Homeರಾಜ್ಯಸಚಿವರಿಲ್ಲದೆ ಸೊರಗುತ್ತಿದೆ ಶಿಕ್ಷಣ ಇಲಾಖೆ

ಸಚಿವರಿಲ್ಲದೆ ಸೊರಗುತ್ತಿದೆ ಶಿಕ್ಷಣ ಇಲಾಖೆ

Education Department is failing without a minister

ಬೆಂಗಳೂರು, ಜೂ. 24- ಶೈಕ್ಷಣಿಕ ವರ್ಷ ಆರಂಭಗೊಂಡರೂ ರಾಜ್ಯದಲ್ಲಿ ಶಿಕ್ಷಣ ಸಚಿವರುಗಳಿಲ್ಲದೇ ವ್ಯಾಸಂಗ ಸೊರಗುವಂತಾಗಿದೆ. ರಾಜಕೀಯ ಕಾರಣಗಳಿಗಾಗಿ ಸಚಿವ ಸಂಪುಟ ಪೂರ್ಣ ಪ್ರಮಾಣದಲ್ಲಿ ರಚನೆಯಾಗಿಲ್ಲ. ಅದರಲ್ಲೂ ಪ್ರಮುಖವಾಗಿ ಕೃಷಿ ಮತ್ತು ಶಿಕ್ಷಣ ಇಲಾಖೆಗೆ ಪ್ರತ್ಯೇಕ ಸಚಿವರಿಲ್ಲದೇ, ಈ ಪ್ರಮುಖ ಖಾತೆಗಳು ಮುಖ್ಯಮಂತ್ರಿಯವರ ಬಳಿಯೇ ಉಳಿದಿವೆ.

ನೈರುತ್ಯ ಮುಂಗಾರು ಆರಂಭವಾಗಿ ಕೃಷಿ ವರ್ಷ ಶುರುವಾಗಿದೆ. ಜೂನ್‌ನಿಂದ ಶೈಕ್ಷಣಿಕ ವರ್ಷ ಕೂಡ ಆರಂಭಗೊಂಡಿದೆ. ಶಾಲಾ, ಕಾಲೇಜುಗಳಲ್ಲಿ ಪ್ರವೇಶ ಹಾಗೂ ಇತರೆ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ. ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಕಾಲೇಜು ಶಿಕ್ಷಣಕ್ಕೆ ಪ್ರತ್ಯೇಕವಾದ ಸಚಿವರ ಅಗತ್ಯತೆ ಇತ್ತು.

ಶಿಕ್ಷಣದಲ್ಲಿ ಮಹತ್ವದ ಸುಧಾರಣೆ ಮಾಡಲು ಹಿಂದಿನ ಸಿದ್ದರಾಮಯ್ಯ ಸರ್ಕಾರ, ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪದೇ, ಕರ್ನಾಟಕ ತನ್ನದೇ ಆದ ಶಿಕ್ಷಣ ನೀತಿ ರೂಪಿಸಲು ಮುಂದಾಗಿದೆ. ಅದಕ್ಕಾಗಿ ತಜ್ಞರ ಸಮಿತಿಯನ್ನು ರಚಿಸಿ ವರದಿ ಪಡೆಯುವ ಪ್ರಯತ್ನಗಳಾಗಿದ್ದವು. ಜೊತೆಗೆ ರಾಜ್ಯಾದ್ಯಂತ ಸುಮಾರು 800ಕ್ಕೂ ಹೆಚ್ಚು ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲು ಕ್ರಿಯಾ ಯೋಜನೆ ಸಿದ್ಧವಾಗಿದೆ. ಈ ಹಂತದಲ್ಲಿ ಇಲಾಖೆಗೆ ಪ್ರತ್ಯೇಕವಾದ ಸಚಿವರ ಅಗತ್ಯ ಹೆಚ್ಚಿತ್ತು.

ಶಾಲಾ, ಕಾಲೇಜುಗಳ ಪ್ರವೇಶದಲ್ಲಿ ಸರ್ಕಾರಿ ಕಾಲೇಜುಗಳಿಗೆ ವಿದ್ಯಾರ್ಥಿಗಳ ಕೊರತೆಯಾದರೆ, ಖಾಸಗಿ ಶಾಲೆಗಳಲ್ಲಿ ಅಧಿಕವಾದ ಶುಲ್ಕ, ಅನಧಿಕೃತವಾದ ಡೊನೇಷನ್‌ ಹಾವಳಿಯಿಂದ ಪೋಷಕರು ಹೈರಾಣಾಗುತ್ತಿದ್ದಾರೆ. ಸಚಿವರಿಲ್ಲದ ಕಾರಣ ಅಧಿಕಾರಿಗಳು ತಮ ವ್ಯಾಪ್ತಿಯಲ್ಲಷ್ಟೇ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಕೆಲವು ವಿಚಾರಗಳಲ್ಲಿ ಜನ ಪ್ರಾತಿನಿಧ್ಯದ ಅಗತ್ಯ ತೀವ್ರವಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈ ಕೊರತೆ ಎದ್ದು ಕಾಣುತ್ತಿದೆ.

ಶಾಲಾ ಶಿಕ್ಷಣ ವ್ಯಾಪ್ತಿಯಲ್ಲಿ 41 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳು ಮತ್ತು ಸಾವಿರಾರು ಪ್ರೌಢ ಶಾಲೆಗಳಿವೆ. 1,78,935 ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ರಾಜ್ಯದಲ್ಲಿ 1.33 ಲಕ್ಷ ಶಿಕ್ಷಕರು ಕೆಲಸ ಮಾಡುತ್ತಿದ್ದು, 45,590 ಹುದ್ದೆಗಳು ಖಾಲಿ ಇವೆ. 51 ಸಾವಿರ ಅತಿಥಿ ಶಿಕ್ಷಕರನ್ನು 2026-27ನೇ ಸಾಲಿಗೆ ನೇಮಿಸಿಕೊಳ್ಳಲು ರಾಜ್ಯ ಸರ್ಕಾರ ಅನುಮತಿಸಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳಲ್ಲಿ 79 ಸಾವಿರಕ್ಕೂ ಹೆಚ್ಚು ಉನ್ನತ ಶಿಕ್ಷಣದಲ್ಲಿ 13,600 ಬೋಧಕ ಹಾಗೂ ಬೋಧಕೇತರ ಹುದ್ದೆಗಳು ಖಾಲಿ ಇವೆ. ರಾಜ್ಯ ಸರ್ಕಾರ 15 ಸಾವಿರ ಶಿಕ್ಷಕರ ನೇಮಕಾತಿಗೆ ಮುಂದಾಗಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಣ ಸಚಿವರಿಲ್ಲದೇ ಇರುವುದು ಭಾರೀ ಕೊರತೆಯಾಗಿ ಕಾಣಿಸುತ್ತಿದೆ.

ಪಠ್ಯಪುಸ್ತಕ, ಶೂ, ಸಾಕ್ಸ್ , ಸಮವಸ್ತ್ರ ವಿತರಣೆಯಾಗಬೇಕು. ಬಿಸಿಯೂಟ ಯೋಜನೆ ಕ್ರಮ ಬದ್ಧಗೊಳ್ಳಬೇಕು. ರಾಜ್ಯ ಶಿಕ್ಷಣ ನೀತಿಯ ಪ್ರಕಾರ ಪಠ್ಯಕ್ರಮ ಬದಲಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಮೇಲ್ಛಾವಣಿ ಕುಸಿದು ಕೆಲವೆಡೆ ಅವಘಡಗಳಾಗಿವೆ. ಶಾಲೆಗಳಿಗೆ ಕಟ್ಟಡ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಗಂಭೀರವಾಗಿದೆ. ಅವುಗಳತ್ತ ಗಮನ ಹರಿಸಬೇಕಿತ್ತು.

ಈ ಹಿಂದೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾಗಿದ್ದ ಮಧು ಬಂಗಾರಪ್ಪ ಅವರು ಮೂರು ಹಂತದ ಪರೀಕ್ಷೆ ವ್ಯವಸ್ಥೆಗಳನ್ನು ಜಾರಿಗೆ ತಂದು ರಾಷ್ಟ್ರ ಮಟ್ಟದಲ್ಲಿ ಮಾದರಿ ಎನಿಸಿಕೊಂಡಿದ್ದರು.
ಕೆಪಿಎಸ್‌‍ ಶಾಲೆಗಳಿಗೆ ಸಿಎಸ್‌‍ಆರ್‌ ನಿಧಿ ಬಳಸಿ ಅಭಿವೃದ್ಧಿ ಪಡಿಸಲು ಸಾಕಷ್ಟು ಚರ್ಚೆಗಳಾಗಿದ್ದವು. ಶಿವಮೊಗ್ಗದಲ್ಲಿ ಅಧಿಕೃತವಾಗಿ ಕಾರ್ಯಕ್ರಮ ಉದ್ಘಾಟನೆಯಾಗಬೇಕಿತ್ತು. ಅಷ್ಟರಲ್ಲಿ ನಾಯಕತ್ವ ಬದಲಾವಣೆಯಾಗಿ ಸರ್ಕಾರವೂ ಬದಲಾಯಿತು. ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲೇ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧುಬಂಗಾರಪ್ಪ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಖಾತೆ ನಿರ್ವಹಣೆಗೆ ಅವಕಾಶ ಮಾಡಿಕೊಡಬಹುದು ಎಂಬ ಅಂದಾಜುಗಳಿದ್ದವು. ಆದರೆ ಲೋಕೋಪಯೋಗಿ, ಬೃಹತ್‌ ಕೈಗಾರಿಕೆಯಂತಹ ಖಾತೆಗಳಿಗೆ ಹಿಂದಿನ ಸಚಿವರನ್ನೇ ಮುಂದುವರಿಸಲಾಗಿದೆ. ಶಿಕ್ಷಣ, ಕೃಷಿಯಂತಹ ಖಾತೆಗಳನ್ನು ಕಡೆಗಣಿಸುವುದು ಚರ್ಚೆಗೆ ಗ್ರಾಸವಾಗಿದೆ.

ಎರಡನೇ ಹಂತ ಸಂಪುಟ ವಿಸ್ತರಣೆಯಾಗಬಹುದು. ಶಿಕ್ಷಣ ಮತ್ತು ಕೃಷಿಗೆ ಸಚಿವರ ನೇಮಕವಾಗಬಹುದು ಎಂಬ ನಿರೀಕ್ಷೆಗಳು ಇನ್ನೂ ಈಡೇರಿಲ್ಲ. ಹೊಸ ಸರ್ಕಾರ ರಚನೆಯಾಗಿ ತಿಂಗಳು ಸಮೀಪಿಸಲಾರಂಭಿಸಿವೆ. ಸಂಪುಟ ವಿಸ್ತರಣೆಯೂ ನಡೆದಿಲ್ಲ, ಪ್ರಮುಖ ಖಾತೆಗಳಿಗೆ ಸಚಿವರಿಲ್ಲದೇ ಕೆಲಸ ಕಾರ್ಯಗಳು ಕುಂಠಿತವಾಗುತ್ತಿರುವುದು ಕಂಡು ಬರುತ್ತಿದೆ.

RELATED ARTICLES

Latest News