ಬೆಂಗಳೂರು, ಜ.31-ಕಳೆದ ಎರಡು ದಿನಗಳಿಂದ ಏರುಗತಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ನಾಗಾಲೋಟದಲ್ಲಿ ಏರಿಕೆಯಾಗುತ್ತಿದ್ದ ಬೆಳ್ಳಿದರವು ನಿನ್ನೆಯಿಂದ ಇಳಿಕೆಯಾಗುತ್ತಿದ್ದು, ಇಂದು ಪ್ರತಿ ಕೆ.ಜಿ.ಗೆ 45 ಸಾವಿರ ರೂ. ನಷ್ಟು ಭಾರಿ ಕುಸಿತವಾಗಿದೆ. ಇದರಿಂದ ಬೆಳ್ಳಿದರ ಮೂರುವರೆ ಲಕ್ಷರೂ.ಗೆ ಇಳಿಕೆಯಾಗಿದೆ. ಪ್ರಸ್ತುತ ಪ್ರತಿ ಗ್ರಾಂ ಬೆಳ್ಳಿಯು 45 ರೂ.ನಷ್ಟು ಇಳಿಕೆಯಾಗಿ ಪ್ರಸ್ತುತ 350 ರೂ. ಇದೆ.
ಇಂದು 24 ಕ್ಯಾರೆಟ್‌ನ ಚಿನ್ನವು ಪ್ರತಿ ಗ್ರಾಂಗೆ 862 ರೂ. ನಷ್ಟು ಇಳಿಕೆಯಾಗಿದ್ದು, 16058 ರೂ.ಗೆ ಕುಸಿದೆ. 22 ಕ್ಯಾರೆಟ್‌ನ ಚಿನ್ನವು ಪ್ರತಿ ಗ್ರಾಂಗೆ 790 ರೂ. ಇಳಿಕೆಯಾಗಿದ್ದು, ಪ್ರಸ್ತುತ 14,720 ರೂ. ಇದೆ. 18 ಕ್ಯಾರೆಟ್‌ನ ಆಭರಣ ಚಿನ್ನವು ಪ್ರತಿ ಗ್ರಾಂಗೆ 646 ರೂ. ನಷ್ಟು ಕಡಿಮೆಯಾಗಿ 12,044 ರೂ. ನಷ್ಟಾಗಿದೆ.
ನಿನ್ನೆ 24 ಕ್ಯಾರೆಟ್‌ನ ಚಿನ್ನವು ಪ್ರತಿ ಗ್ರಾಂಗೆ 965 ರೂ. ನಷ್ಟು, 22 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 865 ರೂ. ನಷ್ಟು ಇಳಿಕೆಯಾಗಿತ್ತು. ಒಂದು ವರ್ಷದಲ್ಲಿ 24 ಕ್ಯಾರೆಟ್‌ನ ಚಿನ್ನವು ಪ್ರತಿ ಗ್ರಾಂಗೆ ಸುಮಾರು ಐದು ಸಾವಿರ ರೂ.ಗೂ ಹೆಚ್ಚು ಹೆಚ್ಚಳವಾಗಿದ್ದು, ಶೇ.50ರಷ್ಟು ಏರಿಕೆಯಾಗಿದೆ. ಜ. 23ರಿಂದ ನಿರಂತರ ಏರಿಕೆಯಾದ ಚಿನ್ನವು ಜ.29ರಂದು ಗರಿಷ್ಠ ದಾಖಲೆ ತಲುಪಿತ್ತು.
ಅಂದು 24 ಕ್ಯಾರೆಟ್‌ನ ಚಿನ್ನವು ಪ್ರತಿ ಗ್ರಾಂಗೆ 1,177 ರೂ. ನಷ್ಟು ಏರಿಕೆಯಾಗಿ ಗರಿಷ್ಠ ದರ ದಾಖಲಾಗಿತ್ತು. ಇದರಿಂದ ಜನರು ಸೋಜಿಗ ಪಡುವಂತಾಗಿತ್ತು. ಆದರೆ, ನಿನ್ನೆ 24 ಕ್ಯಾರೆಟ್‌ನ ಚಿನ್ನವು ಪ್ರತಿ ಗ್ರಾಂಗೆ 965 ರೂ. ನಷ್ಟು ಇಳಿಕೆಯಾಗಿತ್ತು. ಇಂದು ಕೂಡ ಇಳಿಕೆ ಮುಂದುವರೆದಿದೆ. ನಾಳೆ ಭಾನುವಾರವಾಗಿದ್ದು, ಸ್ಥಿರವಾಗಿರುವ ಸಾಧ್ಯತೆಗಳಿವೆ.
ಚಿನ್ನದಂತೆ ಬೆಳ್ಳಿಯು ಜ.24ರ ನಂತರ ಏರಿಕೆಯಾಗಿದೆ. ಅಂದು ಪ್ರತಿ ಕೆ.ಜಿ.ಗೆ ಐದು ಸಾವಿರ ರೂ. ಇಳಿಕೆಯಾಗಿ 3,35,000ರೂ.ನಷ್ಟಿತ್ತು. ಬಳಿಕ ನಿರಂತರ ಏರಿಕೆಯಾಗಿ ಜ.29ರಂದು 30 ಸಾವಿರ ರೂ. ಏರಿಕೆಯಾಗಿ 4,10,000 ರೂ.ಗೆ ತಲುಪಿತ್ತು.
ನಿನ್ನೆ ಪ್ರತಿ ಕೆ.ಜಿ.ಗೆ 15 ಸಾವಿರ ರೂ. ಹಾಗೂ ಇಂದು 45 ಸಾವಿರ ರೂ. ಕಡಿಮೆಯಾಗಿದ್ದು, ಎರಡು ದಿನಗಳಲ್ಲಿ ಒಟ್ಟು 60 ಸಾವಿರ ರೂ. ನಷ್ಟು ಕುಸಿತ ಕಂಡಿದೆ. ಕಳೆದ ಎರಡು ದಿನಗಳಿಂದ ಪ್ಲಾಟಿನಂ ದರದಲ್ಲೂ ಇಳಿಕೆಯಾಗಿದೆ.
ಚಿನಿವಾರ ಪೇಟೆಯಲ್ಲಿ ಚಿನ್ನ, ಬೆಳ್ಳಿ ದರಗಳಲ್ಲಿ ಏರಿಳಿಕೆ ಸಹಜವಾದರೂ ದೀರ್ಘಾವಧಿಯಲ್ಲಿ ಏರುಗತಿಯಲ್ಲೇ ಇರುವುದು ಕಂಡುಬಂದಿದೆ. ಜಾಗತಿಕ ವಿದ್ಯಮಾನಗಳಿಂದಾಗಿ ಹೂಡಿಕೆದಾರರು ಹೆಚ್ಚು ಈ ಲೋಹಗಳ ಮೇಲೆ ನಿರಂತರ ಹೂಡಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ದುಬಾರಿ ಹಾಗೂ ಗರಿಷ್ಠ ಮಟ್ಟಕ್ಕೆ ಚಿನ್ನ-ಬೆಳ್ಳಿ ಬೆಲೆಗಳು ಏರಿಕೆಯಾಗಿವೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
