ನವದೆಹಲಿ,ಅ.7- ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಹಾಗೂ ನಮೂನೆ 6ರ ಬದಲಾವಣೆಗಳ ವಿಚಾರದಲ್ಲಿ ಚುನಾವಣಾ ಆಯೋಗ ಮತ್ತು ವಿರೋಧ ಪಕ್ಷಗಳ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಇಂಡಿಯಾ ಬ್ಲಾಕ್ನ ಸಂಸದರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಜ್ಞಾಪಕ ಪತ್ರ ಸಲ್ಲಿಸಲು ಮುಂದಾದರೂ, ಸಂಸತ್ ಭವನದ ಅನೆಕ್್ಸನಲ್ಲಿ ಸಭೆ ನಡೆಸುವ ಮನವಿಯನ್ನು ಆಯೋಗ ತಿರಸ್ಕರಿಸಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ, ಸಂಸದರು ಅಥವಾ ರಾಜಕೀಯ ಪಕ್ಷಗಳ ನಿಯೋಗವನ್ನು ಆಯೋಗ ಭೇಟಿ ಮಾಡಬಾರದು ಎಂಬ ಯಾವುದೇ ಸ್ಪಷ್ಟ ಕಾನೂನು ನಿರ್ಬಂಧವಿದೆಯೇ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಸಂವಿಧಾನದ 324ನೇ ವಿಧಿ ಚುನಾವಣೆಯ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡುತ್ತದೆ. ಆದರೆ ಸಂಸದರು ಅಥವಾ ರಾಜಕೀಯ ಪಕ್ಷಗಳ ನಿಯೋಗವನ್ನು ಎಲ್ಲಿ, ಯಾವ ಸಂದರ್ಭದಲ್ಲಿ ಹಾಗೂ ಯಾವ ರೀತಿಯಲ್ಲಿ ಭೇಟಿ ಮಾಡಬೇಕು ಎಂಬುದನ್ನು ನಿರ್ದಿಷ್ಟವಾಗಿ ಕಡ್ಡಾಯಗೊಳಿಸುವ ನಿಯಮ ಸಂವಿಧಾನದಲ್ಲಾಗಲಿ, ಜನತಾ ಪ್ರಾತಿನಿಧ್ಯ ಕಾಯ್ದೆ 1950 ಅಥವಾ 1951ರಲ್ಲಾಗಲಿ ಇಲ್ಲ. ಹೀಗಾಗಿ, ಸಭೆಯ ಸ್ಥಳ ಮತ್ತು ವಿಧಾನವನ್ನು ನಿರ್ಧರಿಸುವ ಅಧಿಕಾರ ಆಯೋಗಕ್ಕಿದೆ ಎಂಬುದು ಕಾನೂನುಬದ್ಧವಾಗಿ ಮುಂದಿಡಲಾಗುತ್ತಿರುವ ವಾದವಾಗಿದೆ.
ಮತ್ತೊಂದೆಡೆ ರಾಜಕೀಯ ಪಕ್ಷಗಳ ಅಹವಾಲುಗಳನ್ನು ಆಲಿಸುವುದು ಚುನಾವಣಾ ವ್ಯವಸ್ಥೆಯ ಸಾಮಾನ್ಯ ಪ್ರಕ್ರಿಯೆಯ ಭಾಗವಾಗಿದೆ. ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳ ನಿಯೋಗಗಳು ಮತದಾರರ ಪಟ್ಟಿ, ಮಾದರಿ ನೀತಿ ಸಂಹಿತೆ, ಚುನಾವಣಾ ಪ್ರಕ್ರಿಯೆ ಹಾಗೂ ಮತಯಂತ್ರಗಳಿಗೆ ಸಂಬಂಧಿಸಿದ ದೂರುಗಳು ಮತ್ತು ಸಲಹೆಗಳನ್ನು ಆಯೋಗದ ಮುಂದೆ ಮಂಡಿಸುವುದು ಸಾಮಾನ್ಯ ಪದ್ಧತಿಯಾಗಿದೆ. ಹೀಗಾಗಿ, ದೊಡ್ಡ ವಿರೋಧ ಪಕ್ಷದ ನಿಯೋಗವೊಂದರ ಭೇಟಿಯನ್ನು ಸಂಪೂರ್ಣವಾಗಿ ನಿರಾಕರಿಸುವುದು ಸಾಮಾನ್ಯ ಪದ್ಧತಿಗಿಂತ ಭಿನ್ನವಾದ ಬೆಳವಣಿಗೆಯಾಗಿ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಸಂಸದರ ಮನವಿಗೆ ಆಯೋಗದ ಆಕ್ಷೇಪವೇನು?
ಮಂಗಳವಾರದ ಬೆಳವಣಿಗೆಯಲ್ಲಿ, ಸುಮಾರು 240 ಸಂಸದರ ನಿಯೋಗವು ಸಂಸತ್ ಭವನದ ಅನೆಕ್್ಸನಲ್ಲಿ ಆಯೋಗವನ್ನು ಭೇಟಿ ಮಾಡಲು ಬಯಸಿದೆ ಎಂದು ದೆಹಲಿ ಪೊಲೀಸರ ಮೂಲಕ ಚುನಾವಣಾ ಆಯೋಗಕ್ಕೆ ಮಾಹಿತಿ ತಲುಪಿತ್ತು. ಆಯೋಗದ ಪ್ರಕಾರ, ಇಂತಹ ಸಭೆಗಳು ಚುನಾವಣಾ ಆಯೋಗದ ಆವರಣದಲ್ಲೇ ನಡೆಯಬೇಕು ಎಂಬ 2025ರಲ್ಲಿ ರೂಪಿಸಲಾದ ಕಾರ್ಯವಿಧಾನವಿದೆ.
ಯಾವುದೇ ರಾಜಕೀಯ ಪಕ್ಷ ಅಥವಾ ಜಂಟಿ ನಿಯೋಗವು ಅಧಿಕೃತ ಪ್ರತಿನಿಧಿಯ ಮೂಲಕ ಸಭೆಗೆ ಸಮಯ ಕೋರಬೇಕು. ಬಳಿಕ ಎರಡೂ ಕಡೆಯವರಿಗೆ ಅನುಕೂಲವಾಗುವ ಸಮಯದಲ್ಲಿ ಆಯೋಗದ ಆವರಣದಲ್ಲಿ ಸಭೆ ನಡೆಸಲಾಗುತ್ತದೆ ಎಂಬುದು ಈ ಕಾರ್ಯವಿಧಾನದ ಸಾರವಾಗಿದೆ ಎಂದು ಆಯೋಗ ತಿಳಿಸಿದೆ.
ಅದರ ಬದಲಾಗಿ ಸಂಸದರ ಜ್ಞಾಪಕ ಪತ್ರವನ್ನು ಸ್ವೀಕರಿಸಲು ಕರ್ತವ್ಯದಲ್ಲಿರುವ ಹಿರಿಯ ಅಧಿಕಾರಿಯೊಬ್ಬರನ್ನು ಸಭೆಯ ಸ್ಥಳಕ್ಕೆ ಕಳುಹಿಸುವುದಾಗಿ ಆಯೋಗ ಪ್ರಸ್ತಾಪಿಸಿತ್ತು. ಆದರೆ ಈ ಪ್ರಸ್ತಾಪವನ್ನು ವಿರೋಧ ಪಕ್ಷದ ಸಂಸದರು ತಿರಸ್ಕರಿಸಿದರು. ಆಯೋಗದ ಪ್ರಕಾರ, ರಾಜಕೀಯ ಪಕ್ಷಗಳು ಯಾವುದೇ ಸಮಯದಲ್ಲೂ ಸಭೆಗೆ ಮನವಿ ಮಾಡಬಹುದು; ಆದರೆ ಸಭೆಯ ದಿನಾಂಕ ಮತ್ತು ಸಮಯವನ್ನು ಪರಿಸ್ಥಿತಿಯ ಅನುಕೂಲತೆ ಗಮನಿಸಿ ಆಯೋಗ ನಿಗದಿಪಡಿಸುತ್ತದೆ.
ವಿರೋಧ ಪಕ್ಷದ ಆಕ್ರೋಶ
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ವಿರೋಧ ಪಕ್ಷದ ಸಂಸದರು ಪಾಲ್ಗೊಂಡಿದ್ದರು. ಎಸ್ಐಆರ್ ಪ್ರಕ್ರಿಯೆ, ಮತದಾರರ ಪಟ್ಟಿಯಲ್ಲಿನ ಬದಲಾವಣೆಗಳು ಮತ್ತು ಮೊದಲ ಬಾರಿಗೆ ಮತದಾರರ ನೋಂದಣಿಗೆ ಬಳಸುವ ನಮೂನೆ 6ರಲ್ಲಿ ಮಾಡಿರುವ ಬದಲಾವಣೆಗಳ ಕುರಿತು ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿವೆ.
ಸಂಸದರ ಪ್ರತಿಭಟನೆ ವೇಳೆ ಪೊಲೀಸರು ಅವರನ್ನು ತಡೆದು, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಕೆಲವರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.ಚುನಾವಣಾ ಆಯೋಗವನ್ನು ಭೇಟಿ ಮಾಡಲು 300ಕ್ಕೂ ಹೆಚ್ಚು ಸಂಸದರು ಮೆರವಣಿಗೆ ನಡೆಸಿದ್ದರು ಎಂದು ರಾಹುಲ್ ಗಾಂಧಿ ಹೇಳಿದರೆ, ಬಿಜೆಪಿ ಇದನ್ನು ಪ್ರಶ್ನಿಸಿದೆ. ಬಿಜೆಪಿ ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ, ಆಯೋಗದ ಹೇಳಿಕೆಯ ಆಧಾರದ ಮೇಲೆ ವಿರೋಧ ಪಕ್ಷದವರು ನಿಗದಿತ ವಿಧಾನದಲ್ಲಿ ಮುಂಚಿತವಾಗಿ ಸಭೆ ಕೋರಿರಲಿಲ್ಲ ಎಂದು ವಾದಿಸಿದ್ದಾರೆ.
