Wednesday, April 22, 2026
Homeರಾಜ್ಯನೆತ್ತಿ ಸುಡುವ ಬಿಸಿಲಿಗೆ ತತ್ತರಿಸಿದ ಜನ ; 80 ರೂ. ತಲುಪಿದ ಎಳನೀರು

ನೆತ್ತಿ ಸುಡುವ ಬಿಸಿಲಿಗೆ ತತ್ತರಿಸಿದ ಜನ ; 80 ರೂ. ತಲುಪಿದ ಎಳನೀರು

Coconut water price reaches Rs. 80

ತುಮಕೂರು,ಏ.22- ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಸೂರ್ಯನ ಪ್ರಖರತೆ ಹೆಚ್ಚುತ್ತಿದ್ದು, ಅಕ್ಷರಶಃ ಕೆಂಡದಂತಾಗಿದೆ. ಜನರು ಬೆವರಿ ಬೆಂಡಾಗಿ ಹೋಗಿದ್ದಾರೆ.ಬೆಳಿಗ್ಗೆ 10 ಗಂಟೆಯಾಗುತ್ತಲೇ ಸೂರ್ಯ ತನ್ನ ಪ್ರತಾಪ ತೋರಿಸಲು ಆರಂಭಿಸುತ್ತಿದ್ದು, ಮಧ್ಯಾಹ್ನದ ವೇಳೆಗೆ ರಸ್ತೆಗಿಳಿಯಲು ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ. ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಅತೀವ ತಾಪಮಾನದಿಂದ ತತ್ತರಿಸಿ ಹೋಗಿದ್ದಾರೆ.

ಬಿಸಿಲಿನ ಝಳ ತಾಳಲಾರದೆ ಮಹಿಳೆಯರು ರಸ್ತೆಯಲ್ಲಿ ಸಂಚರಿಸುವಾಗ ಅನಿವಾರ್ಯವಾಗಿ ತಮ ಸೆರಗು ಅಥವಾ ಬಟ್ಟೆಯ ವೇಲ್‌ಗಳನ್ನು ತಲೆಮೇಲೆ ಹಾಕಿಕೊಂಡು ಸಾಗುತ್ತಿರುವ ದೃಶ್ಯಗಳು ನಗರದಾದ್ಯಂತ ಸಾಮಾನ್ಯವಾಗಿದೆ. ಛತ್ರಿಗಳ ಮೊರೆ ಹೋದರೂ ಸುಡುವ ಗಾಳಿಯಿಂದ ತಪ್ಪಿಸಿಕೊಳ್ಳುವುದು ಕಷ್ಟಕರವಾಗಿದ್ದು, ಮಹಿಳೆಯರು ಹಾಗೂ ಕಾಲೇಜು ವಿದ್ಯಾರ್ಥಿನಿಯರು ಮುಖ ಹಾಗೂ ತಲೆಯನ್ನು ಬಟ್ಟೆಯಿಂದ ಪೂರ್ತಿಯಾಗಿ ಮುಚ್ಚಿಕೊಂಡು ಬಿಸಿಲಿನಿಂದ ರಕ್ಷಣೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ನಗರದ ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ವಿರಳವಾಗುತ್ತಿದ್ದು, ಜನರು ತಂಪು ಪಾನೀಯ, ಎಳನೀರು ಹಾಗೂ ಹಣ್ಣಿನ ರಸಗಳ ಅಂಗಡಿಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಮನೆಯಿಂದ ಹೊರಬರುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ.

ಬಿಸಿಲಿನ ತಾಪಕ್ಕೆ ಊಟ, ತಿಂಡಿ ಸೇವನೆ ಕಡಿಮೆಯಾಗಿದ್ದು, ಕೇವಲ ನೀರು, ಎಳನೀರು, ತಂಪು ಪಾನೀಯ ಕುಡಿದು ಹೊಟ್ಟೆ ತುಂಬಿಸಿಕೊಳ್ಳುವಂತಾಗಿದೆ. ಹೋಟೆಲ್‌ಗಳಲ್ಲಿ ಊಟ ಸೇವಿಸುವವರು ಕಡಿಮೆಯಾಗಿದ್ದು, ಜ್ಯೂಸ್‌‍ ಅಂಗಡಿಗಳ ಮುಂದೆ ಜನರು ತುಂಬಿ ತುಳುಕುತ್ತಿದ್ದಾರೆ.
ನಿರ್ಜಲೀಕರಣವಾಗಬಾರದೆಂದು ಹೆಚ್ಚಿನ ಜನರು ಎಳನೀರು ಮೊರೆಹೋಗಿದ್ದು, ಬೆಲೆ ಗಗನಕ್ಕೇರಿದೆ. ಬೆಂಗಳೂರಿನಲ್ಲಿ 80 ರೂ.ಗಳಿಂದ 90 ರೂ.ಗೆ ಮಾರಾಟವಾಗುತ್ತಿದೆ. ಇದೇ ರೀತಿ ಮುಂದುವರೆದರೆ ಶತಕ ಭಾರಿಸಲಿದೆ.

ರೋಗಬಾಧೆ, ನೀರಿನ ಕೊರತೆಯಿಂದ ಇಳುವರಿ ಕುಂಠಿತವಾಗಿ ಬೇಡಿಕೆ ಹೆಚ್ಚಾದ ಪರಿಣಾಮ ಬೆಲೆ ಏರಿಕೆಯಾಗಿದೆ. ಅದರಲ್ಲೂ ಜನರು ಹಣ್ಣುಗಳ ಪಾನೀಯಕ್ಕಿಂತ ನೈಸರ್ಗಿಕ ಹಾಗೂ ಆರೋಗ್ಯಕರ ಎಳನೀರು ಸೇವನೆಗೆ ಹೆಚ್ಚು ಆಸಕ್ತಿ ವಹಿಸಿದ್ದು, ಬೇಡಿಕೆ ಹೆಚ್ಚಾದ ಕಾರಣ ಬೆಲೆಯೂ ಕೂಡಾ ಹೆಚ್ಚಾಗಿದೆ.

ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ :
ಬಿಸಿಲಿನ ತಾಪದಿಂದ ಪಾರಾಗಲು ಮಧ್ಯಾಹ್ನದ ಸಮಯದಲ್ಲಿ ಹೊರಗಿನ ಸಂಚಾರ ನಿಲ್ಲಿಸುವುದು ಸೂಕ್ತ. ಆದಷ್ಟು ಮನೆಯಲ್ಲೇ ಇರುವುದು ಉತ್ತಮ. ಆಗಾಗ್ಗೆ ನೀರು, ನಿಂಬೆರಸ, ಎಳನೀರು ಸೇವಿಸಿ, ತಿಳಿಬಣ್ಣದ ಹತ್ತಿಬಟ್ಟೆಯನ್ನು ಧರಿಸಿ ಜೊತೆಗೆ ಮಸಾಲೆಯುಕ್ತ ಪದಾರ್ಥಗಳಿಂದ ದೂರವಿರಿ, ಮಜ್ಜಿಗೆ, ಗಂಜಿ, ರಾಗಿ ಅಂಬಲಿ ಸೇವಿಸಿ ದೇಹವನ್ನು ಆದಷ್ಟು ತಂಪಾಗಿಡುವಂತೆ ನೋಡಿಕೊಳ್ಳುವುದು ಉತ್ತಮ.

RELATED ARTICLES

Latest News