ಬೆಂಗಳೂರು, ನ.9- ಹಲವಾರು ಪ್ರಮುಖ ಘಟನೆಗಳಲ್ಲಿ ಗೃಹ ಸಚಿವಾಲಯದ ಕಾರ್ಯ ವೈಖರಿ ಕುರಿತು ಕಾಂಗ್ರೆಸ್ ಪಕ್ಷದಲ್ಲೇ ತೀವ್ರ ಅಸಮಾಧಾನಗಳು ಕೇಳಿ ಬರುತ್ತಿವೆ. ಮಾಧ್ಯಮಗಳ ಮುಂದೆ ಆರ್ಎಸ್ಎಸ್ ವಿರುದ್ಧ ಅಬ್ಬರಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಇಲಾಖೆಯ ಕಾರ್ಯನಿರ್ವಹಣೆ ವಿಚಾರ ಬಂದಾಗ ಕಾನೂನುಗಳ ನೆಪದಲ್ಲಿ ಮೃದು ಹಿಂದುತ್ವ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳನ್ನು ಪಕ್ಷದ ಹಿರಿಯ ನಾಯಕರೇ ಮಾಡುತ್ತಿದ್ದಾರೆ.
ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಹಲವಾರು ಭರವಸೆಗಳನ್ನು ನೀಡಿತ್ತು. ಅವುಗಳಲ್ಲಿ ಬಹುತೇಕ ಈಡೇರಿಸಲಾಗಿಲ್ಲ. ಮತಾಂತರ ನಿಷೇದ ಕಾಯ್ದೆ, ಗೋ ಹತ್ಯೆ ನಿಯಂತ್ರಣ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಸರ್ಕಾರ ಮರೆತಿದೆ ಎಂಬ ಟೀಕೆಗಳಿವೆ.
2023ರಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳಿಸಲು ಅಲ್ಪ ಸಂಖ್ಯಾತರ ಬೆಂಬಲ ಬಹುಮುಖ್ಯವಾಗಿತ್ತು. ಪ್ರಣಾಳಿಕೆಯಲ್ಲಿ ಭರವಸೆಗಳ ಮೂಲಕ ಅವರಲ್ಲಿ ವಿಶ್ವಾಸ ಮೂಡಿಸಲಾಗಿತ್ತು. ಆದರೆ ಸರ್ಕಾರ ರಚನೆಯಾದ ಬಳಿಕ ಬಿಜೆಪಿ ಅಲ್ಪ ಸಂಖ್ಯಾತರಿಗೆ ಕಿರುಕುಳ ನೀಡುವ ಸಲುವಾಗಿ ರೂಪಿಸಿದ್ದ 2 ಕಾನೂನುಗಳನ್ನು ಕಾಂಗ್ರೆಸ್ ಸರ್ಕಾರವು ಯಥಾವತ್ ಮುಂದುವರೆಸಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಜೊತೆಗೆ ಆರ್ಎಸ್ಎಸ್ ವಿರುದ್ಧ ಟೀಕೆಗಳ ಮೂಲಕ ಅನಗತ್ಯವಾಗಿ ಹಿಂದೂ ಸಮುದಾಯ ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಮೂಲ ಸಿದ್ಧಾಂತ ಗಾಂಧಿ ತತ್ವ. ಇತ್ತೀಚೆಗೆ ಗಾಂಧೀಜಿಯವರ ಕುರಿತಂತೆ ಅವಹೇಳನ ಮಾಡುವ, ಅಪಪ್ರಚಾರ ಮಾಡುವ ಸಂಗತಿಗಳು ಹೆಚ್ಚಾಗಿ ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಪೊಲೀಸರು ಈವರೆಗೂ ಒಂದು ಪ್ರಕರಣವನ್ನೂ ದಾಖಲಿಸಿಲ್ಲ ಎಂಬ ಆಕ್ಷೇಪಗಳಿವೆ.
ಕಾನೂನಿನ ತೊಡಕುಗಳನ್ನು ಮುಂದಿಟ್ಟುಕೊಂಡು ಗಾಂಧೀಜಿ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಬಗ್ಗೆಯೂ ಕಾಂಗ್ರೆಸ್ ಸರ್ಕಾರ ಮೌನವಾಗಿರುವುದು ಸರಿಯಲ್ಲ ಎಂಬ ಆರೋಪಗಳಿವೆೆ. ಗಾಂಧೀಜಿ ವಿರುದ್ಧ ಸುಳ್ಳು ಪ್ರಚಾರ ಮಾಡುವ ನಾಟಕಗಳು ನಿರಂತರವಾಗಿ ನಡೆಯುತ್ತಲೇ ಇದ್ದವು. ಅದನ್ನು ಪೊಲೀಸರು ಮತ್ತು ಗುಪ್ತದಳದ ಅಧಿಕಾರಿಗಳು ಕಂಡೂಕಾಣದಂತಿದ್ದರು.
ಕೊನೆಗೆ ಕೆಪಿಸಿಸಿಯ ಅಧ್ಯಕ್ಷ ಬಿ.ಕೆ.ಹರಿಪ್ರಸಾಸ್ ಅವರು, ಮಧ್ಯ ಪ್ರವೇಶಿಸಿ ತಮ ಪಕ್ಷದ ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಒಂದು ವೇಳೆ ಯಾರೂ ಪ್ರತಿಭಟಿಸದೇ ಇದ್ದರೆ, ನಾನೇ ಹೋರಾಟಕ್ಕಿಳಿಯಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ ಬಳಿಕ, ಯುವ ಕಾಂಗ್ರೆಸ್ಸಿಗರು ರಂಗಮಂದಿರಕ್ಕೆ ಹೋಗಿ ನಾಟಕ ಪ್ರದರ್ಶನಕ್ಕೆ ಅಡ್ಡಿ ಪಡಿಸಿದ್ದರು. ನಾಟಕಕಾರ ಅದ್ದಂಡ ಕರಿಯಪ್ಪ ಅವರಿಗೆ ಮಸಿ ಬಳಿಯಲಾಯಿತು. ಪೊಲೀಸರು ನೋಟಿಸ್ ನೀಡಿ ವಿಚಾರಣೆಯ ಕಾಲ ಕಳೆಯುತ್ತಿದ್ದಾರೆ. ವಿರೋಧ ಪಕ್ಷದವರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಂದಿಟ್ಟುಕೊಂಡು ಗಾಂಧೀಜಿ ವಿರುದ್ಧ ಅಪಪ್ರಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂಬ ಅಸಹನೆಗಳಿವೆ.
ಗೃಹ ಇಲಾಖೆ ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕಿತ್ತು. ರಾಷ್ಟ್ರ ನಾಯಕರ ವಿರುದ್ಧ ತಪ್ಪು ಮಾಹಿತಿ ನೀಡುವವರನ್ನು ಬಂಧಿಸಬೇಕಿತ್ತು ಎಂಬ ಅಸಮಾಧಾನ ಹಿರಿಯ ಕಾಂಗ್ರೆಸ್ ನಾಯಕರಿಗಿದೆ.
ಖುದ್ದು ಬಿ.ಕೆ.ಹರಿಪ್ರಸಾದ್ ಅವರೇ ನಾಟಕಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಜೊತೆಗೆ ಅಪಪ್ರಚಾರ ಮಾಡುತ್ತಿದ್ದ ವ್ಯಕ್ತಿಗಳ ವಿರುದ್ದ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಬಹಿರಂಗ ಹೇಳಿಕೆ ನೀಡಿದ್ದರು. ಆದರೆ ಗೃಹ ಇಲಾಖೆ ಮಾತ್ರ ಯಾವುದಕ್ಕೂ ಜಪ್ಪಯ್ಯ ಎನ್ನುತ್ತಿಲ್ಲ.
ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಪೊಲೀಸರ ತನಿಖೆಗಳು ಎಲ್ಲಾ ದಿಕ್ಕುಗಳಿಂದಲೂ ಟೀಕೆಗೊಳಗಾಗಿವೆ. ದೂರು ನೀಡಿದ್ದ ಸಿದ್ದರಾಮಯ್ಯ ಅವರಿಗೂ ವಿಚಾರಣೆ ಸಮಾಧಾನ ತಂದಿಲ್ಲ. ಆರೋಪ ಮಾಡಿದ್ದ ಕುಮಾರಸ್ವಾಮಿಯವರಂತೂ ನಿಗಿ-ನಿಗಿ ಉರಿಯುತ್ತಿದ್ದಾರೆ. ಸ್ಟಿಂಗ್ ಆಪರೇಷನ್ ನಡೆಸಿದವರಿಗೆ ಬಂಧನದ ಭೀತಿ ಎದುರಾಗಿರುವುದರಿಂದ ಅವರು ಕೂಡ ಸಮಯಕ್ಕಾಗಿ ಕಾಯುತ್ತಿರುವಂತಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇರಳಂನಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡುವಾಗ ಎಂ.ಕಲಬುರಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು 6 ತಿಂಗಳೊಳಗಾಗಿ ಶಿಕ್ಷಿಸುವುದಾಗಿ ಹೇಳಿದ್ದಾರೆ. ಪ್ರಕರಣದ ವಿಚಾರಣೆ 6-7 ವರ್ಷಗಳಿಂದಲೂ ನಡೆಯುತ್ತಲೇ ಇವೆ. ಇನ್ನೂ 80 ಸಾಕ್ಷಿಗಳ ವಿಚಾರಣೆ ಬಾಕಿಯಿದೆ. ಪೊಲೀಸರ ತನಿಖೆ ಮುಗಿದು ದೋಷರೋಪಣಾ ಪಟ್ಟಿ ಸಲ್ಲಿಕೆಯಾಗಿದೆ. ಇನ್ನು ಮುಂದೆ ನ್ಯಾಯಾಲಯದಲ್ಲಿ ಆರೋಪ ಸಾಬೀತು ಪಡಿಸುವುದು ಮಾತ್ರ ಬಾಕಿಯಿದ್ದು, ಪ್ರಕರಣವನ್ನು ಯಾವಾಗ ಇತ್ಯರ್ಥಪಡಿಸಬೇಕು ಎಂಬುದು ನ್ಯಾಯಾಲಯದ ವಿವೇಚನೆಗೆ ಬಿಟ್ಟಿದೆ. ಗೃಹ ಸಚಿವರು 6 ತಿಂಗಳುಗಳ ಗಡುವು ನೀಡುವ ಮೂಲಕ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಎಂಬ ಅಸಮಾಧಾನಗಳಿವೆ.
ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಪೈಕಿ ಗೃಹ ಇಲಾಖೆಗೆ ಸಂಬಂಧಪಟ್ಟಂಥವು ಬಹಳಷ್ಟಿವೆ. ಅವುಗಳ ಕಡೆ ಗಮನ ಹರಿಸುವ ಬದಲಾಗಿ, ಅನಗತ್ಯ ಹೇಳಿಕೆ ಮತ್ತು ವಿವಾದಗಳ ಮೂಲಕ ಗೃಹ ಸಚಿವರು ತಮ ವೈಯಕ್ತಿಕ ವರ್ಚಸ್ಸು ಹೆಚ್ಚಳಕ್ಕೆ ಒತ್ತು ನೀಡುತ್ತಿದ್ದಾರೆ ಎಂಬ ಆಕ್ಷೇಪಗಳಿವೆ. ಗೃಹ ಸಚಿವರು ಎಐಸಿಸಿ ಅಧ್ಯಕ್ಷರ ಪುತ್ರರಾಗಿರುವುದರಿಂದ ಪಕ್ಷದಲ್ಲಿ ಯಾವ ನಾಯಕರೂ ಬಹಿರಂಗವಾಗಿ ಮಾತನಾಡಲಾಗದೆ ಕೈ-ಕೈ ಹಿಸುಕಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
