ನವದೆಹಲಿ,ಜು.19- ಸಂಸತ್ ಮಳೆಗಾಲದ ಅಧಿವೇಶನಕ್ಕೂ ಮುನ್ನ ಕೇಂದ್ರ ಸರ್ಕಾರ ಕರೆದಿದ್ದ ಸಾಂಪ್ರದಾಯಿಕ ಸರ್ವಪಕ್ಷ ಸಭೆಯು, ಕೇವಲ ಸೌಹಾರ್ದಯುತ ಚರ್ಚೆಯ ವೇದಿಕೆಯಾಗುಳಿಯದೆ ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಬಂಡಾಯ ಸಂಸದರನ್ನು ಒಳಗೊಂಡ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಆಫ್ ಪ್ರೋಗ್ರೆಸ್ಸಿವ್ ಇಂಡಿಯಾ ಎಂಬ ಹೊಸ ಬಣಕ್ಕೆ ಸರ್ಕಾರ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಿದ್ದು ಮತ್ತು ಇದಕ್ಕೆ ಪ್ರತಿಭಟನೆಯಾಗಿ ಇಂಡಿಯಾ ಒಕ್ಕೂಟದ ಸಂಸದರು ಸಭಾತ್ಯಾಗ ಮಾಡಿದ್ದು ಪ್ರಸ್ತುತ ರಾಜಕೀಯದ ಜಿದ್ದಾಜಿದ್ದಿಗೆ ಕನ್ನಡಿ ಹಿಡಿದಿದೆ.
ಇಡೀ ಹೈಡ್ರಾಮಾದ ಕೇಂದ್ರಬಿಂದು ಬಂಡಾಯ ಸಂಸದರ ಸಾಂವಿಧಾನಿಕ ಅರ್ಹತೆ ಮತ್ತು ಅವರಿಗೆ ದೊರೆತಿರುವ ಸರ್ಕಾರದ ಆತಿಥ್ಯ. ಲೋಕಸಭೆಯ ಸ್ಪೀಕರ್ ಓಂಬಿರ್ಲಾ ಅವರು ಈ 20 ಬಂಡಾಯ ಸಂಸದರನ್ನು ಇನ್ನೂ ಅಧಿಕೃತವಾಗಿ ಪ್ರತ್ಯೇಕ ಸಂಸದೀಯ ಪಕ್ಷವೆಂದು ಗುರುತಿಸಿಲ್ಲ.
ಸ್ಪೀಕರ್ ತೀರ್ಮಾನಕ್ಕೂ ಮುನ್ನವೇ ಸಂಸದೀಯ ವ್ಯವಹಾರಗಳ ಸಚಿವಾಲಯ ಇವರನ್ನು ಅಧಿಕೃತ ಸಭೆಗೆ ಆಹ್ವಾನಿಸಿರುವುದು ಸಾಂವಿಧಾನಿಕ ಪ್ರಕ್ರಿಯೆಯನ್ನು ಬದಿಗೆ ಸರಿಸಿದಂತಾಗಿದೆ ಎಂಬುದು ವಿರೋಧ ಪಕ್ಷಗಳ ಆಕ್ಷೇಪ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಎತ್ತಿ ತೋರಿಸಿರುವಂತೆ, 91ನೇ ಸಾಂವಿಧಾನಿಕ ತಿದ್ದುಪಡಿಯ ನಂತರ ಮೂಲ ಪಕ್ಷದಿಂದ ಕೇವಲ ಒಂದು ಬಣ ಪ್ರತ್ಯೇಕವಾಗಿ ಹೊರಹೋಗಲು ಕಾನೂನಿನಲ್ಲಿ ಅವಕಾಶವಿಲ್ಲ. ಬದಲಿಗೆ ಮತ್ತೊಂದು ಪಕ್ಷದೊಂದಿಗೆ ವಿಲೀನವಾಗಬೇಕು. ಈ 20 ಸಂಸದರ ವಿರುದ್ಧದ ಅನರ್ಹತೆ ಅರ್ಜಿಗಳು ಇನ್ನೂ ಬಾಕಿ ಇರುವಾಗ ಅವರಿಗೆ ಅಧಿಕೃತ ಮನ್ನಣೆ ನೀಡುವುದು ಕಾನೂನುಬಾಹಿರ ಎಂಬ ವಾದ ಬಲವಾಗಿದೆ.
ಈ ಘಟನೆಯು ಇಂಡಿಯಾ ಒಕ್ಕೂಟದ ಆಂತರಿಕ ಒಗ್ಗಟ್ಟನ್ನು ಪ್ರದರ್ಶಿಸಲು ಒಂದು ಪ್ರಮುಖ ವೇದಿಕೆಯಾಯಿತು.ಸಭೆಯಿಂದ ಸಂಪೂರ್ಣವಾಗಿ ದೂರ ಉಳಿಯುವ ಬದಲಾಗಿ, ವಿರೋಧ ಪಕ್ಷಗಳು ಸ್ವಲ್ಪ ಸಮಯದ ನಂತರ ಸಭೆಗೆ ಮರಳಿದವು. ಇದು ಸಂವಿಧಾನದ ರಕ್ಷಣೆಗಾಗಿ ತಮ
ಸಾಂಕೇತಿಕ ಪ್ರತಿಭಟನೆಯನ್ನು ದಾಖಲಿಸುವ ಜೊತೆಗೆ, ಮಳೆಗಾಲದ ಅಧಿವೇಶನದ ಕಾರ್ಯಸೂಚಿಯ
ಚರ್ಚೆಯಲ್ಲಿ ತಾವೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ಜವಾಬ್ದಾರಿಯುತ ವಿರೋಧ ಪಕ್ಷದ ತಂತ್ರಗಾರಿಕೆಯನ್ನು ಪ್ರದರ್ಶಿಸಿತು.ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ, ಆಮ್ ಆದಿ ಪಕ್ಷ, ಮತ್ತು ಶಿವಸೇನೆ (ಯುಬಿಟಿ) ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಹೊರನಡೆದಿದ್ದು, ಮುಂಬರುವ ಅಧಿವೇಶನದಲ್ಲಿ ಸರ್ಕಾರವನ್ನು ಜಂಟಿಯಾಗಿ ಎದುರಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ ಎಂಬುದರ ಸ್ಪಷ್ಟ ಸಂಕೇತವಾಗಿದೆ.
