-ಹೆಚ್.ಡಿ.ರೇವಣ್ಣ
ಮಿನು ಮಿನುಗುವ ಸಾವಿರ ತಾರೆಗಳು ಸೇರಿದರೂ ಒಂದು ಚಂದ್ರನಾಗಬಹುದೆ? ಹಾಲು ಬೆಳದಿಂಗಳ ಹೊಳೆ ಹರಿಸಬಹುದೆ? ಹಾಗೆ ತಾಯಿ ಎನ್ನುವ ದೈವಕ್ಕೆ ಬೇರಾವುದೇ ಪರ್ಯಾಯವಿರಬಹುದೆ? ಮಾತೆಯ ಮಮತೆಯ ಸವಿ ನೀಡಬಹುದೆ? ನನ್ನ ಮಟ್ಟಿಗಂತೂ ಖಂಡಿತಾ ಇಲ್ಲ. ನನಗೆ ಜನ ನೀಡಿದ ನನ್ನಮನೇ ನನ್ನ ಸರ್ವಸ್ವ, ಸಮಸ್ತ ಅವರು ಬರೀ ನನಗೆ ಜನ ನೀಡಿದ್ದಷ್ಟೇ ಅಲ್ಲ. ಈ ಬದುಕನ್ನು ಬದುಕಾಗಿಸಿಕೊಳ್ಳಲು ನೀಡಿದ ಸಕಲ ನೆರವಿನ ಋಣವನ್ನು ತೀರಿಸುವುದು ನನ್ನ ಈ ಒಂದು ಜನದಿಂದ ಸಾಧ್ಯವಿಲ್ಲ.ಶ್ರೀಮತಿ ಚೆನ್ನಮ, ಶ್ರೀ ಹೆಚ್.ಡಿ.ದೇವೇಗೌಡರ ಆರು ಮಕ್ಕಳಲ್ಲಿ ಎರಡನೆಯವನಾದ ನಾನು ಹುಟ್ಟಿದ್ದು 1957ರಲ್ಲಿ. ಆಗಿನ್ನೂ ನನ್ನ ತಂದೆ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿರಲೇ ಇಲ್ಲ.
ಡಿಪ್ಲೊಮಾ ಪದವೀಧರರಾಗಿದ್ದ ಅವರು ಗುತ್ತಿಗೆ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದರು. ಅವರ ಕಾರ್ಯವ್ಯಾಪ್ತಿಯೂ ಬರೀ ಹೊಳೆನರಸೀಪುರ ತಾಲ್ಲೂಕಿಗೆ ಸೀಮಿತಗೊಂಡಿತ್ತು. ಪಿತ್ರಾರ್ಜಿತವಾಗಿ ಬಂದಿದ್ದ ಹರದನಹಳ್ಳಿಯ ಮಣ್ಣುಗೋಡೆಯ ಹೆಂಚಿನ ಮನೆಯಲ್ಲಿ ನಮ ವಾಸ್ತವ್ಯ. ತಾತ, ಅಜ್ಜಿ, ಅವರ ಮಕ್ಕಳು ಎಲ್ಲಾ ಸೇರಿದ್ದ ತುಂಬು ಸಂಸಾರಕ್ಕೂ ಅದೇ ನೆಲೆ.
ಅಮ್ಮ ಹಾಸನ ತಾಲ್ಲೂಕಿನ ಮುತ್ತಿಗೆ ಹಿರೆಹಳ್ಳಿಯವರು. ಭೂಮಿ ತಾಯಿಯನ್ನೇ ನೆಚ್ಚಿಕೊಂಡ ರೈತಾಪಿ ವರ್ಗದ ಅವಿಭಕ್ತ ಕುಟುಂಬದಿಂದ ಬಂದಿದ್ದ ಅವರಿಗೆ ನನ್ನ ತಂದೆಯ ಈ ಕೂಡು ಕುಟುಂಬಕ್ಕೆ ಹೊಂದಿಕೊಳ್ಳುವುದೇನೂ ಕಷ್ಟದ ಮಾತಾಗಿರಲಿಲ್ಲ. ಹಾಗಾಗಿ ಸೇರಿದ ಮನೆಯ ಹಿರಿಸೊಸೆಯಾಗಿ ಮೈದುನ ನಾದಿನಿಯರನ್ನೂ ಅತ್ತೆ ಮಾವಂದಿರನ್ನೂ ಸರಿದೂಗಿಸಿಕೊಂಡು ಬಾಳುವುದು ಗೊತ್ತಿತ್ತು.
ಕಷ್ಟಗಳ ಮಧ್ಯೆ ಈ ಹೊಣೆಗಾರಿಕೆಯನ್ನೆಲ್ಲ ನಿಭಾಯಿಸಿದ್ದಕ್ಕೋ ಏನೋ ನನ್ನಮನಿಗೆ ತಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಏಕೈಕ ಮಹದಾಕಾಂಕ್ಷೆಯಿತ್ತು. ನನ್ನ ಒಡಹುಟ್ಟಿದವರೆಲ್ಲರೂ ಅಮನ ಕಣ್ಣಾವಲಿನಲ್ಲೇ ಪದವಿ, ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಗಳನ್ನು ಪಡೆದುಕೊಂಡರು.
ಆದರೆ ಅದೇಕೋ ಮೊದಲಿಂದಲೂ ನನಗೆ ನಾಲ್ಕು ಗೋಡೆಯ ಒಳಗೆ ಕುಳಿತು ಕಲಿಯುವ ಏಕಾಗ್ರತೆಯೇ ಇರಲಿಲ್ಲ. ಸ್ವಚ್ಚಂದ ಬಯಲಿನಲ್ಲಿ ವ್ಯವಸಾಯ ಮಾಡುವುದೋ, ಗೃಹಕೃತ್ಯದ ವ್ಯವಹಾರ ನೋಡಿಕೊಳ್ಳುವುದೋ ಇಷ್ಟವಾಗುತ್ತಿತ್ತು. ತಮ ಇತರ ಮಕ್ಕಳನ್ನು ಉತ್ತೇಜಿಸಿ ಸಂಪೂರ್ಣ ಶಿಕ್ಷಣ ಕೊಡಿಸುವುದು ಸಾಧ್ಯವಾದ ನನ್ನ ತಾಯಿಗೆ ನನ್ನನ್ನು ಮಾತ್ರ ಹತ್ತನೆ ತರಗತಿ ದಾಟಿಸಲಾಗಲಿಲ್ಲ. ಜೊತೆಗೆ ನಾನು ಹಠಮಾರಿ ಬೇರೆ. ಬೇಕೆನಿಸಿದ್ದನ್ನು ಪಡೆದೇ ತೀರುವಂಥ ಛಲವಾದಿ. ಈ ಎರಡೂ ಅಂಶಗಳು ಅಮನ ಆತಂಕಕ್ಕೆ ಕಾರಣವಾಗಿ ಹೋಗಿದ್ದವು. ಎಲ್ಲ ಮಕ್ಕಳೂ ಜಾಣೆಯಿಂದ ಮುಂದುವರಿದರೂ ಈ ಹುಡುಗ ಮಾತ್ರ ಹೀಗಾದನಲ್ಲ! ಇವನ ಭವಿಷ್ಯ ಹೇಗೆ? ಎಂದೇ ಕೊರಗುತ್ತಿದ್ದರು. ಆ ಕಾರಣಕ್ಕೇ ಏನೋ ಅವರ ಪ್ರೀತಿಯ ಬುತ್ತಿಯಲ್ಲಿನನಗೆ ದೊಡ್ಡ ಪಾಲೂ ಸಿಗುತ್ತಿತ್ತು. ಆಗೇನೋ ಆ ಪ್ರೀತಿಯನ್ನು ಸಂತೋಷದಿಂದ ಸವಿದೆನಾದರೂ, ಎಲ್ಲರಂತೆ ವಿದ್ಯಾವಂತನಾಗಿ ನನ್ನಮನ ಆಸೆಯನ್ನು ಪೂರೈಸಲಿಲ್ಲವಲ್ಲ ಎಂದು ಈಗ ಪಶ್ಚಾತ್ತಾಪ ಪಡುತ್ತೇನೆ.
ನನ್ನ ಹಠದ ಸ್ವಭಾವ ಮತ್ತು ಕುಂಟಿದ ವಿದ್ಯೆ ನನಗೆ ಅಮನ ಪ್ರೀತಿ ಹೆಚ್ಚಾಗಿ ಕೊಡಿಸಿದ್ದೇ ಅಲ್ಲದೆ, ನನ್ನ ಬದುಕು ರೂಪಿಸಿಕೊಳ್ಳಲು ಅಮನ ಯಥೇಚ್ಛ ನೆರವನ್ನೂ ಕೊಡಿಸಿಕೊಟ್ಟಿತು.ಅದು ಹೇಗೆಂದರೆ, 1962ರಲ್ಲಿ ಶಾಸಕರಾದ ನನ್ನ ತಂದೆ ಹರದನಹಳ್ಳಿ ಬಿಟ್ಟು ಹೊಳೆನರಸೀಪುರದ ಕೋಟೆ ಮುಖ್ಯ ರಸ್ತೆಯಲ್ಲೊಂದು ಬಾಡಿಗೆ ಮನೆ ಹಿಡಿದರು. ಅವರ ಕಾರ್ಯ ಚಟುವಟಿಕೆಯ ಕೇಂದ್ರವಾಗಿದ್ದ ಆ ಮನೆಯಲ್ಲಂತೂ ಯಾವಾಗಲೂ ಜನರೇ ಜನ. ಬಂದವರು ಯಾರೇ ಇರಲಿ, ಬಡವರೋ, ಶ್ರೀಮಂತರೋ, ಜಾತಿ ವಿಜಾತಿಯವರೋ ಅಮ ಅವರಿಗೆ ಸ್ಪಂದಿಸುತ್ತಿದ್ದ ರೀತಿಯಲ್ಲಿ ತೋರುತ್ತಿದ್ದ ಮಾತೃಪ್ರೀತಿಯಲ್ಲಿ ಮಾತ್ರ ಹೆಚ್ಚು ಕಮಿಯಿರುತ್ತಿರಲಿಲ್ಲ. ಅತಿಥಿಗಳನ್ನು ಬವಣಿಸುವುದರಲ್ಲಿ ತಾರತಮ್ಯ ತೋರುತ್ತಿರಲಿಲ್ಲ. ನಾನಂತೂ ಅಮನಿಗೆ ಹತ್ತಿರವಾಗಿದ್ದುಕೊಂಡು ಅವರ ಅಂತರ್ಭಾವಗಳನ್ನು ನೋಡುತ್ತಾ ಬೆಳೆದೆ. ಈ ಮಧ್ಯೆ ಅಪ್ಪನ ರಾಜಕೀಯ ಕಾರ್ಯವ್ಯಾಪ್ತಿ ಹೆಚ್ಚಾಗುತ್ತಾ ಹೋಯಿತು. ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದಲೂ ಹೊಳೆನರಸೀಪುರದ ನಮ ಸಂಸಾರ ಬೆಂಗಳೂರು ಸೇರುವಂತಾಯಿತು. ಅಪ್ಪ ಇಲ್ಲೊಂದು ಬಾಡಿಗೆ ಮನೆ ಮಾಡಿದರು. ಮೊದಲೇ ಹೇಳಿದಂತೆ ಈ ನಗರ ಜೀವನ, ಶಾಲಾ ಶಿಕ್ಷಣ, ಅದರ ಜಂಜಾಟ ನನ್ನ ಆಯ್ಕೆಯಾಗಿರಲಿಲ್ಲ.
ಇನ್ನು 1976ರಲ್ಲಿ ನನ್ನ ತಂದೆ ವಿಧಾನಸಭೆಯ ವಿರೋಧಪಕ್ಷದ ನಾಯಕರಾಗಿದ್ದ ಹೊತ್ತಿನಲ್ಲೇ ಇಡೀ ದೇಶದಲ್ಲಿ ತುರ್ತುಪರಿಸ್ಥಿತಿ ಸುಡುಬೆಂಕಿ ಹೊತ್ತಿಕೊಂಡಿತು. ರಾಜಕೀಯ ಕಾರಣಗಳಿಗಾಗಿ ಅಪ್ಪಜೈಲು ಸೇರಿದರು. ನನ್ನ ಶಿಕ್ಷಣವೂ ಮುಂದೆ ಸಾಗದೆ ನಿಂತುಬಿಟ್ಟಿತ್ತು ಆ ವಿಷಮ ಪರಿಸ್ಥಿತಿಯಲ್ಲಿ ಏನು ಮಾಡುವುದೆಂದೇ ನನಗೆ ದಿಕ್ಕು ತೋಚುತ್ತಿರಲಿಲ್ಲ. ಸೀದಾ ಊರಿಗೆ ಹೋಗಿಬಿಟ್ಟೆ ಹೊಳೆನರಸೀಪುರದ ಪಡವಲಹಿಪ್ಪೆ ಗ್ರಾಮದಲ್ಲಿ 1964ರಲ್ಲಿ ಅಪ್ಪ ಕಟ್ಟಿಸಿದ್ದ ಹೆಂಚಿನ ಮನೆಯೊಂದಿತ್ತು. ಅಲ್ಲಿ ತಳ ವೂರಿ, ಇದ್ದ ಜಮೀನಿನಲ್ಲೇ ನನ್ನ ಪ್ರೀತಿಯ ಉದ್ಯೋಗ ಕೈಗೆತ್ತಿಕೊಂಡೆ. ಆಗ ನನ್ನ ಈ ಹೊಸ ಪ್ರಯತ್ನಕ್ಕೆ ಜೊತೆಕೊಟ್ಟವರು ನನ್ನ ತಾಯಿ. ವಿದ್ಯಾಭ್ಯಾಸದ ವಿವಿಧ ಹಂತಗಳಲ್ಲಿದ್ದ ಮಕ್ಕಳನ್ನು ಬೆಂಗಳೂರಲ್ಲೇ ಇರಿಸಿ, ನನ್ನ ಸಹಾಯಕ್ಕೆಂದು ಈ ಹಳ್ಳಿಗಾಡಿಗೆ ಬಂದುಬಿಟ್ಟರು ಅವರು. ಓದು ಕಲಿಯದ ಈ ಮಗನ ಭವಿಷ್ಯಕ್ಕೆ ವ್ಯವಸಾಯವೇ ದಾರಿಯಾಗಲಿ ಎಂಬ ಹಾರೈಕೆಯಿಂದ ನನ್ನ ಜೊತೆ ಉಳಿದುಬಿಟ್ಟರು. ಬೇರೆ ಮಕ್ಕಳದೇನೂ ಸಮಸ್ಯೆಯಿರದಿದ್ದರಿಂದ ಅಮನಿಗೆ ಅವರ ಬಗ್ಗೆ ದೊಡ್ಡ ಚಿಂತೆಯೂ ಇರಲಿಲ್ಲ. ಆದರೆ ಒಬ್ಬ ಶಿಲ್ಪಿಯಂತೆ ಈ ಗೋಟುಶಿಲೆಯನ್ನು ಕೆತ್ತ ಹೊರಟರಲ್ಲ, ಆ ಅಮನ ಕೆಲಸವನ್ನು ಇನ್ಯಾರು ಮಾಡಲು ಸಾಧ್ಯವಿತ್ತು? ಅತ್ತ ಪತಿಯ ಕಾರ್ಯವ್ಯಾಪ್ತಿ ಹೆಚ್ಚುತ್ತಲೂ, ಲೋಕೋಪಯೋಗಿ ಮತ್ತು ನೀರಾವರಿ ಸಚಿವರಂಥ ಉನ್ನತ ಸ್ಥಾನಮಾನಗಳು ದೊರೆಯುತ್ತಲೂ ಹೋದರೂ ಅಮನನ್ನ ಕೈ ಬಿಟ್ಟು ಸುಖಭೋಗಗಳನ್ನರಿಸಿ ಬೆಂಗಳೂರಿಗೆ ಓಡಿಬರಲಿಲ್ಲ. ಅವರಲ್ಲಿ ತಾವೊಬ್ಬ ಮಂತ್ರಿಯ ಪತ್ನಿ ಎಂಬ ಅಹಂಕಾರವೋ ಆಡಂಬರವೋ ಇರಲೇ ಇಲ್ಲ.
ನನಗೀಗಲೂ ಒಂದು ಸಂದರ್ಭ ನೆನಪಿದೆ. ನಮ ಜಮೀನಿಗೆ ಗೊರೂರು ನಾಲೆಯಿಂದ ನೀರು ಹರಿಸಿದ ಕಾಲ ಅದು. ಮೊದಲ ಬಾರಿಗೆ ಭತ್ತ ಬೆಳೆಯಲು ನಾನು ಸಿದ್ದತೆ ಮಾಡಿಕೊಂಡೆ. ಭತ್ತ ಬೆಳೆಯುವ ಉತ್ಸಾಹ ನನಗಿಂತಲೂ ಅಮನಲ್ಲಿ ಹೆಚ್ಚಾಗಿತ್ತು. ನಾಟಿಯ ದಿನವಂತೂ ಬೆಳಗಿನಿಂದಲೇ ಅವರ ಸಂಭ್ರಮ. ಆಳುಕಾಳುಗಳನ್ನು ಬಿಟ್ಟುಕೊಂಡು ನಾಟಿ ಮಾಡಿಸುತ್ತಿದ್ದ ಅಮ ಇದ್ದಕ್ಕಿದ್ದಂತೆ ಸೊಂಟಕ್ಕೆ ಸೆರಗು ಸಿಕ್ಕಿಸಿ ಗದ್ದೆಗಿಳಿದುಬಿಟ್ಟರು. ಆಳು ಮಂದಿಯ ಜೊತೆ ತಾವೂ ಬಗ್ಗಿನಾಟಿ ಮಾಡಿದರು. ಆ ದೃಶ್ಯವಂತೂ ಈವತ್ತಿಗೂ ನನ್ನ ಕಣ್ಣುಗಳಲ್ಲಿ ಮಸುಕಾಗದೇ ಉಳಿದಿದೆ. ಆಗಿನಂತೆಯೇ ಈಗಲೂ ನನ್ನ ಕಣ್ಣಾಲಿಗಳು ತುಂಬಿ ಬರುತ್ತವೆ. ಅಮ ತನ್ನ ಅಮೃತಹಸ್ತದಿಂದ ನಾಟಿ ಮಾಡಿದ ನನ್ನ ಜಮೀನು ಸಮೃದ್ಧಿಯಾಗಿದೆ ಎನ್ನುವುದೇ ನನ್ನ ಭಾಗ್ಯ.
ಆ ತಾಯಿಯ ಹಾರೈಕೆ, ಆಶೀರ್ವಾದ, ಅವರು ನನ್ನಲ್ಲಿ ತುಂಬಿದ ಆತವಿಶ್ವಾಸ; ನನ್ನ ಲೋಪವನ್ನು ಮುಚ್ಚಿ ಹತ್ತು ಜನರಂತೆ ಬಾಳಲು ತೋರಿಸಿದ ಮಾರ್ಗದರ್ಶನ ಅವರ ಪ್ರೀತಿ ವಾತ್ಸಲ್ಯ ಮಮತೆಗಳ ಪೂರೈಕೆ ಇರದೇ ಹೋಗಿದ್ದರೆ ನಾನು ಈಗಿರುವಂತೆ ಇರುತ್ತಿದ್ದೆನೇ ಎಂದು ಯೋಚಿಸುತ್ತೇನೆ. ಆದ್ದರಿಂದಲೇ, ನನ್ನ ತಾಯಿ ಕೇವಲ ಒಂದು ಹೆಣ್ಣಿನಂತೆ ನನಗೆ ಬರೀ ಜನ ಕೊಟ್ಟಾಕೆಯಲ್ಲ. ದೇವರಂತೆ ನನ್ನ ಇಡೀ ಬದುಕನ್ನು ನಿರ್ಮಿಸಿದಾಕೆ, ದೈವಾನುಗ್ರಹದ ನಂಬಿಕೆಯ ನಂತರ ನಾನು ತಲೆ ಬಾಗುವುದು ನನ್ನ ಮಾತೃದೇವತೆಯ ಅನುಗ್ರಹ, ಅಗ್ರಹಕ್ಕೆ ಮಾತ್ರ, ನನ್ನ ತಂದೆಯವರ ಸ್ಥಾನವೂ ಅನಂತರದ್ದೇ.
ನಮಲ್ಲಿ ಭಕ್ತಿಯ ನಿವೇದನೆಯನ್ನು ತುಂಬಿದ ನನ್ನ ತಾಯಿ ಸ್ವತಃ ಮಹಾನ್ ದೈವಭಕ್ತ ಅವರು ತನಯತೆಯಿಂದ ಮಾಡುವ ನಿತ್ಯಪೂಜೆ ಸತ್ಯತಪಸ್ಸಿನಂತೆ ಗೋಚರವಾಗುತ್ತದೆ. ಹಬ್ಬ ಹುಣ್ಣಿಮೆಗಳಲ್ಲಂತೂ ಅವರ ಭಾವಪರವಶತೆ ಅನನ್ಯ. ನನ್ನ ಕಣ್ಣಿಗಂತೂ ಅವರು ಭಕ್ತಿರಸ ಸೂಸುವ ದೇವತೆಯಂತೆಯೇ ಕಾಣುತ್ತಾರೆ. ಆದ್ದರಿಂದಲೇ ನನ್ನ ದಿನನಿತ್ಯದ ಮೊದಲ ಪೂಜೆ ದೇವರಿಗೆ ಸಂದರೆ, ಎರಡನೆಯ ಮನಃಪೂಜೆ ದೈವಸಮಾನರಾದ ಅಮನಿಗೆ ಸಲ್ಲುತ್ತದೆ.
