ಬೆಂಗಳೂರು, ಆ.17- ಪಿಜಿ ಹಾಗೂ ಹಾಸ್ಟೆಲ್ಗಳಲ್ಲಿ ಕಳಪೆ ಆಹಾರ ಪೂರೈಸುವುದು ಕಂಡುಬಂದರೆ ಯಾವುದೇ ಕ್ಷಮೆ ಇರುವುದಿಲ್ಲ. ಖಾಸಗಿ ಹಾಸ್ಟೆಲ್ಗಳಲ್ಲೂ ಆಹಾರ ಸುರಕ್ಷತಾ ತಪಾಸಣೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.
ಹೋಟೆಲ್ಗಳ ಮೇಲೆ ದಾಳಿ ನಡೆಸಿ ಕರ್ತವ್ಯ ಪ್ರಜ್ಞೆ ಮೆರೆದ ಆಹಾರ ಸುರಕ್ಷತಾ ಅಧಿಕಾರಿಗಳನ್ನು ಆರೋಗ್ಯ ಸೌಧದಲ್ಲಿ ಸನ್ಮಾನಿಸಲಾಯಿತು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪಿಜಿಗಳಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರಕ್ಕೆ ಆದ್ಯತೆ ನೀಡಬೇಕು. ಯುವಕರು ಮತ್ತು ವಿದ್ಯಾರ್ಥಿಗಳ ಪರಿಸ್ಥಿತಿಯ ಲಾಭ ಪಡೆದು ಹಣ ಮಾಡಬಾರದು ಎಂದು ಪಿಜಿ ಮಾಲೀಕರಿಗೆ ಸೂಚಿಸಿದರು.
ಹೋಟೆಲ್ಗಳಲ್ಲಿ ಆಹಾರ ತಯಾರಿಸುವ ಸ್ಥಳ ಹಾಗೂ ಕಚ್ಚಾ ವಸ್ತುಗಳು ಎಲ್ಲಿಂದ ಪೂರೈಕೆಯಾಗುತ್ತವೆ ಎಂಬುದರ ಕುರಿತು ತಪಾಸಣೆ ನಡೆಸಲಾಗಿದೆ. ರಾಜ್ಯದಲ್ಲಿ 30 ತಂಡಗಳನ್ನು ರಚಿಸಿ 60ಕ್ಕೂ ಹೆಚ್ಚು ತ್ರೀ-ಸ್ಟಾರ್, ಫೈವ್-ಸ್ಟಾರ್ ಹೋಟೆಲ್ಗಳು, ಎಂಟು ವೇರ್ಹೌಸ್ಗಳು ಹಾಗೂ ನಾಲ್ಕು ಅಂತಾರಾಷ್ಟ್ರೀಯ ರೆಸ್ಟೋರೆಂಟ್ಗಳಲ್ಲಿ ತಪಾಸಣೆ ನಡೆಸಲಾಗಿದೆ. 30 ಆಹಾರ ಉದ್ಯಮಿಗಳಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.
5 ಲಕ್ಷದವರೆಗೆ ದಂಡ
ಕಳಪೆ ಆಹಾರ ಪೂರೈಸುತ್ತಿರುವುದು ಪತ್ತೆಯಾದ ಹೋಟೆಲ್ಗಳ ವಿರುದ್ಧ ನೋಟಿಸ್ ನೀಡುವುದರ ಜತೆಗೆ 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕ್ಷಮೆ ಇರುವುದಿಲ್ಲ ಎಂದು ಖಾದರ್ ಹೇಳಿದರು.
ಪಿಜಿ ಹಾಗೂ ಖಾಸಗಿ ಹಾಸ್ಟೆಲ್ಗಳ ಜತೆಗೆ ಬಸ್ ನಿಲ್ದಾಣಗಳಲ್ಲಿನ ಹೋಟೆಲ್ಗಳು, ಮದುವೆ ಮನೆಗಳು ಹಾಗೂ ರೈಲ್ವೆ ಕ್ಯಾಂಟೀನ್ಗಳಲ್ಲೂ ತಪಾಸಣೆ ನಡೆಸಲಾಗುವುದು. ವಿಮಾನಗಳಲ್ಲಿ ಪ್ರಯಾಣಿಕರಿಗೆ ನೀಡುವ ಆಹಾರದ ಗುಣಮಟ್ಟವನ್ನೂ ಪರಿಶೀಲಿಸಲಾಗುವುದು. ಇದಕ್ಕಾಗಿ ರಾಷ್ಟ್ರಮಟ್ಟದ ತಂಡ ರಚಿಸುವ ಚಿಂತನೆ ಇದೆ ಎಂದು ಅವರು ಹೇಳಿದರು.
ವಿದೇಶಿ ಕಂಪನಿಗಳ ಚಾಕೊಲೇಟ್ಗಳಲ್ಲಿ ಸಕ್ಕರೆ ಪ್ರಮಾಣ ಸೇರಿದಂತೆ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಕೇಂದ್ರ ಆಹಾರ ಸುರಕ್ಷತಾ ಕಾಯ್ದೆಯಲ್ಲಿ ಅಗತ್ಯ ಬದಲಾವಣೆ ಮಾಡುವಂತೆ ಕೇಂದ್ರ ಆಹಾರ ಸಚಿವರಿಗೆ ಮಾಹಿತಿ ನೀಡಲಾಗುವುದು. ಇತರ ದೇಶಗಳಲ್ಲಿ ಲಭ್ಯವಿರುವ ಗುಣಮಟ್ಟದ ಉತ್ಪನ್ನಗಳೇ ಭಾರತದಲ್ಲೂ ಲಭ್ಯವಾಗಬೇಕು. ಈ ಕುರಿತು ಅಂತಾರಾಷ್ಟ್ರೀಯ ಆಲ್ ಇಂಡಿಯಾ ಫುಡ್ ಸೇಫ್ಟಿ ಕಾನ್ಕ್ಲೇವ್ ಆಯೋಜಿಸಲಾಗುವುದು ಎಂದು ಸಚಿವರು ತಿಳಿಸಿದರು.
ಹೋಟೆಲ್, ಮೆಡಿಕಲ್ ಶಾಪ್ಗಳ ಮುಂದೆ ಕ್ಯೂಆರ್ ಕೋಡ್
ಹೋಟೆಲ್ಗಳು ಹಾಗೂ ಮೆಡಿಕಲ್ ಶಾಪ್ಗಳಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆ ಮತ್ತು ದೂರುಗಳನ್ನು ಸುಲಭವಾಗಿ ದಾಖಲಿಸಲು ಪ್ರತಿ ಹೋಟೆಲ್ ಹಾಗೂ ಮೆಡಿಕಲ್ ಶಾಪ್ ಮುಂದೆ ಕ್ಯೂಆರ್ ಕೋಡ್ ಅಳವಡಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೋಟೆಲ್ಗಳಿಗೆ ಸಂಬಂಧಿಸಿದ ದೂರುಗಳಿಗಾಗಿ ಟೋಲ್ಫ್ರೀ ಸಂಖ್ಯೆಯನ್ನೂ ಬಿಡುಗಡೆ ಮಾಡಲಾಗುವುದು. ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ವತಿಯಿಂದ ಕ್ಯೂಆರ್ ಕೋಡ್ ಬಿಡುಗಡೆ ಮಾಡಲಾಗಿದೆ.

ಪಿಜಿಗಳಲ್ಲಿ ಅಡುಗೆ ಹಾಗೂ ಸ್ವಚ್ಛತೆಗೆ ಸಂಬಂಧಿಸಿದಂತೆ ಪ್ರತ್ಯೇಕ ಮಾರ್ಗಸೂಚಿಗಳನ್ನು ರೂಪಿಸಲಾಗುವುದು. ಹೋಟೆಲ್ಗಳ ಅಡುಗೆ ಕೋಣೆಗಳಲ್ಲಿ ಸಿಸಿಟಿವಿ ಕಡ್ಡಾಯಗೊಳಿಸುವ ಬಗ್ಗೆಯೂ ಶೀಘ್ರದಲ್ಲೇ ಸೂಚನೆ ನೀಡಲಾಗುವುದು ಎಂದು ಸಚಿವರು ಹೇಳಿದರು.
ತಪಾಸಣೆ ವೇಳೆ ವಶಪಡಿಸಿಕೊಂಡ ವಸ್ತುಗಳು
- ತಪ್ಪು ಲೇಬಲ್ ಹೊಂದಿದ್ದ ಮಟನ್/ಚಿಕನ್ – 378 ಕೆಜಿ
- ಅವಧಿ ಮೀರಿದ ಮಾಂಸ – 51 ಕೆಜಿ
- ಅವಧಿ ಮೀರಿದ ಮೀನು – 203 ಕೆಜಿ
- ಮಾಂಸಾಹಾರದೊಂದಿಗೆ ಮಿಶ್ರಣವಾಗಿದ್ದ ಸಸ್ಯಾಹಾರ – 200 ಕೆಜಿ
- ಹಾಳಾಗಿದ್ದ ತರಕಾರಿ – 76 ಕೆಜಿ
- ಅವಧಿ ಮೀರಿದ ಹಾಲು ಮತ್ತು ಮೊಸರು – 45 ಲೀಟರ್
- ಬೇಕರಿ ಉತ್ಪನ್ನಗಳು – 12 ಕೆಜಿ
- ಬಳಸಿದ ಅಡುಗೆ ಎಣ್ಣೆ – 49 ಲೀಟರ್
