Homeರಾಜ್ಯನಾಗೇಂದ್ರ ವಿಚಾರಣೆಗೆ ರಾಜ್ಯಪಾಲರ ಅನುಮತಿ ಕೋರಿದ ಸಿಬಿಐ

ನಾಗೇಂದ್ರ ವಿಚಾರಣೆಗೆ ರಾಜ್ಯಪಾಲರ ಅನುಮತಿ ಕೋರಿದ ಸಿಬಿಐ

ಬೆಂಗಳೂರು,ಆ.20- ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಮಹರ್ಷಿ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ದುರುಪಯೋಗ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ಅವರ ಕಾನೂನು ಸಂಕಷ್ಟ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ನಾಗೇಂದ್ರ ಅವರನ್ನು ವಿಚಾರಣೆಗೊಳಪಡಿಸಲು ಹಾಗೂ ಕಾನೂನು ಕ್ರಮ ಮುಂದುವರಿಸಲು ರಾಜ್ಯಪಾಲರ ಅನುಮತಿ ಕೋರಿ ಪತ್ರ ಬರೆದಿದೆ ಎನ್ನಲಾಗಿದೆ.

ನಿಗಮದ ಸುಮಾರು 89.63 ಕೋಟಿ ರೂ.ಗಳನ್ನು ನಕಲಿ ಚೆಕ್‌ಗಳು ಮತ್ತು ಆರ್‌ಟಿಜಿಎಸ್‌‍ ಮೂಲಕ ಅಕ್ರಮವಾಗಿ ವರ್ಗಾಯಿಸಿ, ನೂರಾರು ಬೇನಾಮಿ ಖಾತೆಗಳ ಮೂಲಕ ದುರ್ಬಳಕೆ ಮಾಡಲಾಗಿದೆ ಎಂಬುದು ತನಿಖೆಯ ಪ್ರಮುಖ ಆರೋಪವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದೋಷಾರೋಪಪಟ್ಟಿ ಸಲ್ಲಿಸಿದ್ದು, ನಾಗೇಂದ್ರ ಅವರನ್ನು ಪ್ರಮುಖ ಆರೋಪಿಗಳ ಪೈಕಿ ಒಬ್ಬರಾಗಿ ಉಲ್ಲೇಖಿಸಿದೆ ಎನ್ನಲಾಗಿದೆ.

ಹಗರಣದ ಆರೋಪಗಳು ತೀವ್ರಗೊಂಡ ಹಿನ್ನೆಲೆಯಲ್ಲಿ 2024ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಕೂಡ ಬಂಧಿಸಿ ವಿಚಾರಣೆ ನಡೆಸಿತ್ತು. ಬಳಿಕ ಅವರು ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದರು. ಇತ್ತೀಚೆಗೆ ಅವರು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವುದು ಬಿಜೆಪಿ ಮತ್ತು ಜೆಡಿಎಸ್‌‍ ಸೇರಿದಂತೆ ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರದ ವಾದದ ಪ್ರಕಾರ, ಆರೋಪಪಟ್ಟಿ ಸಲ್ಲಿಕೆಯಾದ ಮಾತ್ರಕ್ಕೆ ವ್ಯಕ್ತಿ ಅಪರಾಧಿ ಎಂದು ಪರಿಗಣಿಸಲಾಗುವುದಿಲ್ಲ. ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ನಿರ್ದೋಷಿತ್ವದ ಹಕ್ಕು ಅನ್ವಯಿಸುತ್ತದೆ. ಇದೇ ವೇಳೆ, ನಾಗೇಂದ್ರ ಅವರನ್ನು ಸಚಿವರಾಗಿ ಮುಂದುವರಿಸುವ ಸರ್ಕಾರದ ನಿರ್ಧಾರವನ್ನು ಪ್ರತಿಪಕ್ಷಗಳು ನೈತಿಕ ಪ್ರಶ್ನೆಯಾಗಿ ಮುಂದಿಟ್ಟಿವೆ.

ರಾಜ್ಯಪಾಲರ ಅನುಮತಿ ದೊರೆತರೆ ನಾಗೇಂದ್ರ ವಿರುದ್ಧದ ಕಾನೂನು ಪ್ರಕ್ರಿಯೆ ಮತ್ತಷ್ಟು ವೇಗ ಪಡೆಯುವ ಸಾಧ್ಯತೆ ಇದೆ. ಮುಂದಿನ ಹಂತದಲ್ಲಿ ನ್ಯಾಯಾಲಯ ಆರೋಪಪಟ್ಟಿಯನ್ನು ಪರಿಗಣಿಸುವುದು, ಆರೋಪ ನಿಗದಿ ಮತ್ತು ವಿಚಾರಣೆಯ ಪ್ರಗತಿ ಪ್ರಕರಣದ ದಿಕ್ಕನ್ನು ನಿರ್ಧರಿಸಲಿದೆ.

ಈ ಬೆಳವಣಿಗೆ ಕಾಂಗ್ರೆಸ್‌‍ ಸರ್ಕಾರಕ್ಕೆ ರಾಜಕೀಯವಾಗಿಯೂ ಸವಾಲಾಗಿದೆ. ನಾಗೇಂದ್ರ ಅವರನ್ನು ಸಂಪುಟದಲ್ಲಿ ಮುಂದುವರಿಸುವುದೇ ಅಥವಾ ಪ್ರಕರಣದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವುದೇ ಎಂಬ ಪ್ರಶ್ನೆ ಇದೀಗ ಮತ್ತಷ್ಟು ಮಹತ್ವ ಪಡೆದಿದೆ.

RELATED ARTICLES
spot_img

Latest News