ಬೆಂಗಳೂರು, ಜು. 19- ರಾಜ್ಯದ ಬರ ಪರಿಸ್ಥಿತಿ ನಿರ್ವಹಣೆಗೆ ತೆಗೆದುಕೊಳ್ಳಬೇಕಾದ ಪೂರ್ವ ಸಿದ್ಧತಾ ಕ್ರಮಗಳ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿದರು.
ರಾಜ್ಯದಲ್ಲಿ 157ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಮಳೆಯ ಕೊರತೆಯಾಗಿದೆ. ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದ್ದು, ಮುಂಗಾರು ಆರಂಭದಲ್ಲೇ ಕೈಕೊಟ್ಟಿದೆ. ಕರಾವಳಿ, ಮಲೆನಾಡು ಭಾಗ ಒಳಗೊಂಡಂತೆ ಶೇ.42ರಷ್ಟು ಮಾತ್ರ ಮಳೆಯಾಗಿದೆ. ಕೆಲವು ಕಡೆ ಬಿತ್ತಿದ ಬೆಳೆ ಒಣಗಿ ಹೋಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತ್ತ ವಿಮಾ ಸೌಲಭ್ಯವೂ ಇಲ್ಲದೇ, ಇತ್ತ ಬೆಳೆದ ಬೆಳೆಯೂ ಕೈಗೆ ಸಿಗದೇ ರೈತರು ಕಂಗಾಲಾಗಿದ್ದಾರೆ.
200ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ನೀರಿನ ಪೂರೈಕೆಗೆ ಟ್ಯಾಂಕರ್‌ಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಅಲ್ಲಿಯೂ ನೀರಿನ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ಪರಿಸ್ಥಿತಿ ನಿಭಾಯಿಸುವುದು ಸರ್ಕಾರಕ್ಕೆ ಸವಾಲಾಗಿದೆ.
ಇಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಲ್ಲಿ ಸಭೆ ನಡೆಸಿದ ಮುಖ್ಯಮಂತ್ರಿಯವರು, ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಅಗತ್ಯ ನೆರವು ನೀಡಲಿದೆ. ಹಣಕಾಸಿನ ಕೊರತೆಯ ನೆಪ ಹೇಳದೆ, ತ್ವರಿತಗತಿಯಲ್ಲಿ ಅಧಿಕಾರಿಗಳು ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.

ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಬರ ಪೀಡಿತ ಪ್ರದೇಶಗಳಲ್ಲಿ ಬೆಳೆ ಹಾನಿ ಸಮೀಕ್ಷೆ, ಮಳೆ ಕೊರತೆ ಮತ್ತು ತೇವಾಂಶದ ಕುರಿತು ಸ್ಪಷ್ಟ ಮಾಹಿತಿಗಳೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.ಬರ ನಿರ್ವಹಣೆ ವ್ಯವಸ್ಥೆಗಳಿಗಾಗಿ ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ತ್ವರಿತ ಕಾಮಗಾರಿಗಳನ್ನು ಕೈಗೊಳ್ಳಬೇಕು.
ಅಗತ್ಯ ಇರುವ ಕಡೆಗೆ ತುರ್ತಾಗಿ ಬೋರ್‌ವೆಲ್‌ಗಳನ್ನು ಕೊರೆಸಬೇಕು. ಟ್ಯಾಂಕರ್‌ಗಳನ್ನು ಬಳಸಿ ನೀರು ಪೂರೈಸಬೇಕು ಎಂದು ಸೂಚಿಸಿದ್ದಾರೆ.ಸದ್ಯದ ಪರಿಸ್ಥಿತಿಯಲ್ಲಿ ಜಾನುವಾರುಗಳ ಮೇವಿಗೆ ಕೊರತೆ ಹೆಚ್ಚಾಗಿ ಕಂಡು ಬರುತ್ತಿಲ್ಲ, ಅದರೂ ಮುಂಜಾಗ್ರತಾ ಕ್ರಮವಾಗಿ ಮೇವಿನ ಕಿಟ್‌ಗಳನ್ನು ರೈತರಿಗೆ ವಿತರಿಸಿ ಭವಿಷ್ಯದಲ್ಲೂ ಕೂಡ ಮೇವಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.
ಬರ ಪೀಡಿತ ತಾಲ್ಲೂಕುಗಳಿಂದ ಗುಳೆ ಹೋಗುವ ವಾತಾವರಣ ಹೆಚ್ಚಾಗಿ ಕಂಡು ಬರುತ್ತಿದೆ. ವಿಬಿ ಜೀ ರಾಮ್‌ಜೀ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡು ಸ್ಥಳೀಯ ಮಟ್ಟದಲ್ಲಿ ಜನರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸಬೇಕೆಂದು ಸೂಚಿಸಿದ್ದಾರೆ.
ಬರ ನಿರ್ವಹಣೆಯ ಕುರಿತಂತೆಯೇ ಚರ್ಚೆ ನಡೆಸಲು ಸಚಿವ ಸಂಪುಟ ಸಭೆ ಕರೆಯಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳೊಂದಿಗಿನ ಸಭೆಯಲ್ಲಿ ಸಮಗ್ರ ಮಾಹಿತಿ ಪಡೆದು ಅದರ ಅಧಾರದ ಮೇಲೆ ಸಚಿವ ಸಂಪುಟದಲ್ಲಿ ಕೆಲ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಜಾಗತಿಕ ತಾಪಮಾನದಿಂದಾಗಿ ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಕರ್ನಾಟಕದಲ್ಲಿ ಕಳೆದ ಮೂರು ತಿಂಗಳಿನಿಂದಲೂ ಸರಿಯಾದ ಮಳೆಯಾಗಿಲ್ಲ. ಮಧ್ಯದಲ್ಲಿ ಅಲ್ಪಸ್ವಲ್ಪ ಮಳೆಯಾದರೂ ಅದು ಕೃಷಿ ಮತ್ತು ಕುಡಿಯುವ ನೀರಿಗೆ ಸಾಲುತ್ತಿಲ್ಲ. ಹೀಗಾಗಿ ವಿಶೇಷ ಪ್ರಕರಣವೆಂದು ಪರಿಗಣಿಸಿ ರಾಜ್ಯದ 157 ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶಗಳು ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ.
ವಿಬಿಜಿ ರಾಮ್‌ಜಿ ಯೋಜನೆ ಕಡೆಗಣನೆ : ಅಧಿಕಾರಿಗಳಿಗೆ ಸಿಎಂ ತರಾಟೆ
ಬೆಂಗಳೂರು, ಜು. 19- ರಾಜ್ಯದಲ್ಲಿ ಭೀಕರ ಬರದಿಂದಾಗಿ ಜನ ಗುಳೆ ಹೋಗುತ್ತಿದ್ದರೂ ಕೆಲವು ಜಿಲ್ಲೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಕಡೆಗಣಿಸಿರುವುದಕ್ಕೆ ಅಧಿಕಾರಿಗಳನ್ನು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರು ತರಾಟೆಗೆ ತೆಗದುಕೊಂಡಿದ್ದಾರೆ. ಬಳ್ಳಾರಿ, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯನಗರ ಜಿಲ್ಲೆಗಳಲ್ಲಿನ ಜನ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದಾರೆ.
ಕೂಡಲೇ ವಿಬಿ ಜಿ ರಾಮ್‌ಜಿ ಯೋಜನೆಯನ್ನು ತ್ವರಿತವಾಗಿ ಆರಂಭಿಸಬೇಕೆಂದು ಮುಖ್ಯಮಂತ್ರಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸೂಚನೆ ನೀಡಿದ್ದಾರೆ. ನಾಲ್ಕೈದು ಜಿಲ್ಲೆಗಳನ್ನು ಹೊರತುಪಡಿಸಿದರೆ, ಬಹುತೇಕ ಜಿಲ್ಲೆಗಳಲ್ಲಿ ವಿಬಿ ಜಿ ರಾಮ್‌ಜಿ ಕೆಲಸ ಆರಂಭವಾಗಿಲ್ಲ. ಸುಮಾರು 5 ಸಾವಿರ ಗ್ರಾಮ ಪಂಚಾಯಿತಿಗಳ ಪೈಕಿ 2,433 ಪಂಚಾಯಿತಿಗಳಲ್ಲಿ ಕೆಲಸ ನಡೆಯುತ್ತಿಲ್ಲ.
ವಿಜಯಪುರ ಜಿಲ್ಲೆಯಲ್ಲಿ 192, ಕಲಬುರಗಿಯಲ್ಲಿ 163, ರಾಯಚೂರಿನಲ್ಲಿ 120, ಕೊಪ್ಪಳದಲ್ಲಿ 95, ಚಾಮರಾಜನಗರದಲ್ಲಿ 92, ಬೀದರ್‌ನಲ್ಲಿ 91, ವಿಜಯನಗರದಲ್ಲಿ 90, ಬಳ್ಳಾರಿಯಲ್ಲಿ 74, ಹಾವೇರಿಯಲ್ಲಿ 37, ಯಾದಗಿರಿಯಲ್ಲಿ 23 ಪಂಚಾಯತಿಗಳಲ್ಲಿ ಉದ್ಯೋಗ ಸೃಷ್ಟಿಸುವ ಕೆಲಸಗಳಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಬೆಳಗಾವಿಯಲ್ಲಿ 487, ದಕ್ಷಿಣ ಕನ್ನಡದಲ್ಲಿ 208, ಕಲಬುರಗಿಯಲ್ಲಿ 88, ವಿಜಯಪುರದಲ್ಲಿ 20, ರಾಯಚೂರಿನಲ್ಲಿ 59, ಕೊಪ್ಪಳದಲ್ಲಿ 58, ವಿಜಯನಗರದಲ್ಲಿ 7 ಪಂಚಾಯತಿಗಳಲ್ಲಿ ಮಾತ್ರ ವಿಬಿ ಜಿ ರಾಮ್‌ಜೀ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ವಿವರ ನೀಡಲಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಸರ್ಕಾರ ನಿಮನ್ನು ಕ್ಷಮಿಸುವುದಿಲ್ಲ, ಜನ ಕೂಡ ನಿಮನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
