ತುಮಕೂರು,ಮಾ.20- ಯುಗಾದಿ ಹಬ್ಬದ ಸಂದರ್ಭದಲ್ಲಿ ಜೂಜಾಟದಲ್ಲಿ ತೊಡಗಿದ್ದ ಆರೋಪದಲ್ಲಿ ಠಾಣೆಗೆ ಕರೆತಂದಿದ್ದ ವ್ಯಕ್ತಿಯ ಅಸಹಜ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿರುವ ಅವರು, ಘಟನೆಯ ಬಗ್ಗೆ ತಾವು ತುಮಕೂರು ಜಿಲ್ಲೆಯ ಎಸ್‌ಪಿ ಅವರ ಜೊತೆ ಚರ್ಚೆ ನಡೆಸಿದ್ದು, ಅದು ಲಾಕ್‌ಅಪ್‌ಡೆತ್ ಅಲ್ಲ ಎಂದು ಹೇಳಿದ್ದಾರೆ. ಠಾಣೆಗೆ ಕರೆ ತಂದಿದ್ದಕ್ಕೆ ಆತಂಕಗೊಂಡು ಸಾವನ್ನಪ್ಪಿದ್ದಾರೆ ಎಂದು ವಿವರಿಸಿರುವುದಾಗಿ ತಿಳಿಸಿದರು.
ಸದರಿ ವ್ಯಕ್ತಿಯನ್ನು ಪೊಲೀಸರು ಥಳಿಸಿದ್ದರಿಂದಾಗಿ ಮೃತಪಟ್ಟಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಸಿಐಡಿ ತನಿಖೆಯಾದರೆ, ಸತ್ಯ ಗೊತ್ತಾಗುತ್ತದೆ. ಮರಣೋತ್ತರ ಪರೀಕ್ಷೆಯಲ್ಲೂ ಸತ್ಯ ಗೊತ್ತಾಗುತ್ತದೆ. ಸಿಐಡಿ ತನಿಖೆಯಲ್ಲಿ ಥಳಿಸಿರುವುದು ಹಾಗೂ ಒಟ್ಟಾರೆ ಘಟನೆ ಬಗ್ಗೆ ವಿಷಯ ತಿಳಿಯಲಿದೆ. ಒಂದು ವೇಳೆ ಲೋಪಗಳಾಗಿದ್ದರೆ, ಸಿಐಡಿ ವರದಿ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ತುಮಕೂರು ವರದಿ:
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಳೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಸಂಬಂಽಕರು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.ಮೃತನನ್ನು ಕಾಂತರಾಜು (45) ಎಂದು ಗುರುತಿಸಲಾಗಿದೆ. ಪೊಲೀಸರ ಹಲ್ಲೆಯಿಂದ ಕಾಂತರಾಜು ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿ ದ್ದಾರೆ.
ಇಸ್ಪೀಟ್ ಆಡುತ್ತ್ತದ್ದನ್ನು 6 ಜನರನ್ನ ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಠಾಣೆಯಲ್ಲಿ ಕಾಂತ ರಾಜು ಸಾವನ್ನಪ್ಪಿದ್ದರು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹುಳಿಯಾರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಠಾಣೆಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ.ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ತಡೆಯಲು ಎಸ್‌ಪಿ ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥತಿ ತಹಬಂದಿಗೆ ತಂದಿದ್ದಾರೆ.
ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಎಸ್‌ಪಿಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟಿದ್ದಾರೆ.ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬ ಸ್ಥರಿಗೆ ಹಸ್ತಾಂತರಿಸಲಾಗಿದೆ.
ಗ್ರಾಮದಲ್ಲಿ ಇನ್ನೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.ಹೆಚ್ಚಿನ ಪೊಲೀಸ್‌ಭದ್ರತೆ ಕಲ್ಪಿಸಲಾಗಿದೆ.ಇದು ಲಾಕಪ್ ಡೆತ್ ಎಂದು ಗ್ರಾಮಸ್ಥರು ಆರೋಪಿಸಿ ಆಕ್ರೋಶ ಹೊರಹಾಕಿದ್ದಾರೆ.
