Homeರಾಜ್ಯರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆಗೆ ಬರೆ 'ಗ್ಯಾರಂಟಿ' : ಶೀಘ್ರದಲ್ಲೇ ಬಸ್‌‍ ಪ್ರಯಾಣ ದರ...

ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆಗೆ ಬರೆ ‘ಗ್ಯಾರಂಟಿ’ : ಶೀಘ್ರದಲ್ಲೇ ಬಸ್‌‍ ಪ್ರಯಾಣ ದರ ಹೆಚ್ಚಳ

Bus fare hike soon

ಬೆಂಗಳೂರು, ಜೂ.22- ದಿನದಿಂದ ದಿನಕ್ಕೆ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಶೀಘ್ರದಲ್ಲೇ ರಾಜ್ಯ ಸರ್ಕಾರ ಬಸ್‌‍ ಪ್ರಯಾಣ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ಸದ್ಯದಲ್ಲೇ ಬಸ್‌‍ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟುವುದು ಬಹುತೇಕ ಗ್ಯಾರಂಟಿ!

ಬಸ್‌‍ ದರ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿ ಕೆಎಸ್‌‍ಅರ್‌ ಟಿಸಿ, ಕಲ್ಯಾಣ ಕರ್ನಾಟಕ, ವಾಯುವ್ಯ ಕರ್ನಾಟಕ ಮತ್ತು ಬಿಎಂಟಿಸಿಯ ನಾಲ್ಕು ನಿಗಮದ ಅಧಿಕಾರಿಗಳು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.

ಶಕ್ತಿ ಯೋಜನೆ, ಡಿಸೇಲ್‌ ದರ ಏರಿಕೆ, ನೌಕರರ ಸಂಬಳ ಹೆಚ್ಚಳ ಸೇರಿಂತೆ ಇತರೆ ಖರ್ಚುಗಳಿಂದ ಸಾರಿಗೆ ನಿಮಗಳಿಗೆ ಭಾರೀ ಹೊರೆಯಾಗುತ್ತಿದೆ. ಟಿಕೆಟ್‌ ದರ ಏರಿಕೆ ಮಾಡದಿದ್ದರೆ ನಿಗಮಗಳಿಗೆ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುವ ಕಾರಣ, ಬಸ್‌‍ ಪ್ರಯಾಣ ದರ ಏರಿಕೆ ಅನಿವಾರ್ಯವಾಗಲಿದೆ ಎಂಬುದು ಅಧಿಕಾರಿಗಳ ಸಮರ್ಥನೆಯಾಗಿದೆ.

ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಶೀಘ್ರದಲ್ಲೇ ಸಾರಿಗೆ ಸಚಿವರು, ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಸಾರಿಗೆ ಇಲಾಖೆಯ ಆಯುಕ್ತರು, ಕಾರ್ಯದರ್ಶಿ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳ ಸಭೆ ಕರೆದು, ಚರ್ಚಿಸಿ ಸಾಧಕ ಬಾದಕಗಳನ್ನು ನೋಡಿಕೊಂಡು ಪ್ರಯಾಣಿಕರಿಗೆ ಹೊರೆಯಾಗದಂತೆ ದರ ಪರಿಷ್ಕರಣೆ ಮಾಡುವ ಸಂಭವವಿದೆ.

ಶೇ. 44 ರಷ್ಟು ಟಿಕೆಟ್‌ ದರ ಏರಿಕೆಗೆ ಬಿಎಂಟಿಸಿ ನಿಗಮ ಹಾಗೂ ಶೇ.33 ರಷ್ಟು ಟಿಕೆಟ್‌ ದರ ಏರಿಕೆಗೆ ನಿಗಮ ಪ್ರಸ್ತಾವನೆ ಮುಂದಿಟ್ಟಿದೆ. ಸರ್ಕಾರದ ಒಪ್ಪಿಗೆ ಪಡೆದು ಶೀಘ್ರದಲ್ಲೇ ಬಸ್‌‍ ಟಿಕೆಟ್‌ ದರ ಏರಿಕೆ ಮಾಡುವುದು ಬಹುತೇಕ ಖಚಿತವಾಗಿದೆ. ನಿಗಮಗಳು ಟಿಕೆಟ್‌ ದರ ಏರಿಕೆಗೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದು, ನಾಲ್ಕು ಸಾರಿಗೆ ನಿಗಮಗಳಿಂದ ಟಿಕೆಟ್‌ ದರ ಏರಿಕೆಗೆ ಬಿಗಿ ಪಟ್ಟು ಹಿಡಿದಿದೆ.

ಬಸ್‌‍ ಟಿಕೆಟ್‌ ದರ ಏರಿಕೆ ಮಾಡದಿದ್ದರೆ ಸರ್ಕಾರಕ್ಕೆ ದೊಡ್ಡ ಹೊರೆಯಾಗಲಿದೆ. ನಷ್ಟದ ಭೀತಿಯಲ್ಲಿ ನಾಲ್ಕು ನಿಗಮಗಳು ಇಂಧನ ದರ ಏರಿಕೆಯಿಂದಾಗಿ ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳಿಗೆ ಬರೋಬ್ಬರಿ 40 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ನಷ್ಟವಾಗುತ್ತಿದೆ. ಇದೇ ರೀತಿ ಮುಂದುವರಿದರೆ ವಾರ್ಷಿಕವಾಗಿ ನಿಗಮಗಳ ನಷ್ಟದ ಪ್ರಮಾಣ 480 ಕೋಟಿ ರೂಪಾಯಿ ದಾಟುವ ಆತಂಕ ಎದುರಾಗಿದೆ.

ಈ ಆರ್ಥಿಕ ಹೊರೆಯನ್ನು ಸರಿದೂಗಿಸಲು ಕನಿಷ್ಠ ಶೇ 25 ರಷ್ಟು ಟಿಕೆಟ್‌ ದರ ಏರಿಕೆ ಮಾಡುವುದು ಅನಿವಾರ್ಯ. ಇಲ್ಲದಿದ್ದರೆ ನಿಗಮಗಳನ್ನು ನಡೆಸುವುದು ಕಷ್ಟ ಎಂದು ಸಾರಿಗೆ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ನೀಡಿರುವ ಮನವಿಯಲ್ಲಿ ವಿವರಿಸಿದ್ದಾರೆ. ನಿಗಮಗಳಿಗೆ ಕೇವಲ ಡೀಸೆಲ್‌ ದರ ಮಾತ್ರವಲ್ಲದೆ ಇತರೆ ಆರ್ಥಿಕ ಹೊರೆಗಳೂ ಬೆನ್ನುಬಿದ್ದಿವೆ. ಬರುವ ಜುಲೈ ತಿಂಗಳಿನಿಂದ ಸಾರಿಗೆ ನೌಕರರಿಗೆ ಶೇ.12.5 ರಷ್ಟು ಹೊಸ ವೇತನವನ್ನು ನೀಡಬೇಕಾಗಿದೆ. ಇದರೊಂದಿಗೆ ನೌಕರರಿಗೆ ನೀಡಬೇಕಿರುವ ಒಟ್ಟು 1,271 ಕೋಟಿ ರೂಪಾಯಿಗಳ ವೇತನ ಹಿಂಬಾಕಿ ಹಣದಲ್ಲಿ ಸದ್ಯ 450 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದ್ದು, ಇನ್ನುಳಿದ 821 ಕೋಟಿ ರೂಪಾಯಿಗಳನ್ನು ನೀಡಬೇಕಿದೆ.

ಇವೆಲ್ಲದರ ಜೊತೆಗೆ, ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ (ಮಹಿಳೆಯರ ಉಚಿತ ಪ್ರಯಾಣ) ಸಂಬಂಧಿಸಿದಂತೆ ಸರ್ಕಾರದಿಂದ ನಿಗಮಗಳಿಗೆ ಬಿಡುಗಡೆಯಾಗಬೇಕಿರುವ ಸುಮಾರು 5,000 ಕೋಟಿ ರೂಪಾಯಿಗಳ ಅನುದಾನವೂ ಬಾಕಿ ಉಳಿದಿದೆ. ಈ ಎಲ್ಲಾ ಆರ್ಥಿಕ ಸವಾಲುಗಳನ್ನು ಎದುರಿಸಲು ಟಿಕೆಟ್‌ ದರ ಏರಿಕೆ ಮಾಡಲೇಬೇಕಾದ ಅನಿವಾರ್ಯತೆ ಇದೆ.

ಡೀಸೆಲ್‌ ಹೊರೆ :
ಜಾಗತಿಕ ಸಂಘರ್ಷದ ಪರಿಣಾಮವಾಗಿ ದೇಶಾದ್ಯಂತ ಡೀಸೆಲ್‌ ದರದಲ್ಲಿ ಗಣನೀಯ ಏರಿಕೆ ಸಂಭವಿಸಿದ್ದು, ಲೀಟರ್ಗೆ ಸರಾಸರಿ ಶೇ.8 ರಷ್ಟು ಹೆಚ್ಚಳವಾಗಿದೆ.ಇಂಧನ ದರ ಏರಿಕೆಯಿಂದಾಗಿ ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳಿಗೆ ರೂ. 40 ಕೋಟಿಗಳಷ್ಟು ಹೆಚ್ಚುವರಿ ನಷ್ಟವಾಗುತ್ತಿದೆ. ಇದೇ ರೀತಿ ಮುಂದುವರಿದರೆ ವಾರ್ಷಿಕವಾಗಿ ನಿಗಮಗಳ ನಷ್ಟದ ಪ್ರಮಾಣ 480 ಕೋಟಿ ದಾಟುವ ಆತಂಕ ಎದುರಾಗಿದೆ.

ಈ ಆರ್ಥಿಕ ಹೊರೆಯನ್ನು ಸರಿದೂಗಿಸಲು ಕನಿಷ್ಠ ಶೇ.25 ರಷ್ಟು ಟಿಕೆಟ್‌ ದರ ಏರಿಕೆ ಮಾಡುವುದು ಅನಿವಾರ್ಯವೆಂದು ಸಾರಿಗೆ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ನೀಡಿರುವ ಮನವಿಯಲ್ಲಿ ವಿವರಿಸಿದ್ದಾರೆ. ಇಲ್ಲದಿದ್ದರೆ ನಿಗಮಗಳನ್ನು ನಡೆಸುವುದು ಕಷ್ಟಕರ ಎಂದು ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ.

ಈ ಹಿಂದೆ ಡೀಸಲ್‌ ಬೆಲೆ ಹೆಚ್ಚಾದರೆ ಟಿಕೆಟ್‌ ಬೆಲೆ ಹೆಚ್ಚಳ ಆಗಬೇಕು ಎಂದು ತೀರ್ಮಾನ ಮಾಡಲಾಗಿತ್ತು. ಇದರ ಬಗ್ಗೆ ಮತ್ತೊಮೆ ಪರಿಶೀಲನೆ ಮಾಡಬೇಕು. ಹೀಗಾಗಿ ಅಧಿಕಾರಿಗಳಿಗೆ ವರದಿ ನೀಡಲು ಹೇಳಿದ್ದೇನೆ. ವರದಿ ಬಂದ ಬಳಿಕ ಕೆಎಸ್‌‍ಆರ್‌ಟಿಸಿಯೂ ಉಳಿಯಬೇಕು. ಜನರಿಗೂ ಅನಾನುಕೂಲ ಆಗಬಾರದು. ಆ ರೀತಿ ನಿರ್ಧಾರ ತೆಗೆದುಕೊಳ್ಳುವುದಾಗಿ ಡಿಕೆಶಿ ಹೇಳಿದ್ದಾರೆ.

ಸದ್ಯ ನಿಗಮಗಳ ಆರ್ಥಿಕ ಹೊರೆ ತಪ್ಪಿಸಲು ಟಿಕೆಟ್‌ ದರ ಏರಿಕೆ ಅನಿವಾರ್ಯ ಎನ್ನಲಾಗುತ್ತಿದ್ದು, ಈ ಮನವಿಗೆ ಮುಖ್ಯಮಂತ್ರಿಗಳು ಗ್ರೀನ್‌ ಸಿಗ್ನಲ್‌ ನೀಡುತ್ತಾರೆಯೇ ಅಥವಾ ಬೇರೆ ಯಾವುದೇ ಪರ್ಯಾಯ ಕ್ರಮ ಕೈಗೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

Latest News