ಬೆಂಗಳೂರು, ಸೆ.26- ದಕ್ಷಿಣ ಜಿಲ್ಲೆ ಬಿಡದಿಯಲ್ಲಿ ಪ್ರಸ್ತಾವಿತ ಗ್ರೇಟರ್ ಬೆಂಗಳೂರು ಇನ್ನೋವೇಶನ್ ಟೌನ್‌ಶಿಪ್ ಅಥವಾ ಬಿಡದಿ ಸಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಸ್ಥಳೀಯ ರೈತರ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ ಏಕೈಕ ಜೀವನಾಧಾರವಾಗಿರುವ ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಪಟ್ಟುಹಿಡಿದಿರುವ ಬಿಡದಿ ಹೋರಾಟ ನಿರತ ರೈತರು, ಇದೀಗ ತಮ ಹೋರಾಟವನ್ನು ದೇಶದ ಅತ್ಯುನ್ನತ ಅಂಗಳಕ್ಕೆ ಕೊಂಡೊಯ್ದಿದ್ದಾರೆ.
ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿಯದ ಹಿನ್ನೆಲೆಯಲ್ಲಿ, ತಮಗೆ ಗೌರವಯುತವಾಗಿ ಸಾವನ್ನಪ್ಪಲು ದಯಾಮರಣ ನೀಡುವಂತೆ ಕೋರಿ ರೈತರು ಭಾರತದ ರಾಷ್ಟ್ರಪತಿಗಳು ಹಾಗೂ ಕರ್ನಾಟಕದ ರಾಜ್ಯಪಾಲರಿಗೆ ಸಾಮೂಹಿಕ ಮನವಿ ಪತ್ರ ಸಲ್ಲಿಸಿದ್ದಾರೆ.
ದಯಾಮರಣ ಮನವಿ ಪತ್ರದಲ್ಲೇನಿದೆ?
ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರೈತರು, ಸಹಿ ಸಂಗ್ರಹಿಸಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಕಳುಹಿಸಿರುವ ಪತ್ರದಲ್ಲಿ ತಮ ಅಳಲನ್ನು ತೋಡಿಕೊಂಡಿದ್ದಾರೆ.ಬಿಡದಿ ಹೊಬ್ಳಿಯ ರೈತರು ತಲತಲಾಂತರಗಳಿಂದ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಬಹುಬೆಳೆ ಬೆಳೆಯುವ ಫಲವತ್ತಾದ ಹಾಗೂ ನೀರಾವರಿ ಜಮೀನುಗಳು ನಮ ಕುಟುಂಬದ ಜೀವನೋಪಾಯ, ಮಕ್ಕಳ ವಿದ್ಯಾಭ್ಯಾಸ ಮತ್ತು ಜಾನುವಾರುಗಳ ಪೋಷಣೆಗೆ ಏಕೈಕ ಆಧಾರವಾಗಿದೆ.
ಆಭಿವೃದ್ಧಿ ಹಾಗೂ ತಂತ್ರಜ್ಞಾನದ ಹೆಸರಿನಲ್ಲಿ ಬಲವಂತವಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ರೈತರಿಗೆ ಬರೆದ ಮರಣಶಾಸನವಾಗಿದೆ. ಕೃಷಿ ಭೂಮಿ ಕಸಿದುಕೊಳ್ಳುವುದು ಸಂವಿಧಾನದ 21ನೇ ವಿಧಿಯು ನೀಡುವ ೞಬದುಕುವ ಹಕ್ಕಿನೞ ನೇರ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನಮ ಕಣ್ಣೆದುರೇ ಭೂಮಿ ಕಳೆದುಕೊಂಡು, ನಿರುದ್ಯೋಗಿಗಳಾಗಿ ಅನ್ನ-ಆಹಾರವಿಲ್ಲದೆ ಬೀದಿಯಲ್ಲಿ ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಲ್ಪಡುವುದಕ್ಕಿಂತ, ಸರ್ಕಾರದ ಸಮುಖದಲ್ಲೇ ಗೌರವಯುತವಾಗಿ ಪ್ರಾಣತ್ಯಾಗ ಮಾಡುವುದು ಲೇಸು ಎಂದು ರೈತರು ಕಣ್ಣೀರಿನ ಮೌಖಿಕ ಅರ್ಜಿಯಲ್ಲಿ ತಿಳಿಸಿದ್ದಾರೆ.
ರೈತರ ಪ್ರಮುಖ 4 ಹಕ್ಕೊತ್ತಾಯಗಳು
ಭೂಸ್ವಾಧೀನ ಅಧಿಸೂಚನೆ ರದ್ದು:
ಬಿಡದಿ ಸಾರ್ಟ್ ಸಿಟಿ ಯೋಜನೆಗಾಗಿ ಹೊರಡಿಸಲಾದ ಎಲ್ಲಾ ಪ್ರಾಥಮಿಕ ಹಾಗೂ ಅಂತಿಮ ಭೂಸ್ವಾಧೀನ ಅಧಿಸೂಚನೆಗಳನ್ನು ತಕ್ಷಣವೇ ಷರತ್ತೂ ರಹಿತವಾಗಿ ರದ್ದುಗೊಳಿಸಬೇಕು.
ರೈತರ ಒಪ್ಪಿಗೆ ಕಡ್ಡಾಯ:
ರೈತರ ಸಮತಿಯಿಲ್ಲದೆ ಯಾವುದೇ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರದು ಮತ್ತು ಜಮೀನುಗಳನ್ನು ಶಾಶ್ವತವಾಗಿ ಕೃಷಿಗಾಗಿಯೇ ಕಾಯ್ದಿರಿಸಬೇಕು.
ಬಂಜರು ಭೂಮಿ ಬಳಕೆ:
ಅಭಿವೃದ್ಧಿ ಯೋಜನೆಗಳಿಗೆ ಫಲವತ್ತಾದ ಕೃಷಿ ಭೂಮಿಯ ಬದಲಿಗೆ ಕೃಷಿಯೋಗ್ಯವಲ್ಲದ ಅಥವಾ ಬಂಜರು ಸರ್ಕಾರಿ ಭೂಮಿಯನ್ನು ಬಳಸಿಕೊಳ್ಳಬೇಕು.
ದಯಾಮರಣಕ್ಕೆ ಅನುಮತಿ:
ಸರ್ಕಾರವು ಈ ನ್ಯಾಯಯುತ ಬೇಡಿಕೆಗಳನ್ನು ಪುರಸ್ಕರಿಸದೆ ಬಲವಂತದ ಭೂಸ್ವಾಧೀನ ಮುಂದುವರಿಸಿದರೆ, ಸಂತ್ರಸ್ತ ರೈತರೆಲ್ಲರಿಗೂ ಸಾಮೂಹಿಕವಾಗಿ ದಯಾಮರಣ ಹೊಂದಲು ಅಧಿಕೃತ ಅನುಮತಿ ನೀಡಬೇಕು.
ಬಿಡದಿಯಲ್ಲಿ ಬೃಹತ್ ಟೌನ್‌ಶಿಪ್ ನಿರ್ಮಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಮುಂದಾಗಿದ್ದು, ಯೋಜನೆ ಜಾರಿಗೆ ಪಟ್ಟು ಹಿಡಿದಿದೆ. ಆದರೆ, ಪ್ರತಿಪಕ್ಷ ಜೆಡಿಎಸ್ ಹಾಗೂ ಸ್ಥಳೀಯ ರೈತ ಹಿತರಕ್ಷಣಾ ಸಮಿತಿಗಳು ಕೃಷಿ ಭೂಮಿ ಸ್ವಾಧೀನವನ್ನು ತೀವ್ರವಾಗಿ ವಿರೋಧಿಸಿ ನಿರಂತರ ಧರಣಿ, ಸತ್ಯಾಗ್ರಹಗಳನ್ನು ನಡೆಸುತ್ತಾ ಬಂದಿವೆ.
ರೈತರ ಸರಣಿ ಪ್ರತಿಭಟನೆಗಳು ಹಾಗೂ ರಾಜಕೀಯ ಒತ್ತಡಗಳ ನಡುವೆಯೂ ಸರ್ಕಾರದ ನಿಲುವು ಬದಲಾಗದ ಕಾರಣ, ಇದೀಗ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ರೈತರು ಅಂತಿಮ ಅಸ್ತ್ರವಾಗಿ ರಾಷ್ಟ್ರಪತಿಗಳ ಅಂಗಳಕ್ಕೆ ದಯಾಮರಣದ ಮನವಿ ಸಲ್ಲಿಸುವ ಮೂಲಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಮುಂದಿನ ಹಂತದತ್ತ ಕುತೂಹಲ
ರೈತರ ಮನವಿಯಲ್ಲಿ ಭೂಸ್ವಾಧೀನ ಅಧಿಸೂಚನೆಗಳನ್ನು ರದ್ದುಪಡಿಸುವುದು, ರೈತರ ಒಪ್ಪಿಗೆಯಿಲ್ಲದೆ ಭೂಮಿ ಪಡೆಯದಿರುವುದು ಮತ್ತು ಕೃಷಿಯೋಗ್ಯವಲ್ಲದ ಸರ್ಕಾರಿ ಭೂಮಿಯನ್ನು ಅಭಿವೃದ್ಧಿ ಯೋಜನೆಗಳಿಗೆ ಬಳಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಡಲಾಗಿದೆ.
ಹೀಗಾಗಿ ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಈಗ ಎರಡು ಪ್ರಮುಖ ಪ್ರಶ್ನೆಗಳು ಎದುರಾಗಿವೆ ಅಭಿವೃದ್ಧಿ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸರ್ಕಾರ ಹೇಗೆ ಒದಗಿಸಲಿದೆ? ಮತ್ತು ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರ ಜೀವನೋಪಾಯದ ಹಕ್ಕು ಹಾಗೂ ಅವರ ಒಪ್ಪಿಗೆಯನ್ನು ಹೇಗೆ ಪರಿಗಣಿಸಲಾಗುತ್ತದೆ?
ರೈತರ ದಯಾಮರಣ ಮನವಿ ಈ ವಿವಾದವನ್ನು ಕೇವಲ ಭೂಸ್ವಾಧೀನದ ಪ್ರಶ್ನೆಯಿಂದ ಹೊರತೆಗೆದು, ರೈತರ ಜೀವನೋಪಾಯ, ಪುನರ್ವಸತಿ, ಪರಿಹಾರ ಮತ್ತು ಅಭಿವೃದ್ಧಿ ಯೋಜನೆಗಳ ಸಾಮಾಜಿಕ ಪರಿಣಾಮಗಳ ಕುರಿತ ದೊಡ್ಡ ಚರ್ಚೆಯನ್ನಾಗಿ ಮಾಡಿದೆ. ಮುಂದಿನ ದಿನಗಳಲ್ಲಿ ಸರ್ಕಾರ ರೈತರೊಂದಿಗೆ ಯಾವ ರೀತಿಯ ಸಂಧಾನಕ್ಕೆ ಮುಂದಾಗುತ್ತದೆ ಎಂಬುದು ಬಿಡದಿ ಟೌನ್‌ಶಿಪ್ ವಿವಾದದ ಪ್ರಮುಖ ಬೆಳವಣಿಗೆಯಾಗಲಿದೆ.
