Tuesday, April 14, 2026
Homeರಾಜ್ಯ2025ನೇ ಸಾಲಿನ ಅಭಿಮಾನಿ ಹಾಗೂ ಅರಗಿಣಿ ದತ್ತಿ ಪ್ರಶಸ್ತಿ ಪ್ರದಾನ

2025ನೇ ಸಾಲಿನ ಅಭಿಮಾನಿ ಹಾಗೂ ಅರಗಿಣಿ ದತ್ತಿ ಪ್ರಶಸ್ತಿ ಪ್ರದಾನ

2025 Abhimaani and Aragini Charitable Award presented

ಬೆಂಗಳೂರು, ಮಾ.14-ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಸ್ಥಾಪಿಸಿರುವ ಅಭಿಮಾನಿ ದತ್ತಿ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯ ಹುಣಸೂರು ವರದಿಗಾರ ಶಿವಕುಮಾರ್‌ ವಿ.ರಾವ್‌ ಅವರಿಗೆ ಹಾಗೂ ಅರಗಿಣಿ ದತ್ತಿ ಪ್ರಶಸ್ತಿಯನ್ನು ಹಿರಿಯ ಸಿನಿಮಾ ಪತ್ರಕರ್ತ ಚೇತನ್‌ ನಾಡಿಗೇರ ಅವರಿಗೆ ಪ್ರದಾನ ಮಾಡಲಾಯಿತು.

ಕರ್ನಾಟಕ ಮಾಧ್ಯಮ ಅಕಾಡೆಮಿ ನಿನ್ನೆ ಸಂಜೆ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ವಿವಿಧ ದತ್ತಿ ಪ್ರಶಸ್ತಿಗಳು, ಸರಿತಾ ರೈ ಅವರಿಗೆ ವಿಶೇಷ ಪ್ರಶಸ್ತಿ ಹಾಗೂ ಸಾಧಕ ಪತ್ರಕರ್ತರಿಗೆ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗಣ್ಯರು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ನಡುವೆಯೂ ಪತ್ರಿಕೆಗಳು ಇನ್ನೂ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ. ನಾನು ನಿತ್ಯ ದಿನಪತ್ರಿಕೆಗಳನ್ನು ಓದಿದ ಬಳಿಕವೇ ಇತರ ಕಾರ್ಯಗಳಿಗೆ ಮುಂದಾಗುತ್ತೇನೆ. ನಾನು ಸುದ್ದಿ ವಾಹಿನಿಗಳನ್ನು ನೋಡುವುದು ಕಡಿಮೆ ಎಂದರು.

ಈಗ ಊಹಾ ಪತ್ರಿಕೋದ್ಯಮದ ಹಾವಳಿ ಹೆಚ್ಚುತ್ತಿದೆ. ಸತ್ಯ ಬರೆಯುವ ಮತ್ತು ಸಂಶೋಧನೆ ನಡೆಸಿ ಬರೆಯುವ ಪತ್ರಕರ್ತರ ಸಂಖ್ಯೆ ಸುಳ್ಳು ಬರೆಯುವ ಪತ್ರಕರ್ತರ ಸಂಖ್ಯೆಗಿಂತ ಹೆಚ್ಚಾಗಬೇಕು ಎಂದು ಅವರು ಸಲಹೆ ಮಾಡಿದರು.

ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯರ ಪರವಾಗಿ ಇದೆಯೇ ಎನ್ನುವ ಬಗ್ಗೆ ಗಮನ ಹರಿಸಿ, ವೃತ್ತಿಧರ್ಮವನ್ನು ಬಹಳ ಮುಖ್ಯವಾಗಿ ಕಾಪಾಡಿಕೊಳ್ಳಬೇಕು.

ಪತ್ರಕರ್ತರೂ ಆಗಿದ್ದ ಮಹಾತಗಾಂಧಿಯವರ ಮಾತಿನಂತೆ ಸರ್ವೋದಯ, ಅಂತ್ಯೋದಯದ ಪರವಾಗಿ ಪತ್ರಕರ್ತರು ಇರಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇನ್ನೂ ಅಸಮಾನತೆ ಕಾಣುತ್ತಿದ್ದೇವೆ. ಅಂಬೇಡ್ಕರ್‌ ಅವರೂ ಪತ್ರಕರ್ತರಾಗಿದ್ದರು. ಅಸಮಾನತೆ ನಿವಾರಣೆಯಾಗದೆ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎನ್ನುವ ಮಾತನ್ನು ಅಂಬೇಡ್ಕರ್‌ ಹೇಳಿದ್ದನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದರು.

ಒಂದು ಗುಂಪು ಅಥವಾ ಒಂದು ಸಿದ್ಧಾಂತಕ್ಕೆ ಮಾರು ಹೋಗದೆ ವಾಸ್ತವಾಂಶಕ್ಕೆ ಕನ್ನಡಿ ಹಿಡಿಯಬೇಕು. ಹೊಸ ತಂತ್ರಜ್ಞಾನದ ಜೊತೆಗೆ ಹೊಸ ಸವಾಲುಗಳಿಗೆ ತಮನ್ನು ತಾವು ಸಜ್ಜುಗೊಳಿಸಿಕೊಂಡು ಹದಗೊಳ್ಳಬೇಕು ಎಂದರು.

ಶಾಸಕ ರಿಜ್ವಾನ್‌ ಅರ್ಷದ್‌ ಮಾತನಾಡಿ, ಮಾನವ ಹಕ್ಕುಗಳು, ಜನಪರ ಆಡಳಿತ ಹಾಗೂ ಪ್ರಜಾಪ್ರಭುತ್ವದ ಉಳಿವಿನಲ್ಲಿ ಮಾಧ್ಯಮಗಳ ಪಾತ್ರ ಹೆಚ್ಚಿದೆ. ಡಿಜಿಟಲ್‌ ಮಾಧ್ಯಮದ ಸವಾಲಿನಲ್ಲಿ ಪತ್ರಿಕೆಗಳನ್ನು ಮುನ್ನಡೆಸಬೇಕಾದ ಕಷ್ಟದ ಪರಿಸ್ಥಿತಿ ಇದೆ ಎಂದು ಹೇಳಿದರು.

ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಮಾತನಾಡಿ, ಮುಂದಿನ ವರ್ಷ ಪ್ರಶಸ್ತಿಗಳ ಸಂಖ್ಯೆಯನ್ನು 31ರಿಂದ 35ಕ್ಕೆ ಹೆಚ್ಚಿಸಲಾಗುವುದು. ಇನ್ಫೋಸಿಸ್‌‍ ಸಹಯೋಗದೊಂದಿಗೆ ಪತ್ರಕರ್ತರಿಗೆ ತರಬೇತಿ ನೀಡಲಾಗುತ್ತಿದೆ. ಮಹಿಳಾ ಪತ್ರಕರ್ತರಿಗೆ ವಿಶೇಷ ತರಬೇತಿ ನೀಡಲಾಗುವುದು ಎಂದರು.

ಹಿರಿಯ ಸಾಹಿತಿ ಹಂಪನಾಗರಾಜಯ್ಯ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಬಿ.ಬಿ.ಕಾವೇರಿ, ಆಯುಕ್ತ ಹೇಮಂತ್‌ ನಿಂಬಾಳ್ಕರ್‌, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ, ಆಂದೋಲನ ಪತ್ರಿಕೆಯ ಸಂಪಾದಕ ರವಿಕೋಟಿ, ಈ ಸಂಜೆ ಪತ್ರಿಕೆಯ ಮುಖ್ಯವರದಿಗಾರ ಬಿ.ಎಸ್‌‍.ರಾಮಚಂದ್ರ, ಪ್ರಧಾನ ವರದಿಗಾರ ವಿ.ರಾಮಸ್ವಾಮಿ ಕಣ್ವ, ಮಾಧ್ಯಮ ಅಕಾಡೆಮಿಯ ಸದಸ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

RELATED ARTICLES

Latest News