Thursday, April 16, 2026
Homeಇದೀಗ ಬಂದ ಸುದ್ದಿಸಿಎಂ ಕುರ್ಚಿ ಕದನ : ಅಡ್ಡ ಗೋಡೆ ಮೇಲೆ ದೀಪ ಇಟ್ಟ ಡಿಕೆಶಿ

ಸಿಎಂ ಕುರ್ಚಿ ಕದನ : ಅಡ್ಡ ಗೋಡೆ ಮೇಲೆ ದೀಪ ಇಟ್ಟ ಡಿಕೆಶಿ

DCM DK Shivkumar on CM chair fight

ಮಂಗಳೂರು, ಫೆ.7- ಅಧಿಕಾರ ಹಂಚಿಕೆಗೆ ಸಂಬಂಧ ಪಟ್ಟಂತೆ ಸಮಯವೇ ಉತ್ತರ ನೀಡುತ್ತದೆ ಎಂದು ಪುನರುಚ್ಚರಿಸುವ ಮೂಲಕ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತೊಮೆ ನಿಗೂಢತೆ ಕಾಯ್ದುಕೊಂಡಿದ್ದಾರೆ.ಈ ಮೊದಲು ಸಿದ್ದರಾಮಯ್ಯ ಐದು ವರ್ಷ ತಾವೇ ಮುಖ್ಯಮಂತ್ರಿಯಾಗಿರುವುದಾಗಿ ಹೇಳುತ್ತಿದ್ದರು. ಆಗೆಲ್ಲಾ ಪ್ರತಿಕ್ರಿಯೆ ನೀಡುತ್ತಿದ್ದ ಡಿ.ಕೆ.ಶಿವಕುಮಾರ್‌, ಹೌದಾ… ಒಳ್ಳೆಯದು.. ಅವರಿಗೆ ಅಭಿನಂದನೆಗಳು ಎಂದು ಉತ್ತರಿಸುತ್ತಿದ್ದರು.

ಒಂದು ಹಂತದಲ್ಲಿ ನಾನು ಮುಂದುವರೆಯುತ್ತೇನೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರಲ್ಲ, ನಾವು ಹೇಳುವುದು ಇನ್ನೇನಿದೆ. ಅವರೇ ಮುಂದುವರೆಯುತ್ತಾರೆ ಎಂದು ಹಲವು ಬಾರಿ ಹೇಳಿದ ಉದಾಹರಣೆಗಳಿವೆ.

ಆದರೆ ಡಿ.ಕೆ.ಬಣದ ಶಾಸಕರ ದೆಹಲಿ ಯಾತ್ರೆಯ ಬಳಿಕ ವರಸೆ ಬದಲಾಗಿದೆ. ಎರಡು ಉಪಾಹಾರಕೂಟಗಳು ಇಬ್ಬರು ನಾಯಕರ ವರಸೆಗಳನ್ನೇ ಉಲ್ಟಾಪಲ್ಟಾ ಮಾಡಿವೆ. ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎನ್ನುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಕಾಲವೇ ಉತ್ತರಿಸುತ್ತದೆ ಎಂದು ಜಾರಿಕೊಳ್ಳುತ್ತಿದ್ದಾರೆ.

ಮೇಲ್ನೋಟಕ್ಕೆ ಇಬ್ಬರೂ ಪರಸ್ಪರ ಅನ್ಯೋನ್ಯತೆಯಿಂದಲೇ ಇರುವಂತೆ ವರ್ತಿಸುತ್ತಿದ್ದಾರೆ. ಆದರೆ ಒಳಗೊಳಗೆ ಅಧಿಕಾರಕ್ಕಾಗಿ ಸಂಘರ್ಷ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಿದ್ದರಾಮಯ್ಯ ಅವರೇ ಐದು ವರ್ಷ ಮುಂದುವರೆಯಲಿ ಎಂದು ಡಿ.ಕೆ.ಶಿವಕುಮಾರ್‌ ಎಲ್ಲಿಯೂ ಬಾಯಿ ಬಿಟ್ಟು ಹೇಳುತ್ತಿಲ್ಲ ಅಥವಾ ಡಿ.ಕೆ.ಶಿವಕುಮಾರ್‌ಗೂ ಅವಕಾಶ ಸಿಗಲಿ ಎಂದು ಸಿದ್ದರಾಮಯ್ಯ ಕೂಡ ದೊಡ್ಡ ಮನಸ್ಸು ಮಾಡಿದಂತೆ ಕಂಡು ಬರುತ್ತಿಲ್ಲ.

ಹೈಕಮಾಂಡ್‌ ನಾಯಕರು ನಮಗೂ ಇದಕ್ಕೂ ಸಂಬಂಧ ಇಲ್ಲವೇ ಇಲ್ಲ ಎಂಬಂತೆ ಜಾರಿಕೊಂಡಿದ್ದಾರೆ. ಲೋಕಸಭೆಯ ನಾಯಕ ರಾಹುಲ್‌ ಗಾಂಧಿ ಮೈಸೂರಿನಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದು ಬಿಟ್ಟರೆ ಬೇರೆಲ್ಲೂ ಪ್ರತ್ಯೇಕ ಮಾತುಕತೆಗೆ ಅವಕಾಶ ನೀಡಿಲ್ಲ.

ಆರಂಭದಲ್ಲಿ ನವೆಂಬರ್‌ ಕ್ರಾಂತಿಯ ಕಿಡಿ ಹೊತ್ತಿಕೊಂಡಿತ್ತು. ಸಿದ್ದರಾಮಯ್ಯ ಅವರ ಬೆಂಬಲಿಗ ಕೆ.ಎನ್‌.ರಾಜಣ್ಣ ನೀಡಿದ ಸೆಪ್ಟಂಬರ್‌ ಕಾಂತ್ರಿಯ ಹೇಳಿಕೆ ಡಿ.ಕೆ.ಶಿವಕುಮಾರ್‌ ಬಣವನ್ನು ತಿರುಗಿ ಬೀಳುವಂತೆ ಮಾಡಿತ್ತು. ಅಲ್ಲಿಂದ ನಾನಾ ರೀತಿಯ ಬೆಳವಣಿಗೆಗಳಾಗಿವೆ.

ಡಿಸೆಂಬರ್‌ ಕ್ರಾಂತಿ, ಹೊಸ ವರ್ಷ, ಸಂಕ್ರಾಂತಿಯ ಕೊಡುಗೆ ಎಲ್ಲವೂ ಮುಗಿದವು. ವಿಧಾನಮಂಡಲ ಅಧಿವೇಶನದ ಬಳಿಕ ಹೈಕಮಾಂಡ್‌ ದೆಹಲಿಗೆ ಕರೆಯಲಿದೆ ಎಂದು ಹೇಳಲಾಯಿತು. ಈಗ ಬಜೆಟ್‌ ಅಧಿವೇಶನದ ಬಳಿಕ ರಾಜಕೀಯ ವಿಪ್ಲವ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಈಗ ಮತ್ತೆ ಅದೇ ರೀತಿಯ ಚರ್ಚೆಗಳು ಗರಿಗೆದರಿವೆ. ಸಿದ್ದರಾಮಯ್ಯ ಅವರು ಈಗಾಗಲೇ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗುವ ಮೂಲಕ ದಿವಂಗತ ದೇವರಾಜ ಅರಸು ಅವರ ದಾಖಲೆಯನ್ನು ಮುರಿದಿದ್ದಾರೆ. 16 ಬಜೆಟ್‌ ಮಂಡಿಸುವ ಮೂಲಕವೂ ದಾಖಲೆ ಮಾಡಿದ್ದಾರೆ. ತಮ 17ನೇ ಬಜೆಟ್‌ ಮಂಡನೆಯ ಬಳಿಕ ಅಧಿಕಾರ ತ್ಯಾಗ ಮಾಡಲಿದ್ದಾರೆ ಎಂಬ ಚರ್ಚೆಗಳು ಚಾಲ್ತಿಯಲ್ಲಿವೆ.
ಈ ಕುರಿತು ಮಂಗಳೂರಿನಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮುಗ್ಗುಮಾಗಿಯೇ ಉತ್ತರಿಸಿದ್ದಾರೆ. ಸಮಯವೇ ಉತ್ತರ ನೀಡಲಿದೆ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾನಾಡಿದ್ದಾರೆ.

ನಾನು ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಜನರಿಗೂ ಇದೆ, ಶಾಸಕರಿಗೂ ಇದೆ, ಮಾಧ್ಯಮದವರಿಗೂ ಇದೆ. ಪಕ್ಷ ಏನು ಹೇಳುತ್ತದೆ ಅದನ್ನು ಕೇಳಬೇಕು ಎಂದು ತಿಳಿಸಿದರು. ದಲಿತ ಸಂಘಟನೆಗಳು ಪರಮೇಶ್ವರ್‌ ಅವರು ಸಿಎಂ ಆಗಬೇಕು ಎಂದು ಆಸೆ ಪಟ್ಟಿರುವ ಬಗ್ಗೆ ಕೇಳಿದಾಗ, ಅವರವರ ಅಭಿಮಾನಿಗಳು ಆಸೆ ಪಡುತ್ತಾರೆ. ಅದನ್ನು ನಾನು ಬೇಡ ಎಂದು ಹೇಳಲು ಆಗುವುದಿಲ್ಲ ಎಂದರು.

RELATED ARTICLES

Latest News