Homeರಾಜ್ಯಮಳೆಯ ಅಭಾವ : ರಾಜ್ಯದಲ್ಲಿ ಬಿತ್ತನೆ ಪ್ರಮಾಣದಲ್ಲಿ ಭಾರೀ ಕುಸಿತ

ಮಳೆಯ ಅಭಾವ : ರಾಜ್ಯದಲ್ಲಿ ಬಿತ್ತನೆ ಪ್ರಮಾಣದಲ್ಲಿ ಭಾರೀ ಕುಸಿತ

Rainfall deficit: Massive drop in sowing rate in the state

ಬೆಂಗಳೂರು,ಜು.19- ಮಳೆಯ ಅಭಾವದಿಂದ ರಾಜ್ಯ ಬರದ ಛಾಯೆಯಲ್ಲಿದ್ದು, ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಪ್ರಮಾಣದಲ್ಲಿ ಭಾರೀ ಕುಸಿತ ಕಂಡಿದೆ. ಜುಲೈ 10ರವರೆಗಿನ ಬಿತ್ತನೆ ಗುರಿ ಮುಂದೆ ಪ್ರಗತಿ ಕೇವಲ ಶೇ.48ರಷ್ಟು ಮಾತ್ರ. ಹೀಗಾಗಿ ಈ ಬಾರಿ ರಾಜ್ಯದ ಕೃಷಿ ಉತ್ಪಾದನೆಯಲ್ಲಿ ಭಾರೀ ಇಳಿಕೆ ಕಾಣುವ ಆತಂಕ ಎದುರಾಗಿದೆ. ಜುಲೈ ಎರಡನೇ ವಾರದಲ್ಲಿ ರಾಜ್ಯದಲ್ಲಿ ಬೆಳೆವಾರು ಬಿತ್ತನೆ ಕೊರತೆಯ ವಸ್ತು ಸ್ಥಿತಿಯ ವರದಿ ಇಲ್ಲಿದೆ.

ಈ ಬಾರಿ ಮುಂಗಾರು ಮಳೆ ಕೊರತೆ ತೀವ್ರವಾಗಿದೆ. ಎಲ್‌ನಿನೋ ಮೂಲಕ ರಾಜ್ಯದ ಸುಮಾರು 157 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ. ಇದರಿಂದ ರಾಜ್ಯದಲ್ಲಿ ಭೀಕರ ಬರಗಾಲದ ಭೀತಿ ಎದುರಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಭೀಕರ ಬರಗಾಲದ ಆತಂಕ ವ್ಯಕ್ತಪಡಿಸಿದ್ದು, ಈಗಲೇ ಕೇಂದ್ರದ ಬಳಿ ನೆರವಿನ ಮೊರೆ ಇಟ್ಟಿದೆ. ರಾಜ್ಯ ಸದ್ಯ ಸುಮಾರು ಶೇ.30-35ರಷ್ಟು ಮಳೆಯ ಕೊರತೆ ಎದುರಿಸುತ್ತಿದೆ. ಹೀಗಾಗಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿನ ಬಿತ್ತನೆ ಪ್ರಮಾಣದಲ್ಲೂ ಭಾರೀ ಕುಸಿತ ಕಂಡಿದೆ.

ರಾಜ್ಯ 10 ಪ್ರತ್ಯೇಕ ಕೃಷಿ-ಹವಾಮಾನ ವಲಯಗಳನ್ನು ಹೊಂದಿದ್ದು, ಅದರ ಒಟ್ಟು ಭೌಗೋಳಿಕ ಪ್ರದೇಶದ ಸುಮಾರು ಶೇ.77 ರಷ್ಟು ಭಾಗವು ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳ ವ್ಯಾಪ್ತಿಗೆ ಬರುತ್ತದೆ. ರಾಜ್ಯದಲ್ಲಿ ಸುಮಾರು 84.79 ಲಕ್ಷ ಹೆಕ್ಟೇರ್‌ ಮಳೆಯಾಶ್ರಿತ ಕೃಷಿ ಭೂಮಿ ಇದ್ದು, ಇದು ರಾಜಸ್ಥಾನದ ನಂತರ ದೇಶದಲ್ಲೇ ಎರಡನೇ ಅತಿ ಹೆಚ್ಚು ಮಳೆಯಾಶ್ರಿತ ಕೃಷಿ ಪ್ರದೇಶವಾಗಿದೆ.

ಹೀಗಾಗಿ ರಾಜ್ಯದ ಕೃಷಿ ಉತ್ಪಾದನೆಯು ಮುಂಗಾರು ಮಳೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ರಾಜ್ಯದ ವಾರ್ಷಿಕ ಮಳೆಯ ಸುಮಾರು ಶೇ.74 ರಷ್ಟು ಭಾಗವು ನೈಋತ್ಯ ಮುಂಗಾರು ಅವಧಿಯಲ್ಲಿಯೇ ಲಭ್ಯವಾಗುತ್ತದೆ.

40.68 ಲಕ್ಷ ಹೆಕ್ಟೇರ್‌ ರಷ್ಟು ಮಾತ್ರ ಬಿತ್ತನೆ:
ಕೃಷಿ ಇಲಾಖೆ ನೀಡಿದ ಮಾಹಿತಿಯಂತೆ ಜುಲೈ ಎರಡನೇ ವಾರದ ವೇಳೆಗೆ ರಾಜ್ಯದಲ್ಲಿ ಮಳೆಯ ಕೊರತೆಯಿಂದ ಸುಮಾರು 40.68 ಲಕ್ಷ ಹೆಕ್ಟೇರ್‌ ನಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆ ಸಾಧ್ಯವಾಗಿದೆ. 2026-27ರ ಮುಂಗಾರು ಹಂಗಾಮಿನಲ್ಲಿ ಒಟ್ಟು 84.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಆ ಪೈಕಿ ಜುಲೈ ಎರಡನೇ ವಾರದವರೆಗೆ 40.68 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಸಾಧನೆ ಕಂಡಿದೆ. ಆದರೆ ಗುರಿಯಲ್ಲಿ 48% ಮಾತ್ರ ಪ್ರಗತಿ ಸಾಧಿಸಲಾಗಿದೆ.

ಕೃಷಿ ಇಲಾಖೆ ನೀಡಿದ ಮಾಹಿತಿಯಂತೆ ನೀರಾವರಿ ಕೃಷಿ ಪ್ರದೇಶದಲ್ಲಿ 24.43 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ, ಜು.10ರವರೆಗೆ ಆಗಿರುವ ಬಿತ್ತನೆ ಪ್ರಗತಿ ಕೇವಲ 12.55 ಲಕ್ಷ ಹೆಕ್ಟೇರ್‌ ಮಾತ್ರ. ಅದೇ ಮಳೆಯಾಶ್ರಿತ ಕೃಷಿ ಪ್ರದೇಶಗಳಲ್ಲಿ 59.68 ಲಕ್ಷ ಹೆಕ್ಟೇರ್‌ ಗುರಿ ಹೊಂದಲಾಗಿದೆ. ಆದರೆ ಜು.10ರವರೆಗೆ ಬಿತ್ತನೆ ಸಾಧ್ಯವಾಗಿದ್ದು, ಕೇವಲ 28.13 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ. ಅಂದರೆ ಒಟ್ಟು 84.10 ಲಕ್ಷ ಹೆಕ್ಟೇರ್‌ ಪ್ರದೇಶದ ಪೈಕಿ ಜು.10ರ ವರೆಗೆ 40.68 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಸಾಧ್ಯವಾಗಿದೆ. ಅಂದರೆ ಪ್ರಗತಿ ಸಾಧಿಸಿದ್ದು 48% ಮಾತ್ರ.

ಯಾವ ಯಾವ ಬೆಳೆಯ ಬಿತ್ತನೆ ಪ್ರಗತಿ ಎಷ್ಟು?:
2026-27 ಮುಂಗಾರು ಹಂಗಾಮಿನಲ್ಲಿ 10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆ ಗುರಿ ಹೊಂದಿದ್ದು, ಜುಲೈ 10ರ ವರೆಗೆ ಕೇವಲ 1.20 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಅಂದರೆ ಕೇವಲ 12% ಮಾತ್ರ ಸಾಧನೆಯಾಗಿದೆ ಎಂದು ಕೃಷಿ ಇಲಾಖೆ ಅಂಕಿಅಂಶ ನೀಡಿದೆ. ಇತ್ತ 0.80 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬಿತ್ತನೆ ಗುರಿ ಹೊಂದಲಾಗಿದ್ದು, ಆ ಪೈಕಿ ಕೇವಲ 0.24 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. 31% ಸಾಧನೆ ಕಂಡಿದೆ.

ಇನ್ನು 8.20 ಲಕ್ಷ ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯ ಗುರಿ ಇರಿಸಲಾಗಿದ್ದು, ಕೇವಲ 0.08 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಅಂದರೆ ಕೇವಲ 1% ಮಾತ್ರ ಸಾಧನೆ ಕಂಡಿದೆ. 17.30 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆ ಜೋಳ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ ಕೇವಲ 9.43 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. 55%ರಷ್ಟು ಸಾಧನೆ ಕಂಡಿದೆ. ಈ ಮೇಲಿನ ಏಕದಳ ಧಾನ್ಯಗಳ ಬೆಳೆಗಳನ್ನು 37.60 ಲಕ್ಷ ಹೆಕ್ಟೇರ್‌?ನಲ್ಲಿ ಬಿತ್ತುವ ಗುರಿ ಹೊಂದಲಾಗಿದೆ. ಆದರೆ ಜು.10ರವರೆಗೆ ಕೇವಲ 11.54 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಅಂದರೆ ಕೇವಲ 31% ಮಾತ್ರ ಪ್ರಗತಿ ಕಂಡಿದೆ.

ಇತ್ತ ದ್ವಿದಳ ಧಾನ್ಯಗಳ ಪೈಕಿ 16 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆ ಗುರಿ ಇದ್ದು, ಆ ಪೈಕಿ 6.56 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕೇವಲ 41% ಮಾತ್ರ ಸಾಧನೆ ಕಂಡಿದೆ. ಇನ್ನು 0.80 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಉದ್ದು ಬಿತ್ತನೆ ಗುರಿ ಹೊಂದಲಾಗಿದ್ದು, ಆ ಪೈಕಿ 0.65 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ 81% ಸಾಧನೆ ಕಂಡಿದೆ. ಒಟ್ಟು 4.50 ಲಕ್ಷ ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆ ಗುರಿ ಹೊಂದಲಾಗಿದ್ದು, ಆ ಪೈಕಿ 3.55 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ 79% ಸಾಧನೆ ಕಂಡಿದೆ. ಈ ದ್ವಿದಳ ಧಾನ್ಯಗಳ ಬೆಳೆಗಳನ್ನು 22.85 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದ್ದು, ಈವರೆಗೆ 11.20 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ 49% ಮಾತ್ರ ಗುರಿ ಸಾಧಿಸಲಾಗಿದೆ.

ಒಟ್ಟು 60.45 ಲಕ್ಷ ಹೆಕ್ಟೇರ್‌ನಲ್ಲಿ ಆಹಾರ ಧಾನ್ಯಗಳನ್ನು ಬಿತ್ತನೆ ಮಾಡುವ ಗುರಿ ಇರಿಸಲಾಗಿದ್ದು, ಈ ಪೈಕಿ ಈವರೆಗೆ ಕೇವಲ 22.74 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಅಂದರೆ 38% ಮಾತ್ರ ಸಾಧನೆ ಕಂಡಿದೆ. ಅದೇ ರೀತಿ 7.91 ಲಕ್ಷ ಹೆಕ್ಟೇರ್‌ನಲ್ಲಿ ಎಣ್ಣೆ ಕಾಳುಗಳ ಬಿತ್ತನೆ ಗುರಿ ಪೈಕಿ ಜು.10ರವರೆಗೆ 4.80 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದೆ. ಅಂದರೆ 61% ಸಾಧನೆ ಕಂಡಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಅಂಕಿಅಂಶ ನೀಡಿದ್ದಾರೆ.

ಬಿತ್ತನೆಯಾದ ಬೀಜಗಳೂ ಒಣಗುತ್ತಿವೆ: ಈ ಬಗ್ಗೆ ಮಾತನಾಡಿರುವ ಕಂದಾಯ ಸಚಿವ ಜಿ. ಪರಮೇಶ್ವರ್‌, ರಾಜ್ಯದಲ್ಲಿ ಜೂನ್‌ ತಿಂಗಳಲ್ಲಿ ಶೇ.42ರಷ್ಟು ಮತ್ತು ಜುಲೈ ತಿಂಗಳಲ್ಲಿ ಶೇ.34ರಷ್ಟು ಮಳೆ ಕೊರತೆಯಾಗಿದೆ. ಅಲ್ಪಸ್ವಲ್ಪ ಮಳೆಯಿಂದ ರೈತರು ಬೀಜ ಬಿತ್ತನೆ ಮಾಡಿದ್ದು, ಈಗ ನಷ್ಟಕ್ಕೆ ಒಳಗಾಗಿದ್ದಾರೆ. ಪ್ರಸ್ತುತ 245 ತಾಲೂಕುಗಳ ಪೈಕಿ 157 ತಾಲೂಕುಗಳಲ್ಲಿ ಕೊರತೆ, 14 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆಯಾಗಿದೆ ಎಂದು ವಿವರಿಸಿದ್ದಾರೆ.

ಜುಲೈ ತಿಂಗಳಲ್ಲಿ 10 ಜಿಲ್ಲೆಗಳಲ್ಲಿ ಶೇ.30 ರಿಂದ ಶೇ.60 ರಷ್ಟು ಮಳೆ ಕೊರತೆಯಾಗಿದೆ. 13 ಜಿಲ್ಲೆಗಳಲ್ಲಿ ಶೇ.60 ರಿಂದ ಶೇ.97 ರಷ್ಟು ಮಳೆ ಕೊರತೆಯಾಗಿದೆ. ಕೇವಲ 8 ಜಿಲ್ಲೆಗಳಲ್ಲಿ ಮಾತ್ರ ಸಾಮಾನ್ಯ ಪ್ರಮಾಣದಲ್ಲಿ ಮಳೆಯಾಗಿದೆ. ರಾಜ್ಯದಲ್ಲಿ 84.10 ಲಕ್ಷ ಹೆಕ್ಟೇರುಗಳಷ್ಟು ಪ್ರದೇಶ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ ಒಟ್ಟು 40.68 ಲಕ್ಷ ಹೆಕ್ಟೇರುಗಳಷ್ಟು ಬಿತ್ತನೆಯಾಗಿದೆ. ಆದರೆ ಬಿತ್ತನೆಯಾದ ಬೆಳೆಗಳೂ ಕೂಡ ಒಣಗುತ್ತಿವೆ. ಕೆಲವು ಬಿತ್ತನೆ ಮಾಡಿದ ಬೀಜಗಳೂ ಕೂಡ ಹುಟ್ಟಿಲ್ಲ ಎಂದು ತಿಳಿಸಿದ್ದಾರೆ.

RELATED ARTICLES

Latest News