ಚಿಕ್ಕಮಗಳೂರು, ಅ.25- ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾಗೆ ಉಮ್ರಾ ಯಾತ್ರೆಗೆ ತೆರಳಿರುವ ಚಿಕ್ಕಮಗಳೂರು ಸೇರಿದಂತೆ ಕರಾವಳಿ ಭಾಗದ ಕನ್ನಡಿಗರು ವಿಮಾನಗಳ ಸಂಚಾರ ವ್ಯತ್ಯಯದಿಂದ ತವರಿಗೆ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚಿಕ್ಕಮಗಳೂರಿನ ಉದ್ಯಮಿ ಅಪ್ಪರ್ ಹಿಂದೂಸ್ಥಾನಿ ಅವರು ಕೂಡ ಸೌದಿಯಲ್ಲಿ ಸಿಲುಕಿದ್ದು, ಯಾತ್ರಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ, ಸಂಕಷ್ಟದಲ್ಲಿರುವವರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುರ್ತಾಗಿ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಈ ನಡುವೆ, ಹಜ್ ಯಾತ್ರಿಕರ ವಿಮಾನ ಪ್ರಯಾಣ ವಿಳಂಬದಿಂದ ಉಂಟಾಗಿರುವ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ವಿಮಾನಗಳ ಪ್ರಯಾಣ ಮುಂದೂಡಿಕೆಯಿಂದ ಯಾತ್ರಿಕರು ವಸತಿ, ಊಟ ಸೇರಿದಂತೆ ಮೂಲಸೌಕರ್ಯಗಳ ಸಮಸ್ಯೆ ಎದುರಿಸುತ್ತಿದ್ದಾರೆ. ದೆಹಲಿಯಲ್ಲಿ ಯಾತ್ರಿಕರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಹಜ್ ಸಮಿತಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಸಹಾಯವಾಣಿ ಸಂಖ್ಯೆಗಳನ್ನೂ ಬಿಡುಗಡೆ ಮಾಡಿದ್ದಾರೆ.
ವಿಮಾನಯಾನ ಸಂಸ್ಥೆಗಳು ಟಿಕೆಟ್ ಕಾಯ್ದಿರಿಸಿದ ಬಳಿಕ ಪ್ರಯಾಣ ಮುಂದೂಡುತ್ತಿರುವುದರಿಂದ ಅನಿಶ್ಚಿತತೆ ಎದುರಾಗಿದೆ. ಸಮಸ್ಯೆ ಶೀಘ್ರ ಬಗೆಹರಿಯದಿದ್ದರೆ ಸುಪ್ರೀಂಕೋರ್ಟ್ ಮೊರೆ ಹೋಗುವ ಚಿಂತನೆಯೂ ಇದೆ. ವಿಳಂಬದಿಂದ ಉಂಟಾದ ನಷ್ಟಕ್ಕೆ ವಿಮಾನಯಾನ ಸಂಸ್ಥೆಗಳು ಪರಿಹಾರ ನೀಡಬೇಕೆಂಬ ಬೇಡಿಕೆಯನ್ನೂ ಮುಂದಿಡಲಾಗಿದೆ.
ಸಹಾಯವಾಣಿ: 9483503132, 7899707775.
