ಬೆಂಗಳೂರು, ಆ.29- ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ನೀಡುವ ಅಗತ್ಯ ಇರಲಿಲ್ಲ. ಬಿಜೆಪಿಯವರ ಕುತಂತ್ರದಿಂದಾಗಿ ಅವರು ಎರಡು ಬಾರಿ ರಾಜೀನಾಮೆ ನೀಡುವಂತಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಜನತಾ ನ್ಯಾಯಾಲಯದ ಮುಂದೆ ಕಾಂಗ್ರೆಸ್ ವಸ್ತುಸ್ಥಿತಿಯನ್ನು ಮಂಡಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ಬಳಿಕ ಪಕ್ಷದ ಕಾರ್ಯಕರ್ತರ ಮನೆಗೆ ಭೇಟಿ ನೀಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
ಯಾವುದೇ ಅಪರಾಧ ಮಾಡದಿದ್ದರೂ ನಾಗೇಂದ್ರ ಅವರು ಎರಡು ಬಾರಿ ರಾಜೀನಾಮೆ ನೀಡುವಂತೆ ಬಿಜೆಪಿಯವರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪಕ್ಷ, ಸರ್ಕಾರ ಹಾಗೂ ಮುಖಂಡರಿಗೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಶಿಸ್ತಿನ ಸಿಪಾಯಿಯಂತೆ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಆದರೆ, ಅದರ ಅಗತ್ಯ ಖಂಡಿತ ಇರಲಿಲ್ಲ ಎಂದರು.
ಸಿಬಿಐ ಅಥವಾ ಜಾರಿ ನಿರ್ದೇಶನಾಲಯದ ತನಿಖೆಯಲ್ಲಾಗಲಿ ನಾಗೇಂದ್ರ ಅವರ ಹೆಸರು ಎಲ್ಲಿಯೂ ಪ್ರಸ್ತಾಪವಾಗಿರಲಿಲ್ಲ. ಅವರಿಂದ ಯಾವುದೇ ಹಣ ವಸೂಲಾಗಿರಲಿಲ್ಲ. ತಾವು ಹಿಂದೆ ಗೃಹ ಸಚಿವರಾಗಿದ್ದಾಗಲೇ ದುರುಪಯೋಗವಾಗಿದ್ದ 84 ಕೋಟಿ ರೂ. ಮರುವಸೂಲಿ ಕಾರ್ಯ ಆರಂಭವಾಗಿತ್ತು. ಈ ಪೈಕಿ 79 ಕೋಟಿ ರೂ. ವಾಪಸ್ ಪಡೆಯಲಾಗಿದ್ದು, ಇನ್ನೂ 5 ಕೋಟಿ ರೂ. ಬಾಕಿ ಇದೆ ಎಂದು ತಿಳಿಸಿದರು.
‘‘ಎಲ್ಲಿಯೂ ನಾಗೇಂದ್ರ ಅವರ ಹೆಸರು ಕೇಳಿಬರಲಿಲ್ಲ. ಸಿಬಿಐನ ದೋಷಾರೋಪಣಾ ಪಟ್ಟಿಯಲ್ಲೂ ಅವರ ಹೆಸರು ಇರಲಿಲ್ಲ. ಅನಾವಶ್ಯಕವಾಗಿ ಆರೋಪ ಮಾಡಿ ಬಿಜೆಪಿಯವರು ನಾಗೇಂದ್ರ ರಾಜೀನಾಮೆ ನೀಡುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವಸ್ತುಸ್ಥಿತಿಯನ್ನು ಜನಸಾಮಾನ್ಯರಿಗೆ ತಿಳಿಸುತ್ತೇವೆ’’ ಎಂದು ಹೇಳಿದರು.
ನಾಗೇಂದ್ರ ಅವರು ಎರಡು ಬಾರಿ ರಾಜೀನಾಮೆ ನೀಡಿರುವುದರಿಂದ ಸರ್ಕಾರಕ್ಕೆ ಮುಜುಗರವಾಗಿರುವುದು ನಿಜ. ಅದಕ್ಕಾಗಿಯೇ ವಿಧಾನಸಭೆಯಲ್ಲಿ ನೋಟಿಸ್ ನೀಡಿ ಚರ್ಚೆಗೆ ಅವಕಾಶ ಕಲ್ಪಿಸುವಂತೆ ವಿರೋಧ ಪಕ್ಷಗಳಿಗೆ ಹಲವು ಬಾರಿ ಹೇಳಿದ್ದೆವು. ಅವರ ಬಳಿ ಇರುವ ಸಾಕ್ಷ್ಯಗಳನ್ನು ಸದನದಲ್ಲಿ ಮಂಡಿಸುವಂತೆ ಸವಾಲು ಹಾಕಿದ್ದೆವು. ಸರ್ಕಾರವೂ ಅದಕ್ಕೆ ಉತ್ತರಿಸಲು ಸಿದ್ಧವಿತ್ತು. ಆದರೆ, ವಿರೋಧ ಪಕ್ಷಗಳು ಅದ್ಯಾವುದನ್ನೂ ಮಾಡದೆ ರಾಜಕೀಯ ಮಾಡುವುದರಲ್ಲೇ ಕಾಲಹರಣ ಮಾಡಿವೆ ಎಂದು ತಿರುಗೇಟು ನೀಡಿದರು. ಮುಂದಿನ ದಿನಗಳಲ್ಲಿ ಈ ವಿಚಾರವನ್ನು ಕಾಂಗ್ರೆಸ್ ಸಮರ್ಥವಾಗಿ ಎದುರಿಸಲಿದೆ ಎಂದು ಪರಮೇಶ್ವರ್ ಹೇಳಿದರು.
