ಬೆಂಗಳೂರು, ನ.20- ನಗರದ ಸೌಂದರ್ಯ ಕಾಪಾಡುವ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಮತ್ತು ಶಿಸ್ತು ಕಾಪಾಡುವ ಉದ್ದೇಶದಿಂದ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಾರ್ಡ್ ಒನ್ ಅಭಿಯಾನದಡಿ ಇದುವರೆಗೆ 273 ಅನಧಿಕೃತ ಫ್ಲೆಕ್್ಸ ಮತ್ತು ಬ್ಯಾನರ್ಗಳನ್ನು ತೆರವುಗೊಳಿಸಲಾಗಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರ ಆದೇಶದಂತೆ ಕೇಂದ್ರ ನಗರ ಪಾಲಿಕೆಯ ಆರು ವಿಭಾಗಗಳಲ್ಲಿ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಅನಧಿಕೃತ ಫ್ಲೆಕ್ಸ್ -ಬ್ಯಾನರ್ಗಳನ್ನು ತೆರವುಗೊಳಿಸುವ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ಜಗದೀಶ್ ಜಿ. ತಿಳಿಸಿದ್ದಾರೆ.
ಚಿಕ್ಕಪೇಟೆಯಲ್ಲಿ ಅತಿ ಹೆಚ್ಚು ತೆರವು:
ಕೇಂದ್ರ ನಗರ ಪಾಲಿಕೆಯ ಆರು ವಿಭಾಗಗಳಲ್ಲಿ ಕೈಗೊಂಡ ಕಾರ್ಯಾಚರಣೆಯಲ್ಲಿ ಚಿಕ್ಕಪೇಟೆ ವಿಭಾಗದಲ್ಲಿ ಅತಿ ಹೆಚ್ಚು 82 ಫ್ಲೆಕ್ಸ್ ಹಾಗೂ ಬ್ಯಾನರ್ಗಳನ್ನು ತೆರವುಗೊಳಿಸಲಾಗಿದೆ. ಉಳಿದಂತೆ ಸರ್.ಸಿ.ವಿ.ರಾಮನ್ ನಗರ ವಿಭಾಗದಲ್ಲಿ 62, ಗಾಂಧಿನಗರ ವಿಭಾಗದಲ್ಲಿ 60, ಚಾಮರಾಜಪೇಟೆ ವಿಭಾಗದಲ್ಲಿ 50, ಶಾಂತಿನಗರ ವಿಭಾಗದಲ್ಲಿ 17 ಹಾಗೂ ಶಿವಾಜಿನಗರ ವಿಭಾಗದಲ್ಲಿ ಎರಡು ಫ್ಲೆಕ್್ಸ ಮತ್ತು ಬ್ಯಾನರ್ಗಳನ್ನು ತೆರವುಗೊಳಿಸಲಾಗಿದೆ.
ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ವಿದ್ಯುತ್ ಕಂಬಗಳು ಹಾಗೂ ಜಂಕ್ಷನ್ಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ಅಳವಡಿಸುವುದರಿಂದ ಸಂಚಾರಕ್ಕೆ ಅಡಚಣೆಯಾಗುವುದರ ಜತೆಗೆ ನಗರದ ಸೌಂದರ್ಯಕ್ಕೂ ಧಕ್ಕೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಅಕ್ರಮಗಳನ್ನು ತಡೆಗಟ್ಟಲು ಪಾಲಿಕೆ ನಿರಂತರ ಪರಿಶೀಲನೆ ನಡೆಸಲಿದೆ.
