Homeರಾಜ್ಯಖಾಲಿ ನಿವೇಶನಗಳ ಸ್ವಚ್ಛತೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ : ಕೃಷ್ಣ ಬೈರೇಗೌಡ...

ಖಾಲಿ ನಿವೇಶನಗಳ ಸ್ವಚ್ಛತೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ : ಕೃಷ್ಣ ಬೈರೇಗೌಡ ಎಚ್ಚರಿಕೆ

Disciplinary action against officials who are negligent in cleaning Bengaluru

ಬೆಂಗಳೂರು, ಆ.30– ನಗರದ ಸ್ವಚ್ಛತೆ, ಖಾಲಿ ನಿವೇಶನಗಳ ನಿರ್ವಹಣೆ ಹಾಗೂ ಬಿಡಾಡಿ ವಾಹನಗಳ ತೆರವು ಕಾರ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ, ಖಾಲಿ ನಿವೇಶನಗಳ ಸ್ವಚ್ಛತೆ ಹಾಗೂ ಅನಾಥ ವಾಹನಗಳ ತೆರವು ಕುರಿತು ಕೆಳಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಶನಿವಾರ ನಡೆದ ವರ್ಚುವಲ್‌ ಸಭೆಯಲ್ಲಿ ಅವರು ಮಾತನಾಡಿದರು.

ಖಾಯಂ ಅಧಿಕಾರಿಗಳು ಕರ್ತವ್ಯದಲ್ಲಿ ಬೇಜವಾಬ್ದಾರಿತನ ತೋರಿದರೆ ಶಿಸ್ತು ಕ್ರಮ ಹಾಗೂ ಹೊರಗುತ್ತಿಗೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದರೆ ಕೆಲಸದಿಂದ ವಜಾಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಶೀಘ್ರದಲ್ಲೇ ಸಾರ್ವಜನಿಕರಿಗೆ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ದೂರುಗಳ ಆಧಾರದ ಮೇಲೆ ಸಂಬಂಧಪಟ್ಟ ಅಧಿಕಾರಿಗಳ ಹೊಣೆಗಾರಿಕೆ ನಿಗದಿಪಡಿಸಲಾಗುವುದು ಎಂದರು.

ಪಾದಚಾರಿ ಮಾರ್ಗ ತೆರವು ಕಾರ್ಯಕ್ಕೆ ವೇಗ

ನಗರದಲ್ಲಿ ಇದುವರೆಗೆ 1,211 ಕಿ.ಮೀ. ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಮಾಡಲಾಗಿದ್ದು, ಇನ್ನೂ ಸುಮಾರು 300 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯ ಬಾಕಿಯಿದೆ. ಆರಂಭದಲ್ಲಿದ್ದ ವೇಗ ಈಗ ಕಡಿಮೆಯಾಗಿದ್ದು, ಹಿರಿಯ ಅಧಿಕಾರಿಗಳು ಸ್ವತಃ ಮೇಲ್ವಿಚಾರಣೆ ನಡೆಸಿ ಕಾರ್ಯಕ್ಕೆ ಚುರುಕು ನೀಡಬೇಕು ಎಂದು ಸಚಿವರು ಸೂಚಿಸಿದರು.

ತೆರವು ಕಾರ್ಯಾಚರಣೆ ಬಳಿಕ ಮತ್ತೆ ಅತಿಕ್ರಮಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮೆಟೀರಿಯಲ್‌ ಜಪ್ತಿ ಮಾಡುವ ಜೊತೆಗೆ ನಿಯಮಾನುಸಾರ ಗರಿಷ್ಠ ದಂಡ ವಿಧಿಸಬೇಕು ಎಂದು ಸೂಚಿಸಿದರು. ಕೆಳಹಂತದ ಅಧಿಕಾರಿಗಳು ನಿರಂತರವಾಗಿ ಸ್ಥಳ ಪರಿಶೀಲನೆ ನಡೆಸಿ ಮರುಒತ್ತುವರಿಗೆ ಅವಕಾಶ ನೀಡಬಾರದು ಎಂದು ತಾಕೀತು ಮಾಡಿದರು.

ಸ್ವಚ್ಛತಾ ಅಭಿಯಾನ ನಿರಂತರ

‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಯಾವುದೇ ಅಂತಿಮ ಗಡುವಿಲ್ಲ. ನಗರದ ಸ್ವಚ್ಛತಾ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು. ದೊಡ್ಡ ಪ್ರಮಾಣದಲ್ಲಿ ಒಂದೆಡೆ ರಾಶಿಯಾಗಿರುವ ಕಟ್ಟಡ ಮತ್ತು ನಿರ್ಮಾಣ ತ್ಯಾಜ್ಯಕ್ಕೆ ಆದ್ಯತೆ ನೀಡುವುದರ ಜತೆಗೆ ರಸ್ತೆ ಬದಿಯಲ್ಲಿರುವ ಸಣ್ಣಪುಟ್ಟ ಕಸದ ರಾಶಿಗಳನ್ನೂ ಸಂಪೂರ್ಣವಾಗಿ ತೆರವುಗೊಳಿಸಬೇಕು. ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡ-ಗಂಟಿಗಳು ಹಾಗೂ ಅನಗತ್ಯ ವಸ್ತುಗಳ ತೆರವಿಗೂ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು.

ಮಾರ್ಷಲ್‌ಗಳು, ಜೂನಿಯರ್‌ ಹೆಲ್ತ್‌ ಇನ್‌ಸ್ಪೆಕ್ಟರ್‌ಗಳು ಹಾಗೂ ಎಇ-ಎಇಇಗಳು ಪ್ರತಿದಿನ ತಮ್ಮ ವ್ಯಾಪ್ತಿಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಕೆಲಸದ ಗುಣಮಟ್ಟವನ್ನು ಖಚಿತಪಡಿಸಬೇಕು ಎಂದರು.

ಖಾಲಿ ಸೈಟ್‌ ಸ್ವಚ್ಛತೆಗೆ ಹೊಸ ಕ್ರಮ

ನಗರದಲ್ಲಿರುವ ತ್ಯಾಜ್ಯದಿಂದ ತುಂಬಿರುವ ಖಾಲಿ ನಿವೇಶನಗಳನ್ನು ಗುರುತಿಸಿ, ಮುಂದಿನ ವಾರದೊಳಗೆ ಪ್ರತ್ಯೇಕ ಗುತ್ತಿಗೆದಾರರನ್ನು ನೇಮಿಸುವ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು.ನಿವೇಶನಗಳ ಸ್ವಚ್ಛತೆಗೆ ತಗಲುವ ವೆಚ್ಚವನ್ನು ನಿಯಮಾನುಸಾರ ಸಂಬಂಧಪಟ್ಟ ಮಾಲೀಕರಿಂದ ಆಸ್ತಿ ತೆರಿಗೆ ಮೂಲಕ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಖಾಲಿ ನಿವೇಶನಗಳು ಸ್ವಚ್ಛವಾಗಿದ್ದರೆ ರಸ್ತೆ ಬದಿಯಲ್ಲಿ ಕಸ ಸುರಿಯುವ ಪ್ರಮಾಣವೂ ಕಡಿಮೆಯಾಗಲಿದೆ. ನಗರದ ಒಟ್ಟಾರೆ ಸ್ವಚ್ಛತೆ ಕಾಪಾಡುವುದರ ಜತೆಗೆ ಸಾರ್ವಜನಿಕರಲ್ಲಿ ಜವಾಬ್ದಾರಿಯುತ ನಡವಳಿಕೆ ಬೆಳೆಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.

ಬಿಡಾಡಿ ವಾಹನಗಳ ವಿರುದ್ಧವೂ ಕ್ರಮ

ಅನಾಥ ಮತ್ತು ಬಿಡಾಡಿ ವಾಹನಗಳನ್ನು ಗುರುತಿಸುವುದು, ನೋಟಿಸ್‌ ಅಂಟಿಸುವುದು ಹಾಗೂ ಅಸ್ತ್ರಂ ತಂತ್ರಾಂಶದಲ್ಲಿ ದಾಖಲಿಸುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಸಚಿವರು ಸೂಚಿಸಿದರು.

ಇನ್ನೂ ಹಲವು ವಾಹನಗಳಿಗೆ ನೋಟಿಸ್‌ ನೀಡದೆ ಇರುವ ಹಾಗೂ ತಂತ್ರಾಂಶದಲ್ಲಿ ದಾಖಲಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನಿರ್ಲಕ್ಷ್ಯ ಮುಂದುವರಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ನ್ಯಾಯಾಲಯದ ಪ್ರಕರಣಗಳಿಂದ ಸಂಚಾರ ಪೊಲೀಸ್‌ ಠಾಣೆಗಳ ಬಳಿ ಉಳಿದಿರುವ ಪೊಲೀಸ್‌ ಹಾಗೂ ಆರ್‌ಟಿಒ ವಶದ ವಾಹನಗಳನ್ನು ಸ್ಥಳಾಂತರಿಸಲು ಕಂದಾಯ ಇಲಾಖೆಯ ಜಾಗಗಳನ್ನು ಗುರುತಿಸಲಾಗುತ್ತಿದೆ. ಶೀಘ್ರದಲ್ಲೇ ಅವುಗಳನ್ನು ಪ್ರತ್ಯೇಕ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.

ನಗರದ ಅಭಿವೃದ್ಧಿ ಮತ್ತು ಸ್ವಚ್ಛತೆಗಾಗಿ ಎಲ್ಲ ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಿದರೂ ನಗರದ ಚಿತ್ರಣ ಬದಲಾಗಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಸಭೆಯಲ್ಲಿ ವಿವಿಧ ನಗರ ಪಾಲಿಕೆಗಳ ಆಯುಕ್ತರು, ಅಪರ ಆಯುಕ್ತರು, ಮುಖ್ಯ ಅಭಿಯಂತರರು ಸೇರಿದಂತೆ ಕೆಳಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

RELATED ARTICLES
spot_img

Latest News