಂದ್ಯದ ಬಳಿಕ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲುಗಳು ದಾಖಲಾಗಿರುವ ಪಂದ್ಯ ಇದಾಗಿದೆ. ಅಲ್ಲದೆ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಒಟ್ಟು 10 ಗೋಲುಗಳು ದಾಖಲಾಗಿವೆ.ಸಾಕಾ 37ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರೆ, ಮೊದಲಾರ್ಧದ ಹೆಚ್ಚುವರಿ ವೇಳೆಯಲ್ಲಿ ಮತ್ತೊಂದು ಗೋಲು ದಾಖಲಿಸಿದರು. 87ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ತಮ್ಮ ಎರಡನೇ ಅಂತರರಾಷ್ಟ್ರೀಯ ಹ್ಯಾಟ್ರಿಕ್‌ ಪೂರ್ಣಗೊಳಿಸಿದರು.

ಇಂಗ್ಲೆಂಡ್‌ ಪರ ಡೆಕ್ಲಾನ್‌ ರೈಸ್‌‍ ಮತ್ತು ಎಜ್ರಿ ಕೊನ್ಸಾ ಕೂಡ ತಲಾ ಒಂದು ಗೋಲು ದಾಖಲಿಸಿದ್ದು, ಮೊದಲಾರ್ಧ ಅಂತ್ಯಕ್ಕೆ ತಂಡ 4-0 ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ಫ್ರಾನ್‌್ಸ ತಿರುಗೇಟು ನೀಡಿದರು. ಜೂಡ್‌ ಬೆಲ್ಲಿಂಗ್ಹ್ಯಾಮ್‌ ದ್ವಿತೀಯಾರ್ಧದ ಹೆಚ್ಚುವರಿ ಸಮಯದ ಎಂಟನೇ ನಿಮಿಷದಲ್ಲಿ ಗೋಲು ದಾಖಲಿಸಿ ಇಂಗ್ಲೆಂಡ್‌ ಪರ ಸ್ಕೋರಿಂಗ್‌ಗೆ ತೆರೆ ಎಳೆದರು. ಇದು ಟೂರ್ನಿಯಲ್ಲಿ ಅವರ ಏಳನೇ ಗೋಲಾಗಿತ್ತು.

ಫ್ರಾನ್ಸ್ ಪರ ಕೈಲಿಯನ್‌ ಎಂಬಾಪ್ಪೆ 48 ಮತ್ತು 66ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಬ್ರಾಡ್ಲಿ ಬಾರ್ಕೋಲಾ ಹಾಗೂ ಉಸಾನ್‌ ಡೆಂಬೆಲೆ ತಲಾ ಒಂದು ಗೋಲು ದಾಖಲಿಸಿದರು. ಈ ಎರಡು ಗೋಲುಗಳೊಂದಿಗೆ ಎಂಬಾಪ್ಪೆ ವಿಶ್ವಕಪ್‌ನಲ್ಲಿ ತಮ್ಮ ವೃತ್ತಿಜೀವನದ ಒಟ್ಟು ಗೋಲುಗಳ ಸಂಖ್ಯೆಯನ್ನು 22ಕ್ಕೆ ಏರಿಸಿಕೊಂಡು, 21 ಗೋಲುಗಳಿದ್ದ ಲಿಯೋನೆಲ್‌ ಮೆಸ್ಸಿಯ ದಾಖಲೆಯನ್ನು ಹಿಂದಿಕ್ಕಿದರು. ಟೂರ್ನಿಯಲ್ಲಿ 10 ಗೋಲುಗಳೊಂದಿಗೆ ಅವರು ಗೋಲ್ಡನ್‌ ಬೂಟ್‌ ಸ್ಪರ್ಧೆಯಲ್ಲಿ ಮೆಸ್ಸಿಗಿಂತ ಎರಡು ಗೋಲುಗಳ ಮುನ್ನಡೆಯಲ್ಲಿದ್ದಾರೆ.

ಇಂದು ನಡೆಯಲಿರುವ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಅರ್ಜೆಂಟೀನಾ ತಂಡವು ಸ್ಪೇನ್‌ ವಿರುದ್ಧ ಸೆಣಸಲಿದ್ದು, ಮೆಸ್ಸಿಗೆ ಗೋಲ್ಡನ್‌ ಬೂಟ್‌ ಪ್ರಶಸ್ತಿಗಾಗಿ ಕೊನೆಯ ಅವಕಾಶ ಲಭಿಸಲಿದೆ. ಸೆಮಿಫೈನಲ್‌ನಲ್ಲಿ ಸ್ಪೇನ್‌ ಎದುರು ಸೋತ ಫ್ರಾನ್ಸ್ ಸತತ ಮೂರನೇ ವಿಶ್ವಕಪ್‌ ಫೈನಲ್‌ ಪ್ರವೇಶಿಸುವ ಅವಕಾಶ ಕಳೆದುಕೊಂಡಿತ್ತು. ಇಂಗ್ಲೆಂಡ್‌ ಕೂಡ ಅರ್ಜೆಂಟೀನಾ ವಿರುದ್ಧದ ಸೆಮಿಫೈನಲ್‌ನಲ್ಲಿ 1-0 ಮುನ್ನಡೆಯಲ್ಲಿದ್ದರೂ, ಕೊನೆಯಲ್ಲಿ 2-1 ಅಂತರದಲ್ಲಿ ಸೋತು ಫೈನಲ್‌ ಅವಕಾಶ ತಪ್ಪಿಸಿಕೊಂಡಿತ್ತು.

64,478 ಪ್ರೇಕ್ಷಕರಿಂದ ಕಿಕ್ಕಿರಿದ ಹಾರ್ಡ್‌ ರಾಕ್‌ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವು ವಿಶ್ವಕಪ್‌ ಟೂರ್ನಿಯ ಏಳನೇ ಹಾಗೂ ಅಂತಿಮ ಪಂದ್ಯವಾಗಿತ್ತು. ಇದೇ ವೇಳೆ, ಫ್ರಾನ್ಸ್ ಮುಖ್ಯ ಕೋಚ್‌ ದಿದಿಯರ್‌ ಡೆಶಾಂಪ್ಸ್ ಅವರಿಗೂ ಇದು ಕೊನೆಯ ಪಂದ್ಯವಾಗಿತ್ತು. ಕಳೆದ 14 ವರ್ಷಗಳ ಸೇವೆಯ ಬಳಿಕ ಅವರು ಹುದ್ದೆಯಿಂದ ಕೆಳಗಿಳಿಯಲಿದ್ದು, ಪಂದ್ಯ ಮುಗಿದ ಬಳಿಕ ಆಟಗಾರರನ್ನು ಅಪ್ಪಿಕೊಂಡು ಪ್ರೇಕ್ಷಕರಿಗೆ ಕೈಬೀಸಿ ವಿದಾಯ ಹೇಳಿದರು.

RELATED ARTICLES

Latest News