Homeರಾಜ್ಯಪಿಎಫ್‌ ಹಣವೂ ಬಂದಿಲ್ಲ, ನ್ಯಾಯಕ್ಕಾಗಿ ಯಾರೂ ಮಾತನಾಡುತ್ತಿಲ್ಲ : ಮೃತ ಚಂದ್ರಶೇಖರ್‌ ಪತ್ನಿ ಅಳಲು

ಪಿಎಫ್‌ ಹಣವೂ ಬಂದಿಲ್ಲ, ನ್ಯಾಯಕ್ಕಾಗಿ ಯಾರೂ ಮಾತನಾಡುತ್ತಿಲ್ಲ : ಮೃತ ಚಂದ್ರಶೇಖರ್‌ ಪತ್ನಿ ಅಳಲು

ಶಿವಮೊಗ್ಗ, ಆ.29- ‘‘ಪಿಎಫ್‌ ಹಣವೂ ಬಂದಿಲ್ಲ. ನಮ್ಮ ಮನೆಯವರ ಸಾವಿಗೆ ನ್ಯಾಯ ಕೊಡಿಸುವ ಬಗ್ಗೆ ಬಿಜೆಪಿಯವರೂ ಮಾತನಾಡುತ್ತಿಲ್ಲ’’ ಎಂದು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಲೆಕ್ಕ ಪರಿಶೋಧಕರಾಗಿದ್ದ ಮೃತ ಚಂದ್ರಶೇಖರ್‌ ಅವರ ಪತ್ನಿ ಕವಿತಾ ಅಳಲು ತೋಡಿಕೊಂಡಿದ್ದಾರೆ.

ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಅವರು, ತಮ್ಮ ಪತಿಯ ಸಾವಿಗೆ ನ್ಯಾಯ ದೊರಕಬೇಕು ಎಂದು ಅಂದಿನಿಂದಲೂ ಒತ್ತಾಯಿಸುತ್ತಿದ್ದರೂ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘‘ನಮ್ಮ ಮನೆಯವರ ಸಾವಿಗೆ ನ್ಯಾಯ ಬೇಕು ಎಂದು ಅಂದಿನಿಂದಲೂ ಕೇಳುತ್ತಿದ್ದೇನೆ. ಆದರೆ ತಪ್ಪಿತಸ್ಥರಿಗೆ ಈವರೆಗೂ ಶಿಕ್ಷೆಯಾಗಿಲ್ಲ. ಸಚಿವರಿಗೆ ಮಾತ್ರ ಶಿಕ್ಷೆಯಾಗುತ್ತಿದೆ. ಅಧಿಕಾರಿಗಳಿಗೆ ಯಾವುದೇ ಶಿಕ್ಷೆಯಾಗುತ್ತಿಲ್ಲ. ಅಧಿಕಾರಿಗಳು ಆರಾಮಾಗಿ ಹೊರಗಡೆ ಓಡಾಡಿಕೊಂಡಿದ್ದಾರೆ’’ ಎಂದು ಬೇಸರ ವ್ಯಕ್ತಪಡಿಸಿದರು.

‘‘ಪ್ರಕರಣದಲ್ಲಿ ಪರಶುರಾಮ್‌ ಮತ್ತು ಪದ್ಮನಾಭ್‌ ಅವರಿಗೂ ಈವರೆಗೆ ಯಾವುದೇ ಶಿಕ್ಷೆಯಾಗಿಲ್ಲ. ಅಧಿಕಾರಿಗಳಿಗೂ ಶಿಕ್ಷೆಯಾಗಬೇಕು. ನಮ್ಮ ಮನೆಯವರಿಗೆ ತೊಂದರೆ ನೀಡಿದ್ದೇ ಈ ಅಧಿಕಾರಿಗಳು. ಹೀಗಿರುವಾಗ ನಮಗೆ ಎಲ್ಲಿಂದ ನ್ಯಾಯ ಸಿಗುತ್ತದೆ?’’ ಎಂದು ಪ್ರಶ್ನಿಸಿದರು.

ಅಧಿಕಾರಿಗಳು ಕರ್ತವ್ಯ ನಿರ್ವಹಿಸಿಕೊಂಡು ಸಂಬಳ ಪಡೆಯುತ್ತಿದ್ದಾರೆ. ಆದರೆ ತಮ್ಮ ಕುಟುಂಬ ಮಾತ್ರ ಸಂಕಷ್ಟಕ್ಕೆ ಸಿಲುಕಿದೆ. ಈವರೆಗೆ ಪಿಎಫ್‌ ಹಣವೂ ಬಂದಿಲ್ಲ. ತಮ್ಮ ಮಗನಿಗೆ ಉದ್ಯೋಗ ಕೊಡಿಸುವ ಬಗ್ಗೆಯೂ ಯಾರೂ ಮಾತನಾಡುತ್ತಿಲ್ಲ. ವಾಲ್ಮೀಕಿ ನಿಗಮದಿಂದಲೂ ನಮಗೆ ಯಾವುದೇ ಕರೆ ಬಂದಿಲ್ಲ ಎಂದು ಕವಿತಾ ಹೇಳಿದರು. ಸಚಿವ ನಾಗೇಂದ್ರ ಅವರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂಬ ನಂಬಿಕೆ ತಮ್ಮಲ್ಲಿತ್ತು. ಬಡವರ ಹಣವನ್ನು ಹೊರಗೆ ತರಬೇಕು ಎಂಬ ಉದ್ದೇಶದಿಂದಲೇ ತಮ್ಮ ಮನೆಯವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಅವರು ತಿಳಿಸಿದರು.

‘‘ಇಷ್ಟೆಲ್ಲ ನಡೆದರೂ ನಮ್ಮ ಮನೆಯವರ ಸಾವಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ಬಿಜೆಪಿ ಸೇರಿದಂತೆ ಯಾರೂ ಮಾತನಾಡುತ್ತಿಲ್ಲ. ಸಚಿವರಿಗೆ ಮಾತ್ರ ಶಿಕ್ಷೆಯಾಗುತ್ತಿದೆ. ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಂಡು ನಮ್ಮ ಮನೆಯವರ ಸಾವಿಗೆ ನ್ಯಾಯ ಕೊಡಿಸಬೇಕು ಎಂಬುದೇ ನಮ್ಮ ಆಗ್ರಹ’’ ಎಂದು ಕವಿತಾ ಹೇಳಿದರು.

RELATED ARTICLES
spot_img

Latest News