Homeರಾಜ್ಯಪತಿಯ ಇಚ್ಚೆಯನರಿತು ನಡೆದ ಸತಿ ಚೆನ್ನಮ್ಮ

ಪತಿಯ ಇಚ್ಚೆಯನರಿತು ನಡೆದ ಸತಿ ಚೆನ್ನಮ್ಮ

Mother Chennamma was guiding light for lakhs of families

-ವೈ. ಎಸ್‌‍.ವಿ. ದತ್ತ
ನಾನು ಹಳ್ಳಿಗಾಡಿನಿಂದ ಬಂದವನು. ನನ್ನ ಊರು ಬೆಂಗಳೂರಿನಿಂದ ಸುಮಾರು 250 ಕಿ.ಮೀ. ದೂರದಲ್ಲಿರುವ ಸಣ್ಣ ಗ್ರಾಮ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಯಗಟಿ ಎಂಬ ಸಣ್ಣ ಹಳ್ಳಿ. ನನ್ನದು ಕೃಷಿಕ ಕುಟುಂಬ. 1970ರಲ್ಲಿ ಕಾಲೇಜು ವ್ಯಾಸಂಗಕ್ಕೆಂದು ಬೆಂಗಳೂರಿಗೆ ಬಂದಾಗ ನಾನು ಆಕರ್ಷಿತನಾದದ್ದು ದೇವೇಗೌಡರ ವಿಧಾನಸಭೆಯ ಭಾಷಣಗಳಿಂದ. ದೂರದಿಂದ ಅವರನ್ನು ನೋಡಿದ್ದೆ. ಪತ್ರಿಕೆಗಳಲ್ಲಿ ಅವರ ಮಾತುಗಳ ವರದಿಯನ್ನು ಓದಿದ್ದೆ. ಗ್ರಾಮೀಣ ಪ್ರದೇಶದವನಾಗಿ ಸಹಜವಾಗಿ ನಾನು ಅವರ ವ್ಯಕ್ತಿತ್ವಕ್ಕೆ ಮನಸ್ಸಿನಲ್ಲಿಯೇ ಮಾರುಹೋಗಿದ್ದೆ.

ಮುಂದೆ 77ರ ಜಯಪ್ರಕಾಶ್‌ ನಾರಾಯಣ್‌ ಆವರ ಸಂಪೂರ್ಣ ಕ್ರಾಂತಿಯ ಚಳವಳಿ ತೀವ್ರಗೊಂಡಾಗ ಬಿಸಿರಕ್ತದ ಯುವಕನಾಗಿ ನಾನು ಅದರೆಡೆಗೆ ಆಕರ್ಷಿತನಾದೆ. ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌ ರವರು ಬೆಂಗಳೂರಿನ ಗಾಂಧೀ ಭವನಕ್ಕೆ ಬಂದು ಭಾಷಣ ಮಾಡಿದಾಗ ಹೇಗೋ ನುಸುಳಿಕೊಂಡು ಅವರ ಪಕ್ಕದಲ್ಲಿ ಕುಳಿತು ರೋಮಾಂಚನಗೊಂಡವನು ನಾನು. ಅಂದೇ ಸಂಜೆ ಬೆಂಗಳೂರಿನ ನ್ಯಾಷನಲ್‌ ಕಾಲೇಜ್‌ ಮೈದಾನದಲ್ಲಿ ಜೆ.ಪಿ.ಯವರ ಭಾಷಣವನ್ನು ಕಿವಿಗೊಟ್ಟು ಕೇಳಿದೆ. ಆಗಲೇ ನಾನು ದೇವೇಗೌಡರ ಆತೀಯ ಸಾಮೀಪ್ಯಕ್ಕೆ ಬಂದದ್ದು. ಅಲ್ಲಿಂದ ದೇವೇಗೌಡರ ಒಡನಾಟದ ಅನುಭವವನ್ನು ನಾನು ಪಡೆದುಕೊಂಡಾಗಿನಿಂದ ಅದು ದಿನೇ ದಿನೇ ಗಟ್ಟಿಯಾಗುತ್ತಲೇ ಬಂತು.

ವಿರೋಧ ಪಕ್ಷದ ನಾಯಕರಾಗಿ,ಜನತಾಪಕ್ಷದ ಅಧ್ಯಕ್ಷರಾಗಿ, ಸಚಿವರಾಗಿ, ಮತ್ತೆ ರಾಜಕೀಯ ಅಜ್ಞಾತವಾಸಸ್ಥರಾಗಿ, ಮತ್ತೆ ಸಂಸತ್‌ ಸದಸ್ಯರಾಗಿ, ಮುಖ್ಯಮಂತ್ರಿಗಳಾಗಿ, ಪ್ರಧಾನಿಗಳಾಗಿ, ಮಾಜಿ ಪ್ರಧಾನಿಗಳಾಗಿ, ರೈತ ಹೋರಾಟಗಾರರಾಗಿ- ಹೀಗೆ ಅವರ ವಿವಿಧ ಆಯಾಮಗಳ ರಾಜಕೀಯ ಬದುಕಿನಲ್ಲಿ ನಾನು ಅವರೊಂದಿಗೆ ಅತ್ಯಂತ ಹತ್ತಿರದಿಂದ ಕೆಲಸ ಮಾಡುವ ಅವಕಾಶವನ್ನು ಪಡೆದುಕೊಂಡೆ. ಅವರೊಂದಿಗಿನ ನನ್ನ ಸುಮಾರು 28 ವರ್ಷಗಳ ಒಡನಾಟ ಎಂದೂ ಮರೆಯುವಂತಹುದಲ್ಲ. ಅವರ ಕುಟುಂಬದ ಒಬ್ಬ ಸದಸ್ಯನ ರೀತಿಯಲ್ಲಿ ಅವರು ನನ್ನನ್ನು ನಡೆಸಿಕೊಂಡಿದ್ದಾರೆ. ಅವರ ಏಳು-ಬೀಳುಗಳ ಎಲ್ಲ ಸಂದರ್ಭದಲ್ಲೂ ನಾನು ಅವರೊಂದಿಗಿದ್ದೇನೆ ಎಂಬುದು ನನಗೆ ತೃಪ್ತಿ ಸಮಾಧಾನ ತಂದಿದೆ. ಇಂತಹ ಆತೀಯ ಒಡನಾಟವಿದ್ದುದರಿಂದಲೇ ನಾನು ಶ್ರೀಮತಿ ಚನ್ನಮ ದೇವೇಗೌಡರನ್ನೂ ಹತ್ತಿರದಿಂದ ಕಂಡು ಅರಿತುಕೊಳ್ಳುವ ಅವಕಾಶ ಪಡೆದೆ.

ದಿನದ ಬಹುಪಾಲು ಸಮಯವನ್ನು ನಾನು ದೇವೇಗೌಡರ ಮನೆಯಲ್ಲಿ ವರ್ಷಗಟ್ಟಲೆ ಕಳೆದಿದ್ದೇನೆ. ಹೆಚ್ಚಿನ ಸಮಯವನ್ನೆಲ್ಲಾ ದೇವೇಗೌಡರ ಸಾರ್ವಜನಿಕ ಬದುಕಿನ ಹೋರಾಟದ ಚರ್ಚೆ, ಸಿದ್ಧತೆ, ಏರ್ಪಾಟುಗಳಿಗೆ ವಿನಿಯೋಗಿಸುತ್ತಿದ್ದರೂ ಶ್ರೀಮತಿ ಚನ್ನಮನವರ ದೈನಂದಿನ ಬದುಕನ್ನು ನಾನು ನೋಡಿದ್ದೇನೆ. ರಾಷ್ಟ್ರದ ಮತ್ತು ರಾಜ್ಯದ ಕೇಂದ್ರ ಬಿಂದುವಾದ ದೇವೇಗೌಡರ ಪತ್ನಿಯಾದರೂ ಅವರು ತಮನ್ನು ತಾವು ಗೃಹಕೃತ್ಯಕ್ಕೆ ಮಾತ್ರ ಸೀಮಿತಗೊಳಿಸಿಕೊಂಡವರು. ಪತಿಯ ಬೇಕು ಬೇಡಗಳಿಗೆ ತಕ್ಕಂತೆ ನಡೆದುಕೊಳ್ಳುವ, ಅಪಾರ ದೈವ ಭಕ್ತಿಯುಳ್ಳ, ಶುದ್ಧ ಸಾತ್ವಿಕ ಮಹಿಳೆ ಅವರು.

ಸದೃಹಿಣಿ ಎಂಬ ಶಬ್ದದ ಜೀವಂತ ಪ್ರತೀಕ ಆಕೆ ಎಂದರೆ ಅದು ಬೇರೆಯವರಿಗೆ ಉತೆ್ಪ್ರೕಕ್ಷೆಯೆನಿಸಬಹುದಾದರೂ ನನಗಂತೂ ಹಾಗೆನಿಸುವುದಿಲ್ಲ. ಅನೇಕ ಬಾರಿ ದೇವೇಗೌಡರು ನನ್ನೊಂದಿಗೆ ಲೋಕಾಭಿರಾಮವಾಗಿ ಮತ್ತು ಆತೀಯವಾಗಿ ಮಾತನಾಡುವಾಗ ತಮ ಎಲ್ಲದಕ್ಕೂ ಪ್ರೇರಣೆ ತಮ ಪತ್ನಿ ಎಂಬುದನ್ನು ಹೇಳಿರುವುದು ಉಂಟು. ಸಾಮಾನ್ಯವಾಗಿ ಪುರುಷನೊಬ್ಬನ ಸಾಧನೆಯ ಹಿಂದೆ ಮಹಿಳೆಯ ಪಾತ್ರವಿರುತ್ತದೆ ಎಂಬುದನ್ನು ನಾನು ಬಲ್ಲೆನಾದರೂ ಅದಕ್ಕೊಂದು ಸ್ಪಷ್ಟ ನಿದರ್ಶನವನ್ನು ಸಮೀಪದಲ್ಲೇ ಕಾಣುವ ಅವಕಾಶ ಸಿಕ್ಕಿದ್ದು ದೇವೇಗೌಡರ ಕುಟುಂಬದಲ್ಲಿದಿನದ 24 ಗಂಟೆಗಳಲ್ಲಿ ಸುಮಾರು 20 ಗಂಟೆಗಳನ್ನು ರಾಜಕೀಯ, ಸಾಮಾಜಿಕ, ಆರ್ಥಿಕ ಚಿಂತನೆಗಳಲ್ಲಿ ಮತ್ತು ಅದಕ್ಕೆ ಪೂರಕವಾದ ಹೋರಾಟಗಳಲ್ಲಿ ತೊಡಗಿಸಿಕೊಳ್ಳುತ್ತಲೇ ಬಂದಿರುವ ದೇವೇಗೌಡರ ಬಾಯಿಂದಲೇ ಅವರ ಪತ್ನಿಯ ಬಗೆಗಿನ ಒಂದೆರಡು ಅನುಭವಗಳನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ನನ್ನದಾಗಿದ್ದರೂ ಅದನ್ನು ತಿಳಿದುಕೊಳ್ಳುವುದಕ್ಕೆ 28 ವರ್ಷಗಳಿಂದ ಸಾಧ್ಯವೇ ಆಗಿರಲಿಲ್ಲ ಎಂದರೆ ದೇವೇಗೌಡರ ಚಟುವಟಿಕೆಗಳ ಹಾಸು- ಬೀಸು ಮತ್ತು ಬಿರುಸು ನಿಮಗೆ ಅರ್ಥವಾಗಬಹುದು.

ಈ ಲೇಖನ ಬರೆಯುವುದಕ್ಕೆ ಮುಂಚೆ ಹೇಗಾದರೂ ಮಾಡಿ ದೇವೇಗೌಡರ ಬಾಯಿಂದಲೇ ಅವರ ಪತ್ನಿಯ ಬಗೆಗಿನ ಒಂದೆರಡು ಆತೀಯ ಘಟನೆಗಳನ್ನು ಕೇಳಿ ತಿಳಿದಕೊಳ್ಳಬೇಕೆಂದು ಬಹಳ ಪ್ರಯತ್ನ ಮಾಡಿದೆ. ಕೊನೆಗೆ ಮೊನ್ನೆ ಅಂದರೆ ಆಗಸ್ಟ್‌ 18,2005 ರಂದು ರಾತ್ರಿ ನಾನು ಮತ್ತು ಅವರು ಇಬ್ಬರೇ ಕಾರಿನಲ್ಲಿ ಖ್ಯಾತ ಕಿರುತೆರೆ ನಿರ್ದೇಶಕ ಟಿ.ಎನ್‌.ಸೀತಾರಾಂ ಅವರ ಮಗಳ ಮದುವೆಯ ಆರತಕ್ಷತೆಗೆ ಹೋಗುವಾಗ ಹೇಗೋ ದೇವೇಗೌಡರನ್ನು ರಾಜಕೀಯ ಮಾತಿನಿಂದ ಮರೆಸಿ ಅವರ ಬಾಯಿ ಬಿಡಿಸಿದೆ. ಆಗ ಅವರು ಚುಟುಕಾಗಿ ಹೇಳಿದ ಎರಡು ಘಟನೆಗಳನ್ನು ಇಲ್ಲಿ ನನ್ನ ಮಾತುಗಳಲ್ಲಿ ಹೇಳಿದ್ದೇನೆ.

1953ನೇ ಸಾಲು. ಆಗ ದೇವೇಗೌಡರಿಗೆ 20 ವರ್ಷ. ಚನ್ನಮನವರನ್ನು ಮದುವೆಯಾಗಿ ಕೇವಲ ಮೂರು ತಿಂಗಳಾಗಿತ್ತು. ಇನ್ನೂ ಪತಿಯನ್ನು ಅರ್ಥಮಾಡಿಕೊಳ್ಳಲು ಆ ಅವಧಿ ಅಲ್ಪದ್ದೇ ಆಗಿತ್ತು. ಆಗ ದೇವೇಗೌಡರು ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಗುತ್ತಿಗೆ ಕೆಲಸಗಳನ್ನು ಮಾಡುವ ಉಮೇದಿನಲ್ಲಿದ್ದರು. ಆ ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ ಪ್ರಖ್ಯಾತ ಗುತ್ತಿಗೆದಾರರೆಂದರೆ, ಸಾದಿಕ್‌ ಆಲಿ ಕುಟುಂಬದವರು. ಹಿಂದೆ ಮೈಸೂರಿನ ದಿವಾನರಾಗಿದ್ದ ಮಿರ್ಜಾ ಇಸಾಯಿಲ್‌ ಕುಟುಂಬದ ಸಮೀಪ ಬಂಧುಗಳು ಅವರು. ಹೀಗಾಗಿ ರಾಜಕೀಯವಾಗಿ ಪ್ರಭಾವಿಗಳೂ ಮತ್ತು ಆರ್ಥಿಕವಾಗಿ ಪ್ರಬಲರೂ ಆಗಿದ್ದರು. ಇಂತಹವರು ಟೆಂಡರ್‌ ಹಾಕಿದ್ದಾರೆಂದರೆ ಅವರ
ಮುಂದೆ ಮತ್ತೊಬ್ಬ ಟೆಂಡರ್‌ ಹಾಕಿ ಸ್ಪರ್ಧೆಯೊಡ್ಡುವ ಮಾತಂತೂ ಅಸಾಧ್ಯದ್ದೇ ಆಗಿತ್ತು. ಆದರೆ ಇನ್ನೂ ಯುವಕರಾಗಿದ್ದ ದೇವೇಗೌಡರು ಅಂತಹ ಒಂದು ಸಂದರ್ಭದಲ್ಲಿ ಸಾದಿಕ್‌ ಆಲಿಯವರ ಎದುರಿಗೇ ತಾವೂ ಗುತ್ತಿಗೆ ಕೆಲಸವೊಂದಕ್ಕೆ ಟೆಂಡರ್‌ ಹಾಕಲು ತೀರ್ಮಾನಿಸಿದರು. ತಾಲ್ಲೂಕು ಕಛೇರಿಯಲ್ಲಿ ಟೆಂಡರ್‌ ಅರ್ಜಿ ಪಡೆದುಕೊಂಡರಾದರೂ ಠೇವಣಿ ಹಣ ಕಟ್ಟಲು ಬೇಕಾಗಿದ್ದ 900/- ರೂಪಾಯಿಗಳು ಅವರ ಬಳಿ ಇರಲಿಲ್ಲ.
ಟೆಂಡರ್‌ ಹಾಕುವ ಸಮಯ ಮುಗಿಯುತ್ತಾ ಬಂದಿತ್ತು. ಹಣವನ್ನು ಹೊಂಚಿಕೊಳ್ಳುವಷ್ಟು ವ್ಯವಧಾನವೂ ಇರಲಿಲ್ಲ. ದಿಕ್ಕು ತೋಚದ ದೇವೇಗೌಡರು ತಮ ಬಳಿ ಕೆಲಸಕ್ಕಿದ್ದ ಹುಡುಗ ಬೆಟ್ಟಯ್ಯ ಎಂಬುವನ ಮೂಲಕ ತಮ ಪತ್ನಿಗೆ ೞತಕ್ಷಣವೇ ನಿನ್ನ ಬಳಿ ಇರುವ ಒಡವೆಗಳನ್ನು ಕೊಟ್ಟು ಕಳುಹಿಸುೞ ಎಂದು ಒಂದು ಚೀಟಿ ಬರೆದು ಕಳುಹಿಸಿದರು. ಮದುವೆಯಾಗಿ ಮೂರು ತಿಂಗಳಷ್ಟೇ ಆಗಿತ್ತು. ಬಹುಶಃ ಗಂಡನನ್ನು ಅರ್ಥ ಮಾಡಿಕೊಳ್ಳಲೂ ಆಕೆಗೆ ಸಾಧ್ಯವಾಗಿರಲಿಲ್ಲವೇನೋ! ಆದರೆ ಆಕೆ ಹಿಂದೆ ಮುಂದೆ ನೋಡದೆ, ಮರುಮಾತಾಡದೆ ಕಿವಿಯ ಓಲೆ, ಮೂಗುಬೊಟ್ಟು ಮತ್ತು ಮಾಂಗಲ್ಯ ಈ ಮೂರನ್ನು ಬಿಟ್ಟು ಉಳಿದ ಎಲ್ಲಾ ಆಭರಣಗಳನ್ನೂ ಬೆಟ್ಟಯ್ಯನ ಕೈಯಲ್ಲಿ ಕಳುಹಿಸಿದರು.

ಅದನ್ನು ಅಡವಿಟ್ಟು ದೇವೇಗೌಡರು ಟೆಂಡರ್‌ ಠೇವಣಿಯ ಹಣ ಕಟ್ಟಿದರು. ಆದರೆ ಟೆಂಡರ್‌ ಇವರ ಪರವಾಗಿ ಆಗಲಿಲ್ಲ. ಅವರು ಠೇವಣಿ ಹಣ ವಾಪಸ್ಸು ಪಡೆದುಕೊಂಡು ಅಡವಿಟ್ಟ ಆಭರಣಗಳನ್ನು ವಾಪಸ್ಸು ತೆಗೆದುಕೊಂಡು ತಮ ಹೆಂಡತಿಗೆ ಕೊಡಲು ಹೋದರು.ಆದರೆ ಆ ಆಭರಣಗಳನ್ನು ಚನ್ನಮನವರು ವಾಪಸ್ಸು ತೆಗೆದುಕೊಳ್ಳಲಿಲ್ಲ. ಆಗ ಆಕೆ ತಮ ಗಂಡನಿಗೆ ಹೇಳಿದ್ದು ಹೀಗೆ. ಈ ಆಭರಣಗಳನ್ನು ನಾನು ಈಗ ವಾಪಸ್ಸು ತೆಗೆದುಕೊಳ್ಳುವುದಿಲ್ಲ.

ಇದು ನಿಮ ಬಳಿಯೇ ಇರಲಿ. ಮುಂದೆ ನಿಮಗೆ ಆಭರಣಗಳನ್ನು ಅಡವಿಟ್ಟು ಹಣ ಹೊಂಚಿಕೊಳ್ಳಬೇಕಾದ ಪರಿಸ್ಥಿತಿ ಇನ್ನು ಮುಂದೆ ಇಲ್ಲ ಎಂಬ ಒಳ್ಳೆಯ ಪರಿಸ್ಥಿತಿ ಎಂದು ಬರುತ್ತದೋ ಆ ದಿನ ನಾನು ಇವುಗಳನ್ನು ಮತ್ತೆ ಮುಟ್ಟುತ್ತೇನೆ ಎಂದು ಶಪಥದ ರೀತಿಯಲ್ಲಿ ಆಕೆ ಹೇಳಿದರು. ಈ ಪ್ರಸಂಗ ಪತಿ- ಪತ್ನಿಯರ ಸ್ವಭಾವವನ್ನು ಸ್ಪಷ್ಟವಾಗಿ ತೋರಿಸುತ್ತದೆ.ಎದುರಾಳಿ ಎಷ್ಟೇ ಪ್ರಬಲನಾಗಿದ್ದರೂ ಅವನ ವಿರುದ್ದ ಹೇಗಾದರೂ ಸರಿ ಸೆಣೆಸಬೇಕೆಂಬ ಛಲ ಗಂಡನದಾಗಿದ್ದರೆ ತನ್ನ ಗಂಡ ತನ್ನ ಕಾಲ ಮೇಲೆ ತಾನು ನಿಲ್ಲುವ ದಿನಗಳನ್ನು ಕಾಣಲೇಬೇಕೆಂಬ ಹಠ ಹೆಂಡತಿಯದು ಎಂಬುದು ಈ ಪ್ರಸಂಗದಿಂದ ಗೊತ್ತಾಗುತ್ತದೆ. ದೇವೇಗೌಡರು ಇಂದಿಗೂ ಈ ತಮ ಛಲಗಾರಿಕೆಯಿಂದಲೇ ಸಾರ್ವಜನಿಕ ಬದುಕಿನಲ್ಲಿ ತಮದೇ ಆದ ವಿಶಿಷ್ಟ ವ್ಯಕ್ತಿತ್ವದ ಛಾಪನ್ನು ಮೂಡಿಸಿದ್ದಾರೆ. ದೇವೇಗೌಡರೆಂದರೆ ಹಿಡಿದ ಹಠ ಸಾಧಿಸುವವರು ಎಂಬ ಭಾವನೆ ಜನಸಾಮಾನ್ಯರಲ್ಲಿದೆ.

ಮತ್ತೊಂದು ಪ್ರಸಂಗ 1963ರ ಸಾಲಿನದು. ದೇವೇಗೌಡರು ಪ್ರಥಮ ಬಾರಿಗೆ ಶಾಸಕರಾಗಿ ಒಂದು ವರ್ಷ ಕಳೆದಿತ್ತು. ಹಾಸನ ಜಿಲ್ಲೆಯಲ್ಲಿ ಭೀಕರ ಬರಗಾಲ. ಆ ವರ್ಷದ ಮಹಾಲಯ ಅಮಾವಾಸ್ಯೆಯ ದಿನದಂದು ಹಿರಿಯರ ಕಾರ್ಯ ೞಪಕ್ಷೞ ಮಾಡಲು ಸ್ನಾನ ಮಾಡುವುದಕ್ಕೂ ನೀರಿಗೆ ಗತಿಯಿಲ್ಲವೆಂಬ ಪರಿಸ್ಥಿತಿ. ದೇವೇಗೌಡರು ಮತ್ತು ಅವರ ಪತ್ನಿ ಪಕ್ಕದ ಮಾವಿನಕೆರೆಗೆ ಹೋಗಿ ಹೊಳೆಯಲ್ಲಿ ಸ್ನಾನ ಮಾಡಿಕೊಂಡು ಬಂದು ಅಂದಿನ ಕಾರ್ಯವನ್ನು ನೆರವೇರಿಸಿದರಂತೆ.

ಅಂತಹ ಕಠಿಣ ದಿನಗಳು ಅವು. ಅದಾದ ಮೂರು ದಿನಗಳಲ್ಲಿ ಒಂದು ರಾತ್ರಿ ದೇವೇಗೌಡರು ತಮ ಪತ್ನಿಯೊಂದಿಗೆ ಆಗ ತಾನೇ ಊಟಕ್ಕೆ ಕುಳಿತಿದ್ದರು. ಅಡಿಗೆ ಮನೆಯಲ್ಲಿ ಪಾತ್ರೆ ಬರಿದು. ದೇವೇಗೌಡರು ಮತ್ತು ಅವರ ಪತ್ನಿ ತಮ ತಟ್ಟೆಗೆ ಹಾಕಿಕೊಂಡಿದ್ದ ರಾಗಿಮುದ್ದೆಯನ್ನು ಮುರಿದು ಇನ್ನೇನು ಬಾಯಿಗಿಟ್ಟುಕೊಳ್ಳಬೇಕು ಅನ್ನುವಷ್ಟರಲ್ಲಿ ಒಬ್ಬ ಬಡ ವೃದ್ಧ ರೈತ ದೇವೇಗೌಡರ ಮುಂದೆ ಬಂದು ನಿಂತ. ಹೊಟ್ಟೆಹಸಿದಿದೆ.
ಮೂರು ದಿನಗಳಿಂದ ಏನನ್ನೂ ತಿಂದಿಲ್ಲ. ಏನಾದರೂ ತಿನ್ನಲು ಕೊಡಿ ಎಂದು ಅಂಗಲಾಚಿದ. ತಕ್ಷಣವೇ ದೇವೇಗೌಡರು ಮತ್ತು ಅವರ ಪತ್ನಿ ತಮ ತಟ್ಟೆಯಲ್ಲಿದ್ದ ಮುದ್ದೆಯನ್ನು ಅವನಿಗೆ ನೀಡಿ ತಾವಿಬ್ಬರೂ ಅಂದು ರಾತ್ರಿ ಹಾಗೆಯೇ ಮಲಗಿದರಂತೆ. ಈ ಪ್ರಸಂಗವನ್ನು ಹೇಳುವಾಗ ದೇವೇಗೌಡರ ಕಣ್ಣಂಚಿನಲ್ಲಿ ನೀರು ತುಳುಕಿತ್ತು. ಬಡವರಿಗಾಗಿ ಮಿಡಿಯುವ ತಮ ಪತ್ನಿಯ ಅನುಕಂಪ ಅವರನ್ನು ಕ್ಷಣಕಾಲ ಭಾವೋದ್ರೇಕಕ್ಕೆ ಒಳಪಡಿಸಿತ್ತು.

ಶ್ರೀಮತಿ ಚೆನ್ನಮನವರ ಈ ಆತಿಥ್ಯದ ಸವಿಯನ್ನು ಅಂದಿನಿಂದ ಇಂದಿನವರೆಗೆ ಸವಿದಿರುವವರು ಎಷ್ಟು ಜನವೋ! ಹರದನಹಳ್ಳಿ ಇರಬಹುದು, ಹೊಳೆನರಸೀಪುರದ ಮನೆಯಿರಬಹುದು, ವಿರೋಧ ಪಕ್ಷದ ನಾಯಕರಾಗಿದ್ದಾಗಿನ ರಾಣೋಜೀರಾವ್‌ ರಸ್ತೆಯ ಮನೆಯಿರಬಹುದು, ವಿಲ್ಸನ್‌ ಗಾರ್ಡನ್ನಿನ ಮನೆಯಿರಬಹುದು, ಲೋಕೋಪಯೋಗಿ ಸಚಿವರಾಗಿದ್ದಾಗಿನ ಕ್ರೆಸೆಂಟ್‌ ರಸ್ತೆಯ ಮನೆಯಿರಬಹುದು. ರಾಜಕೀಯ ಅಜ್ಞಾತವಾಸದ ದಿನಗಳಲ್ಲಿನ ಕಾವೇರಿ ಟಾಕೀಸಿನ ಹಿಂಬದಿಯ ಮನೆಯಿರಬಹುದು, ಮುಂದೆ ಮುಖ್ಯಮಂತ್ರಿಯಾದ ಮೇಲಿನ ಅನುಗ್ರಹವಿರಬಹುದು, ದೇಶದ ಪ್ರಧಾನಿಯಾಗಿ ದೆಹಲಿಯ ರೇಸ್‌‍ ಕೋರ್ಸ್‌ ರಸ್ತೆಯ ಬಂಗಲೆಯಿರಬಹುದು- ಎಲ್ಲೆಡೆಯಲ್ಲೂ ಶ್ರೀಮತಿ ಚನ್ನಮನವರ ಕೈಯಿಂದ ಅನ್ನದ ತುತ್ತು ತಿಂದವರು ಬಹಳಷ್ಟು ಜನ. ಹಳ್ಳಿಯವರಿರಲೀ, ರೈತರಿರಲೀ, ಕಾರ್ಯಕರ್ತರಿರಲೀ, ಅಧಿ ಕಾರಿಗಳಿರಲೀ, ನಾಯಕರಿರಲೀ, ಎಲ್ಲರಿಗೂ ಒಂದೇ ಬಗೆಯ ಆತಿಥ್ಯ. ಎಲ್ಲರ ಕುಶಲೋಪರಿ ವಿಚಾರಿಸುವ ಅವರ ಪರಿ ಅತ್ಯಂತ ಆತೀಯದ್ದು. ಅವರ ಈ ಅನ್ನದಾನ ಮತ್ತು ಆತಿಥ್ಯದ ಹಿಂದೆ ಇರುವುದು ದೈವ ಭಕ್ತಿ ಮತ್ತು ಪಾಪಭೀರುತನ. ಅದರ ಸವಿಯನ್ನು ಉಂಡಿರುವ ಸಾವಿರಾರು ಜನರಲ್ಲಿ ನಾನೂ ಒಬ್ಬ.

RELATED ARTICLES

Latest News