ಬೆಂಗಳೂರು,ಸೆ.26- ತೀವ್ರ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಲಾ 2,500 ರೂ. ಪರಿಹಾರ ಧನ ಘೋಷಿಸಿರುವ ರಾಜ್ಯ ಸರ್ಕಾರವನ್ನು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ರೈತರಿಗೆ 2500 ರೂ. ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಇವರ ಯೋಗ್ಯತೆಗಿಷ್ಟು. ಹಿಂದಿನ ಮುಖ್ಯಮಂತ್ರಿ ಕಚೇರಿಯಲ್ಲಿ ಕಾಫಿ-ಟೀ ಕುಡಿಯಲು 200 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.
ರೈತರೇನು ಭಿಕ್ಷುಕರೇ? 2500 ನೀಡಲು ಮಾನಮರ್ಯಾದೆ ಇದೆಯೇ? ರೈತರನ್ನು ಈ ಮಟ್ಟಕ್ಕೆ ಇಳಿಸಿದ್ದೀರಲ್ಲಾ? ರೈತನ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಯಾವ ರೈತನ ಕೆಲಸ ಮಾಡಿದ್ದಾರೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೆಆರ್‌ಐಡಿಎಲ್‌ನ ಎಇಇ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇಂತಹ ಘಟನೆ ಒಂದಲ್ಲ ಪ್ರತಿದಿನ ಪ್ರಾರಂಭವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು. ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಮೂರು ದಿನ ಎಲ್ಲಿ ನಾಪತ್ತೆಯಾಗಿದ್ದರು? ಯಾರು ಎಲ್ಲಿಗೆ ಕರೆದುಕೊಂಡು ಹೋಗಿದ್ದರು? ನಂತರ ಅವರನ್ನು ರೆಸಾರ್ಟ್‌ನಲ್ಲಿ ಇಟ್ಟಿದ್ದವರು ಯಾರು? ಎಂಬ ಪ್ರಶ್ನೆಗಳಿಗೆ ಗೃಹಸಚಿವ ಪ್ರಿಯಾಂಕ ಖರ್ಗೆ ಅವರು ಉತ್ತರ ಕೊಟ್ಟಿದ್ದಾರೆಯೇ? ಅಥವಾ ಸರ್ಕಾರ ಉತ್ತರ ಕೊಟ್ಟಿದೆಯೇ? ಎಂದು ಅವರು ಪ್ರಶ್ನಿಸಿದರು.
ಸಿಐಡಿ ತನಿಖೆಯಲ್ಲಿ ಕೆಪಿಎಸ್‌ಸಿ ಅಕ್ರಮ ನೇಮಕಾತಿ ಆರೋಪದ ವಿಚಾರವನ್ನು ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಹೈಕೋರ್ಟ್ ಎಸ್‌ಐಟಿ ರಚನೆಗೆ ಸೂಚಿಸಿದೆ. ಸಿಐಡಿಯಿಂದ ಪಾರದರ್ಶಕ ತನಿಖೆಯಾಗಿದ್ದರೆ ಸರ್ಕಾರಕ್ಕೆ ಏಕೆ ಭಯ? ಹೈಕೋರ್ಟ್ ಸೂಚಿಸಿರುವ ಎಸ್‌ಐಟಿ ಬೇಡ ಎಂದು ಏಕೆ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದ್ದೀರಿ? ಎಂದು ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.
