Homeರಾಜ್ಯಅಂತರಾಷ್ಟ್ರೀಯ ಮಟ್ಟಕ್ಕೆ ಖಾದಿ ಕೊಂಡೊಯ್ಯಲು ರಾಯಭಾರಿಗಳ ನೇಮಕ : ಸಚಿವ ಕಾಶಪ್ಪನವರ

ಅಂತರಾಷ್ಟ್ರೀಯ ಮಟ್ಟಕ್ಕೆ ಖಾದಿ ಕೊಂಡೊಯ್ಯಲು ರಾಯಭಾರಿಗಳ ನೇಮಕ : ಸಚಿವ ಕಾಶಪ್ಪನವರ

ಬೆಂಗಳೂರು,ನ.7- ಕರ್ನಾಟಕದ ಖಾದಿ ಉತ್ಪನ್ನಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿ, ಜಾಗತಿಕ ಮಾರುಕಟ್ಟೆಯಲ್ಲಿ ಖಾದಿಗೆ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಯೋಜನೆ ರೂಪಿಸಬೇಕು. ಖಾದಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ದೇಶಗಳಲ್ಲಿ ರಾಯಭಾರಿಗಳ ರೀತಿಯಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳನ್ನು ಗುರುತಿಸಿ ನೇಮಿಸಿಕೊಳ್ಳಬೇಕು ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಎಸ್‌‍. ಕಾಶಪ್ಪನವರ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರಿನ ಖಾದಿ ಭವನದಲ್ಲಿ ನಡೆದ ಖಾದಿ, ಉಣ್ಣೆ ಮತ್ತು ರೇಷೆ ಸಂಘ-ಸಂಸ್ಥೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಖಾದಿ ಕೇವಲ ಸಾಂಪ್ರದಾಯಿಕ ಉಡುಪು ಮಾತ್ರವಲ್ಲ. ಕರ್ನಾಟಕದ ಗ್ರಾಮೀಣ ಪ್ರದೇಶಗಳ ಸಾವಿರಾರು ಕಸುಬುದಾರರ ಜೀವನಾಧಾರವಾಗಿರುವ ಈ ಉದ್ಯಮಕ್ಕೆ ಆಧುನಿಕ ಮಾರುಕಟ್ಟೆ ಮತ್ತು ಜಾಗತಿಕ ಬ್ರ್ಯಾಂಡಿಂಗ್‌ ಅಗತ್ಯವಿದೆ ಎಂದರು.

ಖಾದಿಯನ್ನು ಅಂತರಾಷ್ಟ್ರೀಯ ಬ್ರ್ಯಾಂಡ್‌ ಆಗಿ ರೂಪಿಸುವ ಉದ್ದೇಶದಿಂದ, ವಿದೇಶಗಳಲ್ಲಿ ಖಾದಿಯ ಪ್ರಚಾರಕ್ಕೆ ನೆರವಾಗುವಂತಹ ರಾಯಭಾರಿಗಳನ್ನು ನೇಮಿಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಿದೇಶಿ ಮಾರುಕಟ್ಟೆಯಲ್ಲಿ ಕರ್ನಾಟಕದ ಖಾದಿ, ರೇಷೆ ಮತ್ತು ಉಣ್ಣೆ ಉತ್ಪನ್ನಗಳಿಗೆ ಅವಕಾಶ ಕಲ್ಪಿಸಲು ರಫ್ತು, ಆನ್‌ಲೈನ್‌ ಮಾರಾಟ, ಬ್ರ್ಯಾಂಡಿಂಗ್‌ ಮತ್ತು ಆಧುನಿಕ ಮಾರುಕಟ್ಟೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

100 ಕೋಟಿ ಪ್ರಸ್ತಾವನೆ ಸಿದ್ಧಪಡಿಸಲು ಸೂಚನೆ
ಖಾದಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ಹೆಚ್ಚಿಸುವ ಉದ್ದೇಶದಿಂದ 2027-28ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ 100 ಕೋಟಿ ಮೊತ್ತದ ವಿಶೇಷ ಪ್ರಸ್ತಾವನೆ ಸಿದ್ಧಪಡಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಅನುದಾನವನ್ನು ಖಾದಿ ಉತ್ಪಾದನಾ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿ, ಆಧುನಿಕ ಯಂತ್ರೋಪಕರಣಗಳ ಅಳವಡಿಕೆ, ಸಾಮಾನ್ಯ ಸೇವಾ ಕೇಂದ್ರಗಳ ಸ್ಥಾಪನೆ, ಮಾರುಕಟ್ಟೆ ವಿಸ್ತರಣೆ, ಬ್ರ್ಯಾಂಡಿಂಗ್‌, ಡಿಜಿಟಲ್‌ ಹಾಗೂ ಆನ್‌ಲೈನ್‌ ಮಾರುಕಟ್ಟೆ ವ್ಯವಸ್ಥೆ, ಕಸುಬುದಾರರ ಕಲ್ಯಾಣ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸುವಂತೆ ಸಮಗ್ರ ಯೋಜನೆ ರೂಪಿಸಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಹಾಗೂ ಮಸ್ಕಿ ಶಾಸಕ ಬಸನಗೌಡ ತುರುವಿಹಾಳ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಟೇಶ್‌ ಸೇರಿದಂತೆ ಖಾದಿ, ಉಣ್ಣೆ ಮತ್ತು ರೇಷೆ ಕ್ಷೇತ್ರದ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News