ಬೆಂಗಳೂರು, ಜೂ. 2- ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದ ವೇಳೆಯಲ್ಲಿ ಉತ್ತಮ ಆಡಳಿತಕ್ಕೆ ಮಾರ್ಗದರ್ಶನ ನೀಡಿದ್ದಾರೆ. ನಾನು ಅವರಿಗೆ ಧನ್ಯವಾದ ಹೇಳಿ ಬಂದಿದ್ದೇನೆ ಎಂದು ಮಾಜಿ ಸಚಿವ ಈಶ್ವರ್ ಖಂಡ್ರೆ ಈ ರೀತಿ ಹೇಳುವ ಮೂಲಕ ತಾವು ಸಂಪುಟ ಸೇರುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಉತ್ತಮ ಮತ್ತು ಸಮನ್ವಯ ಸಂಪುಟ ರಚನೆಯಾಗಬೇಕೆಂಬುದು ಜನರ ಆಶಯ. ಈ ವಿಚಾರವಾಗಿ ವರಿಷ್ಠರು ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಸಂಪುಟಕ್ಕೆ ಯಾರು ಸೇರುತ್ತಾರೆ? ಯಾರನ್ನು ಕೈ ಬಿಡಲಾಗುತ್ತದೆ ಎಂಬುದು ನನಗೆ ಮಾಹಿತಿ ಇಲ್ಲ. ದೆಹಲಿಯಲ್ಲಿ ಪಕ್ಷದ ವರಿಷ್ಠ ನಾಯಕರನ್ನು ತಾವು ಭೇಟಿ ಮಾಡಿದ ವೇಳೆ ಸೂಕ್ತ ಮಾರ್ಗದರ್ಶನ ಮಾಡಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಸಚಿವ ಸ್ಥಾನ ಎರಡನ್ನೂ ನೀಡುವಂತೆ ಒತ್ತಡ ಹಾಕಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ತಮಗೆ ಅರಣ್ಯ ಮತ್ತು ಜೀವಶಾಸ್ತ್ರ ಪರಿಸರ ಇಲಾಖೆಯ ಜವಾಬ್ದಾರಿ ನೀಡಲಾಗಿತ್ತು. ಅದನ್ನು ದಕ್ಷತೆಯಿಂದ ನಿಭಾಯಿಸಿದ್ದೇನೆ. ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದಿದೆ. ಮುಂದೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿರ್ವಹಣೆ ಮಾಡುವುದಾಗಿ ಹೇಳಿದರು.
ಲಿಂಗಾಯತ ಸಮುದಾಯ ಜಾತ್ಯತೀತ ಸಿದ್ಧಾಂತದಲ್ಲೇ ನಂಬಿಕೆ ಇಟ್ಟಿದೆ. ಸಮಪಾಲು-ಸಮಬಾಳು ನಮ ಆಶಯ. ಸರ್ಕಾರದಲ್ಲಿ ಎಲ್ಲಾ ಸಮುದಾಯಗಳಿಗೂ ಸೂಕ್ತ ಪ್ರಾತಿನಿದ್ಯ ದೊರೆಯಬೇಕು. ಹಾಗೆಯೇ ವೀರಶೈವ ಲಿಂಗಾಯತ ಸಮುದಾಯಕ್ಕೂ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.
