ಬೆಂಗಳೂರು, ಸೆ.25- ರಾಜ್ಯದ ಪ್ರಮುಖ ಹಳೆಯ ಚಿನ್ನ ಖರೀದಿ ಸಂಸ್ಥೆಗಳಲ್ಲಿ ಒಂದಾದ ಅಟ್ಟಿಕಾ ಗೋಲ್ಡ್ ಕಂಪನಿಗೆ ಸಾಲು ಸಾಲು ತನಿಖಾ ಸಂಸ್ಥೆಗಳ ದಾಳಿಯಿಂದಾಗಿ ಭಾರೀ ಸಂಕಷ್ಟ ಎದುರಾಗಿದೆ.ಅಕ್ರಮ ಹಣಕಾಸು ವರ್ಗಾವಣೆ ಹಾಗೂ ಚಿನ್ನದ ಅಕ್ರಮ ವ್ಯವಹಾರದ ಶಂಕೆಯಡಿ ಜಾರಿ ನಿರ್ದೇಶನಾಲಯ ನಡೆಸಿದ್ದ ಸುದೀರ್ಘ ಪರಿಶೀಲನೆ ಮುಕ್ತಾಯಗೊಂಡ ಬೆನ್ನಲ್ಲೇ, ಇದೀಗ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬೃಹತ್ ದಾಳಿ ನಡೆಸಿದ್ದಾರೆ.
ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಅಟ್ಟಿಕಾ ಗೋಲ್ಡ್ನ ಒಟ್ಟು 19ಕ್ಕೂ ಹೆಚ್ಚು ಕಚೇರಿ, ಶೋರೂಂ ಹಾಗೂ ಮಾಲೀಕರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ಒಟ್ಟಾಗಿ ಕಾರ್ಯಾಚರಣೆ ನಡೆಸಿದ್ದಾರೆ.ಅಟ್ಟಿಕಾ ಗೋಲ್ಡ್ ಸಂಸ್ಥೆಯು ಸಾರ್ವಜನಿಕರಿಂದ ಹಳೆಯ ಚಿನ್ನವನ್ನು ಪಡೆದು ತಕ್ಷಣದ ನಗದು ನೀಡುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಹಲವು ಆರ್ಥಿಕ ಅಕ್ರಮಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಚಿನ್ನದ ಅಕ್ರಮ ಸಾಗಣೆ-ಆರ್ಥಿಕ ವಂಚನೆ
ಕಳವು ಮಾಡಿದ ಹಾಗೂ ಅಕ್ರಮ ಮಾರ್ಗದಲ್ಲಿ ತಂದ ಚಿನ್ನವನ್ನು ಸೂಕ್ತ ದಾಖಲೆಗಳಿಲ್ಲದೆ ಖರೀದಿಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಇತ್ತೀಚೆಗೆ ದಾಳಿ ನಡೆಸಿ, ಪ್ರಮುಖ ದಾಖಲೆಗಳು ಹಾಗೂ ಕಂಪ್ಯೂಟರ್ ಹಾರ್ಡ್ಡಿಸ್ಕ್ಗಳನ್ನು ವಶಕ್ಕೆ ಪಡೆದುಕೊಂಡಿತ್ತು.
ನಗದು ರೂಪದಲ್ಲೇ ಕೋಟ್ಯಂತರ ರೂ. ವ್ಯವಹಾರ ನಡೆಸಿ, ನೈಜ ಆದಾಯವನ್ನು ಮರೆಮಾಚಿ ತೆರಿಗೆ ವಂಚಿಸಲಾಗಿದೆ ಎಂಬ ಅನುಮಾನದ ಮೇರೆಗೆ ಐಟಿ ಇಲಾಖೆ ಈಗ ಅಖಾಡಕ್ಕಿಳಿದಿದೆ.
19 ಸ್ಥಳಗಳಲ್ಲಿ ಇ.ಡಿ. ಶೋಧ
ಇದಕ್ಕೂ ಮುನ್ನ ಇ.ಡಿ. ಅಧಿಕಾರಿಗಳು ಅಟ್ಟಿಕಾ ಗೋಲ್ಡ್ಗೆ ಸಂಬಂಧಿಸಿದ 19ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದರು. ಈ ಬೆಳವಣಿಗೆಯ ನಡುವೆ ಅಟ್ಟಿಕಾ ಗೋಲ್ಡ್ನ ಹಣಕಾಸು ವ್ಯವಹಾರಗಳು ತನಿಖಾ ಸಂಸ್ಥೆಗಳ ಗಮನಕ್ಕೆ ಬಂದಿರುವುದು ಗಮನಾರ್ಹ.
ಸಂಸ್ಥೆಯ ಅಧಿಕೃತ ವೆಬ್ಸೈಟ್ ಪ್ರಕಾರ, ಕಂಪನಿಯು ಬೆಂಗಳೂರಿನಲ್ಲಿ ಹಲವು ಶಾಖೆಗಳನ್ನು ಹೊಂದಿದ್ದು, ದೇಶದ ವಿವಿಧ ಭಾಗಗಳಲ್ಲೂ ಚಿನ್ನ ಖರೀದಿ ವ್ಯವಹಾರ ನಡೆಸುತ್ತಿದೆ.ಅಟ್ಟಿಕಾ ಗೋಲ್ಡ್ಗೆ ಸಂಬಂಧಿಸಿದ ಸರ್ಕಾರಿ ತನಿಖಾ ಬೆಳವಣಿಗೆ ಇದೇ ಮೊದಲಲ್ಲ. 2026ರ ಜೂನ್ನಲ್ಲಿ ಕರ್ನಾಟಕ ಹೈಕೋರ್ಟ್ನಲ್ಲಿ ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಮತ್ತು ಡಿಜಿಜಿಐ ನಡುವೆ ಜಿಎಸ್ಟಿ ಸಂಬಂಧಿತ ಪ್ರಕರಣ ದಾಖಲಾಗಿತ್ತು.
ಕಂಪನಿಗೆ ಸಂಬಂಧಿಸಿದ ತಾತ್ಕಾಲಿಕ ಆಸ್ತಿ/ಬ್ಯಾಂಕ್ ಖಾತೆ ಅಟ್ಯಾಚ್ಮೆಂಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಆ ಹಂತದಲ್ಲಿ ಹಿಂಪಡೆಯಲು ಅನುಮತಿಸಿತ್ತು. ಸೂಕ್ತ ವೇದಿಕೆಯಲ್ಲಿ ಪರಿಹಾರ ಪಡೆಯಲು ಕಂಪನಿಗೆ ಸ್ವಾತಂತ್ರ್ಯ ನೀಡಲಾಗಿತ್ತು.
ಇದೀಗ ಇ.ಡಿ. ನಂತರ ಐಟಿ ಇಲಾಖೆ ಕೂಡ ಕಾರ್ಯಾಚರಣೆ ನಡೆಸಿರುವುದು ಅಟ್ಟಿಕಾ ಗೋಲ್ಡ್ನ ಹಣಕಾಸು ಹಾಗೂ ವ್ಯವಹಾರಿಕ ಚಟುವಟಿಕೆಗಳ ಕುರಿತು ವಿವಿಧ ತನಿಖಾ ಆಯಾಮಗಳು ಸಕ್ರಿಯವಾಗಿರುವುದನ್ನು ತೋರಿಸುತ್ತದೆ.
ದೇಶಾದ್ಯಂತ ಕಾರ್ಯಾಚರಣೆ
ಇದೇ ಸಂದರ್ಭದಲ್ಲಿ ದೇಶಾದ್ಯಂತ ಚಿನ್ನದ ಅಕ್ರಮ ಸಾಗಣೆ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳ ಕಾರ್ಯಾಚರಣೆಯೂ ತೀವ್ರಗೊಂಡಿದೆ. ಸೆಪ್ಟೆಂಬರ್ 10ರಂದು ಡಿಆರ್ಐ ಹಲವು ಕಾರ್ಯಾಚರಣೆಗಳಲ್ಲಿ ಸುಮಾರು 41 ಕೆ.ಜಿ. ವಿದೇಶಿ ಮೂಲದ ಚಿನ್ನ, ಅಂದಾಜು ₹62 ಕೋಟಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡು 24 ಮಂದಿಯನ್ನು ಬಂಧಿಸಿರುವುದಾಗಿ ಕೇಂದ್ರ ಹಣಕಾಸು ಸಚಿವಾಲಯದ ಪಿಐಬಿ ತಿಳಿಸಿತ್ತು.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ವಿಮಾನದೊಳಗೆ ಅಕ್ರಮವಾಗಿ ಅಡಗಿಸಲಾಗಿದ್ದ ಚಿನ್ನವನ್ನು ಹೊರತೆಗೆದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾಗಿ ಹೇಳಲಾಗಿತ್ತು.
ಇದಾದ ಕೆಲವೇ ದಿನಗಳಲ್ಲಿ ಸೆಪ್ಟೆಂಬರ್ 20-21ರಂದು ಭಾರತ-ಬಾಂಗ್ಲಾದೇಶ ಗಡಿ ಮಾರ್ಗದ ಮೂಲಕ ಸಾಗಿಸಲಾಗುತ್ತಿದ್ದ ಸುಮಾರು 12 ಕೆ.ಜಿ. ವಿದೇಶಿ ಮೂಲದ ಚಿನ್ನವನ್ನು, ಸುಮಾರು ₹17 ಕೋಟಿ ಮೌಲ್ಯದ ಚಿನ್ನವನ್ನು ಡಿಆರ್ಐ ಮತ್ತು ಬಿಎಸ್ಎಫ್ ವಶಪಡಿಸಿಕೊಂಡಿದ್ದವು.
ಅಟ್ಟಿಕಾ ಗೋಲ್ಡ್ ಪ್ರಕರಣದಲ್ಲಿ ಇದೀಗ ಇ.ಡಿ. ತನಿಖೆ, ಆದಾಯ ತೆರಿಗೆ ಇಲಾಖೆಯ ಪರಿಶೀಲನೆ ಹಾಗೂ ಹಿಂದೆ ನಡೆದ ಜಿಎಸ್ಟಿ ಸಂಬಂಧಿತ ಕಾನೂನು ಬೆಳವಣಿಗೆಗಳು ಪ್ರತ್ಯೇಕ ಆಯಾಮಗಳನ್ನು ಹೊಂದಿವೆ. ಇವುಗಳ ನಡುವೆ ಪರಸ್ಪರ ನೇರ ಸಂಬಂಧವಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಒಂದರ ಬೆನ್ನಲ್ಲೇ ಮತ್ತೊಂದು ಕೇಂದ್ರ ತನಿಖಾ ಸಂಸ್ಥೆ ಪರಿಶೀಲನೆ ನಡೆಸಿರುವುದು ಪ್ರಕರಣದ ಮುಂದಿನ ಬೆಳವಣಿಗೆಗಳತ್ತ ಗಮನ ಸೆಳೆದಿದೆ.
