ಚಿಕ್ಕಬಳ್ಳಾಪುರ,ಆ.10- ತಾಲ್ಲೂಕಿನ ನಂದಿಗಿರಿಧಾಮದಲ್ಲಿ ನಡೆದ ಮಾನ್ಸೂನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುವೊಬ್ಬರು ಓಡುತ್ತಿರುವಾಗಲೇ ಕುಸಿದುಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.ಪಂಜಾಬ್ ಮೂಲದ ಅಮನ್‌ದೀಪ್‌ಸಿಂಗ್ ಜಗಡೆ (31) ಮೃತಪಟ್ಟ ಕ್ರೀಡಾಪಟು.
ಇವರು ಬೆಂಗಳೂರಿನ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ನಂದಿಗಿರಿಧಾಮದಲ್ಲಿ ಆಯೋಜಿಸಿದ್ದ ಮಾನ್ಸೂನ್ ಮ್ಯಾರಥಾನ್‌ನಲ್ಲಿ ಸುಮಾರು 4,500 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಪೈಕಿ ಅಮನ್‌ದೀಪ್‌ಸಿಂಗ್ ಅವರು 21 ಕಿ.ಮೀ. ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದರು.
ಸುಸ್ಥಿರ ಸಮಾಜ, ಆರೋಗ್ಯಕರ ದೇಹ ಹಾಗೂ ಯುವಕರು ಯಾವುದೇ ಮಾದಕ ವ್ಯಸನಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ನಂದಿಹಿಲ್ಸ್ ಮಾನ್ಸೂನ್ ಮ್ಯಾರಥಾನ್ ಓಟ ಆಯೋಜಿಸಲಾಗಿತ್ತು. ನಂದಿಬೆಟ್ಟದ ಅರ್ಧದಷ್ಟು ಓಟವನ್ನು ಪೂರ್ಣಗೊಳಿಸಿದ್ದ ಅಮನ್‌ದೀಪ್ ಏಕಾಏಕಿ ಕುಸಿದುಬಿದ್ದಿದ್ದಾರೆ.
ಕೂಡಲೇ ಅವರನ್ನು ಮುದ್ದೇನಹಳ್ಳಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತಾದರೂ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಪ್ರಾಥಮಿಕವಾಗಿ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದರೂ ಸಹ ಸಾವಿಗೆ ನಿಖರ ಕಾರಣ ತನಿಖೆಯಿಂದಷ್ಟೇ ಗೊತ್ತಾಗಲಿದೆ.
ಮ್ಯಾರಥಾನ್‌ಗೂ ಮುನ್ನ ಅಮನ್‌ದೀಪ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದೇವರು ನನ್ನ ಜೊತೆ ಇದ್ದಾನೆ ಎಂದು ಬರೆದುಕೊಂಡಿದ್ದರಂತೆ ಎನ್ನಲಾಗಿದೆ. ಇದೀಗ ಮ್ಯಾರಥಾನ್ ವೇಳೆ ಸಂಭವಿಸಿದ ಈ ದುರಂತ ಸ್ನೇಹಿತರ ವಲಯದಲ್ಲಿ ದಿಗ್ಭ್ರಾಂತ ಮೂಡಿಸಿದೆ.ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
